ರೈತ ಸಂಘಟನೆಗಳಲ್ಲಿ ಮೂಡದ ಒಮ್ಮತ : ‘ಬಂದ್’ ಗೊಂದಲ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.23- ರೈತ  ಸಂಘಟನೆಗಳಲ್ಲಿ ಬಂದ್ ಮಾಡುವ  ಸಂಬಂಧ ಗೊಂದಲ ಏರ್ಪಟ್ಟಿದೆ. ಭೂಸುಧಾರಣಾ ತಿದ್ದುಪಡಿ ಕಾಯ್ದೆ, ವಿದ್ಯುತ್, ಎಪಿಎಂಸಿ ಕಾಯ್ದೆ ವಿರೋಧಿಸಿ ಇದೇ 25ರಂದು ಮಾಡಲು ಉದ್ದೇಶಿಸಿದ್ದ ಬಂದ್‍ನಿಂದ ಹಿಂದೆ ಸರಿದಿದ್ದ ರೈತ ಸಂಘಟನೆಗಳಲ್ಲಿ ಭಿನ್ನಧ್ವನಿ ಕೇಳಿಬಂದಿದೆ.

25ರಂದು ಬಂದ್ ಇಲ್ಲ; ಕೇವಲ ರಸ್ತೆ, ಹೆದ್ದಾರಿ ತಡೆಯಷ್ಟೇ ಎಂದು ಬೆಳಗ್ಗೆಯಷ್ಟೇ ರೈತ ಸಂಘದ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದ್ದರು.

ಇಂದು ಬೆಳಗ್ಗೆ ಬಡಗಲಪುರ ನಾಗೇಂದ್ರ ಅವರು ಸೆ.28ರಂದು ಕರ್ನಾಟಕ ಬಂದ್ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿರುವುದು ರೈತರಲ್ಲಿ ಗೊಂದಲ ಏರ್ಪಟ್ಟಿದೆ. ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲು ಉದ್ದೇಶಿಸಿರುವ ಕಾಯ್ದೆಗಳನ್ನು ವಿರೋಧಿಸಿ ರೈತ,  ಕಾರ್ಮಿಕ, ದಲಿತ ಸಂಘಟನೆಗಳು ನಿನ್ನೆಯಿಂದ ನಗರದ ಫ್ರೀಡಂ ಪಾರ್ಕ್‍ಬಳಿ ಅಹೋರಾತ್ರಿ ಧರಣಿ ನಡೆಸುತ್ತಿವೆ.

25ರಂದು ಕರ್ನಾಟಕ ಬಂದ್ ನಡೆಸಲಾಗುವುದು ಎಂಬ ಮಾತುಗಳು ಕೇಳಿಬಂದಿತ್ತು. ಇಂದು ಬೆಳಗ್ಗೆ ರೈತ ಮುಖಂಡರು ಸ್ಪಷ್ಟನೆ ನೀಡಿ ಕರ್ನಾಟಕ ಬಂದ್ ಮಾಡುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ಈ ಬೆನ್ನಲ್ಲೇ ಸೆ.28ರಂದು ಕರ್ನಾಟಕ ಬಂದ್ ಮಾಡುವುದಾಗಿ ನಾಗೇಂದ್ರ ಹೇಳಿರುವ ಮಾತಿಗೆ ಶಾಂತಕುಮಾರ್ ಮತ್ತು ಚಂದ್ರಶೇಖರ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕೋಡಿಹಳ್ಳಿ ಚಂದ್ರಶೇಖರ್ ಸರ್ಕಾರ ಮುಂದಿನ ನಡೆಯ ಮೇಲೆ ಬಂದ್ ಮಾಡಬೇಕೋ ಬೇಡವೋ ಎಂಬ ಬಗ್ಗೆ ಒಮ್ಮತದ ನಿರ್ಧಾರ ಮಾಡುತ್ತೇವೆ. ಸರ್ಕಾರ ಒಂದು ವೇಳೆ ವಿಧೇಯಕ ಮಂಡಿಸದಿದ್ದರೆ ಬಂದ್ ಮಾಡುವ ಪ್ರಶ್ನೆಯೇ ಬರುವುದಿಲ್ಲ ಎಂದು ಹೇಳಿದರು.

ಇದಕ್ಕೆ ವ್ಯತಿರಿಕ್ತವಾಗಿ ನಾಗೇಂದ್ರ ಅವರು; ಕೇವಲ ಒಂದು ವಿಧೇಯಕವನ್ನು ಮಾತ್ರ ವಿರೋಧಿಸುತ್ತಿಲ್ಲ; ಭೂಸುಧಾರಣೆ ತಿದ್ದುಪಡಿ ಸೇರಿದಂತೆ ಹಲವು ವಿಧೇಯಕಗಳು ಹಾಗೂ ಕೇಂದ್ರ ರೈತ ವಿರೋಧಿ ಧೋರಣೆ ಖಂಡಿಸಿ ಸೆ.28ಕ್ಕೆ ಬಂದ್ ಮಾಡುವುದು ಖಚಿತ ಎಂದು ಪುನರುಚ್ಛರಿಸಿರುವುದು ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ.

ಕುರುಬೂರು ಶಾಂತ ಕುಮಾರ್ ಮಾತನಾಡಿ, ನಾವು ಸ್ವಾರ್ಥಕ್ಕಾಗಿ ಹೋರಾಟ ಮಾಡುವುದಿಲ್ಲ. ರೈತರ ಹಿತಕ್ಕಾಗಿ ಹೋರಾಟ ಮಾಡುತ್ತೇವೆ. ಕೊರೋನಾ ಸಂಕಷ್ಟದಲ್ಲಿ ಜನ ಇರುವುದರಿಂದ ಬಂದ್ ಮಾಡುವುದು ಬೇಡ ಎಂದು ತೀರ್ಮಾನಿಸಿದ್ದೆವು. ಈಗ 28ಕ್ಕೆ ಬಂದ್ ಮಾಡಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. ನೀವು ಅವರನ್ನೇ ಕೇಳಬೇಕು ಎಂದರು.

ಒಟ್ಟಾರೆ ಮೂವರು ಮುಖಂಡರಿಂದ ಹಲವು ತೀರ್ಮಾನಗಳು ಹೊರಬಂದಿದ್ದು ಶುಕ್ರವಾರದ ಬಂದ್ ಸೋಮವಾರಕ್ಕೆ ಮುಂದೂಡಿಕೆಯಾಗಿದೆ. ಬಂದ್ ನಡೆಯುತ್ತದೆಯೋ ಇಲ್ಲವೋ ಎಂಬ ಗೊಂದಲ ಉಂಟುಮಾಡಿದೆ.

Facebook Comments