ನಾಳೆ ಬೆಂಗಳೂರಿನಲ್ಲಿ ಅನ್ನದಾತರ ಸಾಂಕೇತಿಕ ಧರಣಿ, ವಿವಿಧೆಡೆ ಹೆದ್ದಾರಿ ತಡೆ, ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.24- ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿ ಖಂಡಿಸಿ ಅನ್ನದಾತರ ಆಕ್ರೋಶ ಭುಗಿಲೆದ್ದಿದೆ. ನಾಳೆ ರೈತ ಸಂಘ, ಮಾನವ ಹಕ್ಕುಗಳ ಸಮಿತಿ ಸೇರಿ 9ಕ್ಕೂ ಹೆಚ್ಚು ಸಂಘಟನೆಗಳು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲು ಮುಂದಾದರೆ ಹಸಿರು ಸೇನೆ ವತಿಯಿಂದ ಮೈಸೂರು ಬ್ಯಾಂಕ್ ವೃತ್ತದ ಬಳಿ ಪ್ರತಿಭಟನೆ ನಡೆಸಲು ಸಜಾಗಿದೆ.

ರಾಷ್ಟ್ರೀಯ, ರಾಜ್ಯ ಹೆದ್ದಾರಿ ತಡೆ ನಡೆಸಲು ಗೊರಗುಂಟೆ ಪಾಳ್ಯದ ಬಳಿ ರೈತ ಸಂಘಟನೆ ಕಾರ್ಯಕರ್ತರು ಸಜ್ಜಾಗುವಂತೆ ಕರೆ ನೀಡಲಾಗಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಬಿಸಿ ಎದುರಾಗಲಿದೆ. ಭೂ ಸುಧಾರಣೆ ಕಾಯ್ದೆ, ವಿದ್ಯುತ್, ಎಪಿಎಂಸಿ ತಿದ್ದುಪಡಿ ಕಾಯ್ದೆಗಳ ಜಾರಿ ವಿರೋಧಿಸಿ ಕಳೆದ ಮೂರು ದಿನಗಳಿಂದ ರೈತ, ದಲಿತ, ಕಾರ್ಮಿಕ ಸಂಘಟನೆಗಳು ಫ್ರೀಡಂ ಪಾರ್ಕ್ ಬಳಿ ಅಹೋರಾತ್ರಿ ಧರಣಿ ನಡೆಸುತ್ತಿದ್ದು ಇದೇ 28ರಂದು ಕರ್ನಾಟಕ ಬಂದ್‍ಗೆ ಕರೆ ಕೊಟ್ಟಿವೆ.

ವಿವಿಧ ಸಂಘಟನೆಗಳು ನಾಳೆ ರಸ್ತೆ ತಡೆ ನಡೆಸಲು ಮುಂದಾಗಿರುವುದರಿಂದ ಪುಣೆ, ಬೆಂಗಳೂರು, ಬಳ್ಳಾರಿ ರಸ್ತೆ, ಕನಕಪುರ ರಸ್ತೆ, ಹೊಸೂರು ರಸ್ತೆ ಸೇರಿದಂತೆ ಎಲ್ಲಾ ರಸ್ತೆಗಳು ಬಂದ್ ಮಾಡಲು ಉದ್ದೇಶಿಸಿರುವ ಹಿನ್ನೆಲೆಯಲ್ಲಿ ನಗರದ ಜನತೆಗೆ ತೊಂದರೆಯಾಗಲಿದೆ. ನಾಳೆಯೇ ಕರ್ನಾಟಕ ಬಂದ್ ಮಾಡಬೇಕೆಂದು ನಿರ್ಧರಿಸಲಾಗಿತ್ತು. ಆದರೆ ರೈತ ಸಂಘಟನೆಗಳ ನಡುವೆ ಒಮ್ಮತ ಮೂಡದ ಹಿನ್ನೆಲೆಯಲ್ಲಿ 28ರಂದು ಬಂದ್ ಮಾಡಲು ನಿರ್ಧರಿಸಲಾಯಿತು.

25ರಂದು ಹೆದ್ದಾರಿ ಮತ್ತು ರಸ್ತೆ ತಡೆಯ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಬಿಸಿ ಮುಟ್ಟಿಸುವ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು. ಅದರಂತೆ ನಾಳೆ ಬೆಂಗಳೂರು ಎಲ್ಲಾ ಜಿಲ್ಲಾಮಟ್ಟದಲ್ಲಿ ಹೆದ್ದಾರಿಗಳನ್ನು ತಡೆದು ಪ್ರತಿಭಟನೆ ನಡೆಸಲು ರೈತ ಸಂಘ, ಮಾನವ ಹಕ್ಕುಗಳ ಸಮಿತಿ ಮುಂದಾಗಿದೆ.

ಈ ಕುರಿತು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರೈತ ವಿರೋಧಿ ಧೋರಣೆ ಖಂಡಿಸಿ ಸೆ.28ರಂದು ರಾಜ್ಯ ಬಂದ್ ಮಾಡಲು ನಿರ್ಧರಿಸಲಾಗಿದೆ. ನಾಳೆ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಲಾಗುವುದು. ಹಲವು ಸಂಘಟನೆಗಳು ರಸ್ತೆ ಬಂದ್ ಮಾಡುವ ಮೂಲಕ ಪ್ರತಿಭಟನೆ ಕೈಗೊಂಡಿವೆ.

ಅದಕ್ಕೆ ನಾವು ಸಹಕಾರ ನೀಡುತ್ತೇವೆ. ಅಹಿಂಸಾತ್ಮಕವಾಗಿ ಮತ್ತು ಶಾಂತಿಯುತವಾಗಿ ಪ್ರತಿಭಟನೆ ನಡೆಸಬೇಕು ಎಂಬ ಉದ್ದೇಶ ನಮ್ಮದು ಎಂದರು. ಹೆದ್ದಾರಿ ಬಂದ್ ಮಾಡಿದರೆ ಅರ್ಧ ರಾಜ್ಯ ಬಂದ್ ಮಾಡಿದಂತಾಗುತ್ತದೆ. ಅದಕ್ಕಾಗಿ ನಾವು ಸಾಂಕೇತಿಕವಾಗಿ ಮೈಸೂರು ಬ್ಯಾಂಕ್ ವೃತ್ತದ ಬಳಿ ಪ್ರತಿಭಟನೆ ನಡೆಸುತ್ತೇವೆ. ಬೇರೆ ಸಂಘಟನೆಯವರು ನಡೆಸುವ ರಸ್ತೆ ಬಂದ್‍ಗೆ ಬೆಂಬಲವನ್ನು ನೀಡುತ್ತೇವೆ ಎಂದು ಸ್ಪಷ್ಟಪಡಿಸಿದರು.

ರಾಜ್ಯ ಸರ್ಕಾರ ತರಲು ಹೊರಟಿರುವ ಕೃಷಿ ಮಸೂದೆಗೆ ತೀವ್ರವಾಗಿ ಖಂಡಿಸಿದ ಅವರು, ಬಿಎಸ್‍ವೈ ಇರುವವರೆಗೂ ರೈತರಿಗೆ ತೊಂದರೆಯಾಗುವುದಿಲ್ಲ ಎಂದು ಹೇಳುತ್ತಿದ್ದರು. ಈಗ ಮಂಡನೆ ಮಾಡುತ್ತಿರುವ ಮಸೂದೆಯಿಂದ ರೈತರ ಸ್ವಾತಂತ್ರ್ಯ ಹೆಚ್ಚಾಯಿತೇ? ಬಿ.ಸಿ.ಪಾಟೀಲ್, ಎಸ್.ಟಿ.ಸೋಮಶೇಖರ್, ಸಿ.ಟಿ ರವಿ ಅವರು ಈ ಬಿಲ್‍ಗಳನ್ನು ಸಮರ್ಥಿಸಿಕೊಳ್ಳಲು ಮುಂದಾಗಿದ್ದಾರೆ.

ರೈತರ ಮರಣ ಶಾಸನದ ಈ ಬಿಲ್‍ಗಳನ್ನು ಯಾವ ಕಾರಣಕ್ಕೆ ಜÁರಿ ಮಾಡುತ್ತಿದ್ದೀರಾ? ನಂಜುಂಡಸ್ವಾಮಿಯವರ ಸಿದ್ಧಾಂತದ ತಪ್ಪು ಮಾಹಿತಿ ನೀಡುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ನಾಳೆ ಹೆದ್ದಾರಿ ತಡೆ ನಡೆಸಲು ಈಗಾಗಲೇ ತೀರ್ಮಾನಿಸಲಾಗಿದ್ದು, ಜಿಲ್ಲಾ ಮಟ್ಟದಲ್ಲಿ ಎಲ್ಲಾ ಸಂಘಟನೆಗಳು ಸಜ್ಜಾಗಿವೆ. ಹೀಗಾಗಿ ನಾಳಿನ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.

Facebook Comments