ಮಂಡ್ಯದಲ್ಲಿ ಸಾಲಕ್ಕೆ ಹೆದರಿ ಮತ್ತೊಬ್ಬ ರೈತ ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

ಮದ್ದೂರು, ಜು.30- ಸಾಲಬಾಧೆಯಿಂದ ಮನನೊಂದ ರೈತರೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆ.ಆರ್.ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕೃಷ್ಣರಾಜಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಆಲೇನಹಳ್ಳಿ ಗ್ರಾಮದ ರಾಜೇಗೌಡ (60) ಆತ್ಮಹತ್ಯೆ ಮಾಡಿಕೊಂಡಿರುವ ರೈತ.

ಇವರು ಜಮೀನು ಹೊಂದಿದ್ದು, ಬೆಳೆಗಾಗಿ ಕಾವೇರಿ ಗ್ರಾಮೀಣ ಬ್ಯಾಂಕ್‍ನಲ್ಲಿ 3 ಲಕ್ಷ ರೂ. ಸಾಲ ಹಾಗೂ 2 ಲಕ್ಷ ರೂ. ಕೈ ಸಾಲ ಮಾಡಿ ಬೇಸಾಯ ಮಾಡಿದ್ದರು.
ಇವರ ಜಮೀನಿನಲ್ಲಿ ಹಾಕಿಸಿದ್ದ ಬೋರ್‍ವೆಲ್‍ನಲ್ಲಿ ನೀರು ಬತ್ತಿಹೋಗಿ ಬೆಳೆ ಒಣಗಿದ ಹಿನ್ನೆಲೆಯಲ್ಲಿ ಸಾಲ ತೀರಿಸಲು ಸಾಧ್ಯವಾಗದೆ ಮನನೊಂದು ನಿನ್ನೆ ಸಂಜೆ ಜಮೀನಿಗೆ ಹೋಗಿ ವಿಷ ಸೇವಿಸಿದ್ದಾರೆ.

ಇವರು ಒದ್ದಾಡುತ್ತಿದುದ್ದನ್ನು ಗಮನಿಸಿದ ಅಕ್ಕಪಕ್ಕದ ಜಮೀನಿನವರು ತಕ್ಷಣ ರಾಜೇಗೌಡರನ್ನು ಕೆ.ಆರ್.ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾರೆ. ಘಟನೆ ಬಗ್ಗೆ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

ಪರಿಹಾರಕ್ಕೆ ಮನವಿ: ಕುಟುಂಬಕ್ಕೆ ಆಧಾರವಾಗಿದ್ದ ರಾಜೇಗೌಡರನ್ನು ಕಳೆದುಕೊಂಡ ಕುಟುಂಬ ಈಗ ಅನಾಥವಾಗಿದ್ದು, ರಾಜ್ಯ ಸರ್ಕಾರ ಈ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಗ್ರಾಮದ ಮುಖಂಡ ಹಾಗೂ ಎಪಿಬಿಎಂಸಿ ಮಾಜಿ ಅಧ್ಯಕ್ಷ ಆಲೇನಹಳ್ಳಿ ಮಹೇಶ್ ಮನವಿ ಮಾಡಿದ್ದಾರೆ.

Facebook Comments