ಸಾಲಬಾಧೆಯಿಂದ ಬೇಸತ್ತಿದ್ದ ರೈತ ನೇಣು ಬಿಗಿದುಕೊಂಡು ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

ಮಂಡ್ಯ, ನ.11- ಸಾಲಬಾಧೆಯಿಂದ ಬೇಸತ್ತಿದ್ದ ರೈತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆಆರ್ ಪೇಟೆ ತಾಲ್ಲೂಕಿನ ದೊಡ್ಡಸೋಮನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತ ರೈತನನ್ನು ಭದ್ರೇಗೌಡ (48) ಎಂದು ಗುರುತಿಸಲಾಗಿದ್ದು, ಕುಟುಂಬಸ್ಥರ ರೋದನೆ ಮುಗಿಲು ಮುಟ್ಟಿದೆ.

ಎರಡೂವರೆ ಎಕರೆ ಜಮೀನು ಹೊಂದಿದ್ದ ಭದ್ರೇಗೌಡ ಅವರು ರಾಗಿ ಹಾಗೂ ದ್ವಿದಳ ಧಾನ್ಯ ಬೆಳೆ ಬೆಳೆಯುತ್ತಿದ್ದರು. ಇತ್ತೀಚೆಗೆ ನೀರಿನ ಅಭಾವದಿಂದಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಒಂದೂವರೆ ಲಕ್ಷ ಬೆಳೆಸಾಲ ಹಾಗೂ ಅಗಲಯ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 80 ಸಾವಿರ ರೂ. ಸಾಲ ಮಾಡಿದ್ದರು. ಇದಲ್ಲದೆ, ಹಲವರ ಬಳಿ ಸುಮಾರು 2 ಲಕ್ಷಕ್ಕೂ ಹೆಚ್ಚು ಕೈಸಾಲ ಮಾಡಿಕೊಂಡಿದ್ದರು ಎಂದು ಹೇಳಲಾಗಿದೆ.

ಕೊಳವೆಬಾವಿಯಲ್ಲಿ ನೀರು ಸಿಗದ ಹಿನ್ನೆಲೆಯಲ್ಲಿ ನೊಂದಿದ್ದರು. ಈ ವೇಳೆ ಬೆಳೆಯೂ ಕೂಡ ಕೈಕೊಟ್ಟಿತ್ತು. ಇದರಿಂದ ಸಾಲ ತೀರಿಸುವುದು ಹೇಗೆ ಎಂಬ ಚಿಂತೆಯಲ್ಲಿ ಮುಳುಗಿದ್ದರು.
ಕಳೆದ ರಾತ್ರಿ ಅವರ ಜಮೀನಿನಲ್ಲಿರುವ ಪಂಪ್‍ಸೆಟ್ ಹೌಸ್‍ನಲ್ಲಿ ನೇಣು ಬಿಗಿದುಕೊಂಡು ಭದ್ರೇಗೌಡ ಆತ್ಮಹತ್ಯೆ ಮಾಡಿಕೊಂಡಿದ್ದು, ಕುಟುಂಬದವರು ಅವರು ಮನೆಗೆ ಬರದೆ ಇರುವುದರಿಂದ ಹುಡುಕಾಟ ನಡೆಸಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.

ಮೃತ ರೈತನಿಗೆ ವೃದ್ಧ ತಾಯಿ, ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಇಡೀ ಗ್ರಾಮವೇ ಈಗ ಶೋಕದಲ್ಲಿ ಮುಳುಗಿದೆ. ಘಟನಾ ಸ್ಥಳಕ್ಕೆ ಗ್ರಾಪಂ ಅಧ್ಯಕ್ಷ ಧನಂಜಯ, ಅಗಲಯ್ಯ ಸೊಸೈಟಿಯ ಅಧ್ಯಕ್ಷ ಕುಮಾರ್, ಟಿ.ಎಸ್.ನಾಗೇಂದ್ರ ಸೇರಿದಂತೆ ಹಲವು ಜನಪ್ರತಿನಿಧಿಗಳು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ನೆರವಿನ ಭರವಸೆ ನೀಡಿದ್ದಾರೆ.

Facebook Comments