ಕಟಾವು ಯಂತ್ರ ಸಿಗದೆ ಪರದಾಡುತ್ತಿರುವ ರೈತರು

ಈ ಸುದ್ದಿಯನ್ನು ಶೇರ್ ಮಾಡಿ

ನಂಜನಗೂಡು, ಜ.3- ಭತ್ತದ ಬೆಳೆ ಕಟಾವಿಗೆ ಕೂಲಿ ಕಾರ್ಮಿಕರು ಹಾಗೂ ಕಟಾವು ಯಂತ್ರ ಸಿಗದೆ ಸ್ಥಳೀಯ ರೈತರು ಕಂಗಾಲಾಗಿದ್ದಾರೆ. ತಾಲ್ಲೂಕಿನ ಕೆಂಪಿಸಿದ್ದನ ಹುಂಡಿ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಭತ್ತದ ಬೆಳೆ ಕಟಾವಿಗೆ ಬಂದಿದ್ದು, ಭತ್ತವನ್ನು ಕಟಾವು ಮಾಡಲು ಯಂತ್ರ ಸೇರಿದಂತೆ ಕೂಲಿ ಕಾರ್ಮಿಕರು ದೊರೆಯದೆ ಇರುವುದರಿಂದ ಭತ್ತದ ಕಟಾವು ಮಾಡಲು ಯಂತ್ರವನ್ನೇ ನಂಬಿರುವ ರೈತರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ತಾಲ್ಲೂಕಿನಲ್ಲಿ ಹಲವಾರು ಗ್ರಾಮಗಳಲ್ಲಿ ಕಟಾವು ಯಂತ್ರ ಸಿಗದ ಹಿನ್ನೆಲೆಯಲ್ಲಿ ಭತ್ತದ ಬೆಳೆ ಚೆನ್ನಾಗಿ ಒಣಗಿ ಗೊನೆಯೆಲ್ಲಾ ಭೂಮಿಗೆ ಉದುರುವ ಹಂತಕ್ಕೆ ಬಂದಿದೆ. ಹೀಗಾಗಿ ಕೈಗೆ ಬಂದ ತುತ್ತು ಬಾಯಿಗೆ ಸಿಗದಂತಾಗಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ಈಗಲಾದರೂ ಸಂಬಂಧಪಟ್ಟಂತಹ ಅಧಿಕಾರಿಗಳು ಇತ್ತ ಗಮನ ಹರಿಸಿ ಕಟಾವು ಮಾಡದ ಭತ್ತದ ಬೆಳೆ ಬೆಳೆದಿರುವ ರೈತರಿಗೆ ಭತ್ತ ಕಟಾವು ಮಾಡುವ ಯಂತ್ರಗಳನ್ನು ಒದಗಿಸಿಕೊಡುವ ಮೂಲಕ ರೈತರಿಗೆ ನೆರವಾಗಬೇಕೆಂದು ಈ ಭಾಗದ ರೈತ ಮುಖಂಡರು ಹಾಗೂ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಂಜಯ್ಯ ಸೇರಿದಂತೆ ಮತ್ತಿತರರು ಒತ್ತಾಯ ಮಾಡಿದರು.

Facebook Comments