ಭಾರತ್ ಬಂದ್‍ಗೆ ಪಂಜಾಬ್, ಹರ್ಯಾಣದಲ್ಲಿ ಭಾರೀ ಬೆಂಬಲ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಸೆ.27- ಕೇಂದ್ರ ಸರ್ಕಾರದ ಮೂರು ಕೃಷಿ ಕಾನೂನು ತಿದ್ದುಪಡಿಗಳನ್ನು ವಿರೋಧಿಸಿ ರೈತ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್‍ಗೆ ಪಂಜಾಬ್, ಹರ್ಯಾಣದಲ್ಲಿ ಭಾರೀ ಬೆಂಬಲ ವ್ಯಕ್ತವಾಗಿದ್ದು, ಉಳಿದಂತೆ ಆಂಧ್ರ ಪ್ರದೇಶ, ಕರ್ನಾಟಕ, ಉತ್ತರ ಪ್ರದೇಶ, ಬಿಹಾರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಮಿಶ್ರ ಪ್ರತಿಕ್ರಿಯೆ ಕಂಡು ಬಂದಿದೆ.

ಕಳೆದ ವರ್ಷ ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿದ್ದ ಎಪಿಎಂಸಿ ಸೇರಿದಂತೆ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ, ಸಂಯುಕ್ತ ಕಿಸಾನ್ ಮೋರ್ಚಾ ಅಖಿಲ ಭಾರತ್ ಬಂದ್‍ಗೆ ಕರೆ ನೀಡಿದೆ. ಸುಮಾರು 40ಕ್ಕೂ ಹೆಚ್ಚು ರೈತ ಸಂಘಟನೆಗಳು ಬಂದ್‍ಗೆ ಬೆಂಬಲ ವ್ಯಕ್ತಪಡಿಸಿವೆ. ಜೊತೆಗೆ ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ಬಿಎಸ್‍ಪಿ, ಅಮ್‍ಆದ್ಮಿ, ಸಮಾಜವಾದಿ ಪಕ್ಷ, ತೆಲುಗುದೇಶಂ, ಆರ್‍ಜೆಡಿ, ಸಿಪಿಐ-ಎಂ, ಸಿಪಿಐ ಸೇರಿದಂತೆ ಎಡಪಕ್ಷಗಳು, ಸ್ವರಾಜ್ ಇಂಡಿಯಾ ಒಳಗೊಂಡು ಹಲವಾರು ಪಕ್ಷಗಳು ಬಂದ್‍ಗೆ ಬೆಂಬಲ ವ್ಯಕ್ತ ಪಡಿಸಿದ್ದವು.

ರೈತ ಸಂಘಟನೆಗಳ ಜೊತೆಗೆ ಕಾರ್ಮಿಕ ಸಂಘಟನೆಗಳು ಬಂದ್‍ಗೆ ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆಗೆ ಕೈಜೋಡಿಸಿದ್ದವು. ಕೇಂದ್ರ ಸರ್ಕಾರದ ಒಕ್ಕೂಟವಾಗಿರುವ ಎನ್‍ಡಿಎನಲ್ಲಿ ಇರುವ ಹಲವಾರು ಮಿತ್ರಪಕ್ಷಗಳು ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದವು. ಬೆಳಗ್ಗೆ ಆರು ಗಂಟೆಯಿಂದ ಸಂಜೆ ನಾಲ್ಕು ಗಂಟೆವರೆಗೂ ದಿನದ ಹತ್ತು ಗಂಟೆ ಕಾಲ ಹರತಾಳ ನಡೆದಿದೆ. ಕಳೆದ ವರ್ಷ ಸೆಪ್ಟಂಬರ್ 27ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮೂರು ತಿದ್ದುಪಡಿ ಮಸೂದೆಗಳಿಗೆ ಸಹಿ ಹಾಕಿದ್ದರು. ಅದರ ಅಂಗವಾಗಿ ಇಂದು ಭಾರತ್ ಬಂದ್‍ಗೆ ಕರೆ ನೀಡಲಾಗಿದೆ.

ಇಂದು ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ರೈತ ನಾಯಕ ರಾಕೇಶ್ ಟಿಕಾಯತ್, ಆಂಬ್ಯುಲೆನ್ಸ್, ವೈದ್ಯರ ವಾಹನಗಳು ಹಾಗೂ ಜೀವನಾವಶ್ಯಕವಾಗದ ಅಗತ್ಯ ಸೇವೆಗಳ ಸಾಗಾಣಿಕೆಗೆ ಮಾತ್ರ ಅವಕಾಶ ನೀಡಲಾಗುವುದು. ಉಳಿದ ವಾಹನಗಳ ಸಂಚಾರ ಸ್ಥಗಿತಗೊಳ್ಳಲಿದೆ. ವ್ಯಾಪಾರಸ್ಥರು ಸ್ವಯಂ ಪ್ರೇರಿತವಾಗಿ ಅಂಗಡಿಗಳನ್ನು ಸಂಜೆ ನಾಲ್ಕು ಗಂಟೆವರೆಗೆ ಮುಚ್ಚಿರಬೇಕು ಎಂದು ಕರೆ ನೀಡಿದ್ದಾರೆ. ದೆಹಲಿಯಲ್ಲಿ ಪ್ರತಿಭಟನಾ ಸ್ಥಳ ಬಿಟ್ಟು ಯಾವ ರೈತರು ಹೊರಗೆ ಬರುವುದಿಲ್ಲ. ಬಂದ್ ಮತ್ತು ಪ್ರತಿಭಟನೆಗಳು ಶಾಂತಿಯುತವಾಗಿ ನಡೆಯಲಿವೆ ಎಂದು ತಿಳಿಸಿದ್ದಾರೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರೈತರು ಕಳೆದ ಹತ್ತು ತಿಂಗಳಿನಿಂದ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇಂದು ಭಾರತ್ ಬಂದ್ ಪ್ರಯುಕ್ತ ದೆಹಲಿಯಲ್ಲಿ ಪ್ರಮುಖ ಹೆದ್ದಾರಿಗಳನ್ನು ತಡೆದು ರೈತರು ಪ್ರತಿಭಟನೆ ನಡೆಸಿದರು. ಇದರಿಂದ ದೆಹಲಿಯ ಹೆದ್ಧಾರಿಗಳಲ್ಲಿ ಸಂಚಾರ ವ್ಯತ್ಯಯವಾಗಿತ್ತು. ಕಿಲೋ ಮೀಟರ್‍ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿದ್ದವು.

ಕಳೆದ ಬಾರಿ ಗಣರಾಜ್ಯೋತ್ಸವದ ಸಂದರ್ಭದಲ್ಲಿ ರೈತರು ಚಳವಳಿ ನಡೆಸಿದಾಗ ಹಿಂಸಾಚಾರ, ಅಹಿತಕರ ಘಟನೆಗಳು ನಡೆದಿದ್ದವು. ಅದಕ್ಕಾಗಿ ಈ ಭಾರಿ ಪೊಲೀಸರು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದರು. ರೈತರ ಪ್ರತಿಭಟನಾ ಸ್ಥಳದಲ್ಲಿ ಹಾಗೂ ಗಡಿಭಾಗಗಳಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು.

ಆದರೂ ಉತ್ತರ ಪ್ರದೇಶದ ಘಾಜಿಯಾಬಾದ್ ಮಾರ್ಗ ಬಂದ್ ಆಗಿತ್ತು. ದೆಹಲಿ ಅಮೃತ್‍ಸರ್ ಹೆದ್ದಾರಿಯನ್ನು ಹರ್ಯಾಯಣದ ಕುರೇಕ್ಷೇತ್ರದ ಶಹಬಾದ್ ಬಳಿ ತಡೆದು ಸಂಚಾರಕ್ಕೆ ಅಡಚಣೆ ಮಾಡಲಾಗಿತ್ತು. ಗುರಗಾಂವ್‍ನಲ್ಲೂ ವಾಹನ ಸವಾರರು ಪರದಾಡಿದರು. ಪಂಜಾಬ್-ಹರ್ಯಾಣದ ಗಡಿ ಶಂಭು ಗಡಿಯಲ್ಲಿ ಸಂಜೆ ನಾಲ್ಕು ಗಂಟೆವರೆಗೂ ಸಂಚಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ರೈತರು ಸ್ಪಷ್ಟ ಪಡಿಸಿದ್ದಾರೆ.

ಮುಂಜಾಗೃತೆಯಾಗಿ ನೇತಾಜಿ ಶುಭಾಷ್ ಚಂದ್ರ ಮಾರ್ಗ, ಸೇರಿದಂತೆ ಅನೇಕ ಭಾಗಗಳಲ್ಲಿ ಸಂಚಾರದ ಮಾರ್ಗ ಬದಲಾವಣೆ ಮಾಡಲಾಗಿದೆ. ಪಂಜಾಬ್‍ನಲ್ಲಿ ರೈತರು ಪತೇಬಾದ್ ಮತ್ತು ಕುರುಕ್ಷೇತ್ರ, ಮೋಗಾ-ಫಿರೋಜೆಪುರ್, ಮೊಗಾ-ಲೂದಿಯಾನ ಹೆದ್ದಾರಿಗಳನ್ನು ಬಂದ್ ಮಾಡಲಾಗಿತ್ತು. ಬಥಿಂದ-ಚಂಡಿಗಡ್ ಹೆದ್ದಾರಿಯಲ್ಲೂ ತಡೆ ನಿರ್ಮಿಸಲಾಗಿತ್ತು. ರೈತರ ಬೇಡಿಕೆಗಳಿಗೆ ಬೆಂಬಲ ವ್ಯಕ್ತ ಪಡಿಸಿರುವ ಪಂಜಾಬ್‍ನ ಮುಖ್ಯಮಂತ್ರಿ ಚರಣ್‍ಜಿತ್ ಸಿಂಗ್ ಚನ್ನಿ ಕೇಂದ್ರ ಸರ್ಕಾರ ತಿದ್ದುಪಡಿ ಕಾನೂನುಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ಆಂಧ್ರ ಪ್ರದೇಶದ ವಿಜಯವಾಡದ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆದಿದೆ. ಎನ್‍ಡಿಎ ಮಿತ್ರ ಪಕ್ಷವಾಗಿರುವ ಆರ್‍ಜೆಡಿ ಬಿಹಾರದಲ್ಲಿ ಭಾರತ್ ಬಂದ್ ಪ್ರಯುಕ್ತ ಪ್ರತಿಭಟನೆ ನಡೆಸಿದೆ. ಆರ್‍ಜೆಡಿ ನಾಯಕ ಮುಖೇಶ್ ರೋಷನ್ ಮತ್ತು ಇತರ ಕಾರ್ಯಕರ್ತರು ಹಜಿಪುರ್‍ನಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಹರ್ಯಾಣದ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಹಳಿಗಳ ಮೇಲೆ ಕುಳಿತು ಪ್ರತಿಭಟನೆ ನಡೆಸಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಲಾಗಿದೆ. ಬಹದುರ್ಗಹದ ವಕೀಲರ ಸಂಘವೂ ರೈತರಿಗೆ ಬೆಂಬಲ ಸೂಚಿಸಿದ್ದು, ಇಂದು ಕಲಾಪ ಬಹಿಷ್ಕರಿಸಿದೆ.

Facebook Comments