ಕೈಗೆ ಬಂದ ಬೆಳೆ ಬಾಯಿಗೆ ಬರದಂತಾಯಿತು, ಮೂರಾಬಟ್ಟೆಯಾದ ರೈತರ ಬದುಕು

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಡಿ.3- ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಹ ಸ್ಥಿತಿ ಜಿಲ್ಲೆಯ ರೈತರಿಗೆ ಎದುರಾಗಿದೆ. ಜಿಲ್ಲೆಯ ಲಕ್ಷಾಂತರ ರೈತರು ಕಷ್ಟಪಟ್ಟು ರಾಗಿ ಬಿತ್ತನೆ ಮಾಡಿದ್ದು, ಈ ಬಾರಿ ಉತ್ತಮ ಬೆಳೆ ಬರುತ್ತದೆ, ನಾವು ಮಾಡಿದ ಸಾಲ ತೀರಿಸಬಹುದು, ಜಾನುವಾರುಗಳಿಗೆ ಮೇವು ಸಿಗುತ್ತದೆ ಎಂಬೆಲ್ಲಾ ಕನಸು ಕಾಣುತ್ತಿದ್ದ ರೈತನಿಗೀಗ ಬರಸಿಡಿಲು ಬಡಿದಂತಾಗಿದೆ.

ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ತುಮಕೂರಿಗೂ ವ್ಯಾಪಿಸಿದ್ದು, ರಾಗಿ ಬೆಳೆ ನೆಲ ಕಚ್ಚುವ ಆತಂಕ ಶುರುವಾಗಿದೆ. ಶನಿವಾರ ರಾತ್ರಿಯಿಂದಲೇ ಜಿಲ್ಲೆಯ ವಿವಿಧ ಭಾಗಗಳಲ್ಲಿ ಮಳೆಯಾಗಿದ್ದು, ಕಟಾವು ಹಂತದಲ್ಲಿದ್ದ ರಾಗಿ ಫಸಲು ನೆಲಕ್ಕುರುಳಿದರೆ, ಕಟಾವು ಮಾಡಿರುವ ರೈತರು ಹೊಲದಲ್ಲಿರುವ ಫಸಲು ಎತ್ತಿಕೊಳ್ಳಲಾಗದೆ ಅತಂತ್ರ ಸ್ಥಿತಿಗೆ ಸಿಲುಕಿದ್ದಾರೆ.

ಜಿಲ್ಲೆಯಾದ್ಯಂತ ಬೀಳುತ್ತಿರುವ ಮಳೆಯಿಂದಾಗಿ ಈಗ ರೈತರ ಬದುಕು ಮೂರಾಬಟ್ಟೆಯಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರುವಷ್ಟರಲ್ಲೇ ಮಳೆಗೆ ಬೆಳೆದ ರಾಗಿ, ಜೋಳ, ಶೇಂಗಾ ಮತ್ತಿತರ ಧಾನ್ಯಗಳು ಕೈಸೇರುವ ಮುನ್ನವೇ ನೆಲ ಕಚ್ಚುತ್ತಿವೆ.

ಈ ಬಾರಿ ಉತ್ತಮ ಮಳೆಯಾಗಿ ಒಳ್ಳೆಯ ಫಸಲು ಕೈ ಸೇರುವುದೆಂಬ ನಿರೀಕ್ಷೆಯಲ್ಲಿದ್ದ ರೈತರ ಮುಖದಲ್ಲಿ ಈಗ ಕಾರ್ಮೋಡ ಆವರಿಸಿದೆ. ಮಂದಹಾಸ ಮೂಡಬೇಕಿದ್ದ ರೈತರ ಮುಖದಲ್ಲಿ ದುಃಖದ ಛಾಯೆ ಆವರಿಸಿದೆ. ಭರಣಿ ಮಳೆಗೆ ಬಿತ್ತನೆ ಮಾಡಿರುವ ರೈತರು ಈಗಾಗಲೇ ಹೊಲಗಳನ್ನು ಕಟಾವು ಮಾಡಿ ದವಸ ಧಾನ್ಯ ಮಾಡಿಕೊಂಡು ನೆಮ್ಮದಿಯಿಂದಿದ್ದಾರೆ.

ಕೆಲವು ಕಡೆ ಕಳೆದ 15 ದಿನಗಳಿಂದಲೂ ರಾಗಿ ಬೆಳೆ ಕಟಾವಿನಲ್ಲಿ ರೈತರು ನಿರತರಾಗಿದ್ದು, ಬಣವೆಗಳನ್ನು ಹಾಕಿಕೊಂಡಿದ್ದಾರೆ. ಹೊಲದಿಂದ ಕಟಾವು ಮಾಡಿ ಬಣವೆ ಮಾಡಿಕೊಂಡಿರುವ ರೈತರು ನೆಮ್ಮದಿಯಿಂದಿದ್ದರೆ, ಈಗ ತಾನೇ ಕಟಾವಿಗೆ ಬಂದಿರುವ ರಾಗಿ ತೆನೆಯನ್ನು ಕಟ್ಟು ಮಾಡುವ ಮೂದಲೆ ಮುರಿದು ಬಿದ್ದಿದೆ. ಇದರಿಂದ ರೈತರು ಮುಂದೇನು ಮಾಡಬೇಕೆಂದು ತೋಚದೆ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ.

ಪ್ಲಾಸ್ಟಿಕ್, ಟಾರ್‍ಪಾಲ್ ಹೊದಿಕೆಗಲಿಗೆ ಇದೇ ವೇಳೆ ದುಬಾರಿಯಾಗಿದ್ದು, ರೈತರು ಇವುಗಳನ್ನು ಕೊಂಡು ಬೆಳೆ ರಕ್ಷಿಸಿಕೊಳ್ಳುವ ಅನ್ನುವುದಕ್ಕೂ ಸಾಧ್ಯವಾಗಿದೆ. ದುಬಾರಿ ಬೆಲೆ ತೆತ್ತು ಎಲ್ಲರೂ ಇದನ್ನು ಹೊಂದಲು ಸಾಧ್ಯವಾಗಿಲ್ಲ. ಈಗ ಎಲ್ಲರಿಗೂ ಬೇಕಿರುವುದರಿಂದ ಇದರ ಬೆಲೆಯೂ ಹೆಚ್ಚಳವಾಗಿದೆ  ತಿಪಟೂರು, ಚಿಕ್ಕನಾಯಕನಹಳ್ಳಿ, ತುರುವೇಕೆರೆ, ಗುಬ್ಬಿ, ಕೊರಟಗೆರೆ, ತುಮಕೂರು, ಕುಣಿಗಲ ತಾಲ್ಲೂಕು ಗಳ ಭಾಗಗಳಲ್ಲಿ ಹೆಚ್ಚು ರಾಗಿ ಬೆಳೆಯಲಾಗುತ್ತಿದೆ.

ಮುಖ್ಯವಾಗಿ ಚಿಕ್ಕನಾಯಕನಹಳ್ಳಿ, ತಿಪಟೂರು, ಗುಬ್ಬಿ ಭಾಗಗಳಲ್ಲಿ ಇದನ್ನು ಪ್ರಮುಖ ಬೆಳೆಯಾಗಿ ಹೊಲದ ತುಂಬೆಲ್ಲಾ ಭರ್ಜರಿಯಾಗಿ ಬೆಳೆಯಲಾಗುತ್ತದೆ. ಈಗ ಈ ಬೆಳೆ ನೆಲ ಕಚ್ಚಿದ್ದು, ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳು ತಕ್ಷಣವೇ ರೈತರ ನೆರವಿಗೆ ಧಾವಿಸುವಂತೆ ರೈತ ಸಂಘದ ಮುಖಂಡರು ಒತ್ತಾಯಿಸಿದ್ದಾರೆ.

Facebook Comments