ಮಣ್ಣಿನ ಮಕ್ಕಳ ಶ್ರಮ ಸಾರುವ ‘ರೈತರ ದಿನ’

ಈ ಸುದ್ದಿಯನ್ನು ಶೇರ್ ಮಾಡಿ

ಒಂದೊಂದು ಅಕ್ಕಿಯ ಕಾಳಿನಲ್ಲೂ ತಿನ್ನೋರ ಹೆಸರು ಕೆತ್ತಿಹುದು… ಆ ಕಾಳಿನ ಹಿಂದೆ ಅದೆಷ್ಟು ಅನ್ನದಾತನ ಶ್ರಮವಿದೆಯೋ… ದೇಶದ ಬೆನ್ನೆಲುಬು ರೈತ. ಆತನಿಲ್ಲದ ಜಗತ್ತನ್ನು ಕಲ್ಪಿಸಲು ಅಸಾಧ್ಯ. ನಾವು ದಿನನಿತ್ಯ ಸೇವಿಸುವ ಆಹಾರದ ಹಿಂದೆ ರೈತನ ಶ್ರಮ ಅಡಗಿರುತ್ತದೆ. ಆದರೆ ಅವನ ಶ್ರಮ ಮಾತ್ರ ತೆರೆಮರೆಯಲ್ಲಿರುತ್ತದೆ. ಅದು ನಮಗ್ಯಾರಿಗೂ ಕಾಣುವುದೇ ಇಲ್ಲ.

ಮುಂಜಾನೆ ಎದ್ದು ಸೇವಿಸುವ ಕ್ಷೀರದಿಂದ ಹಿಡಿದು ತರಕಾರಿ, ಅಕ್ಕಿ, ಕಾಳು ಸೇರಿದಂತೆ ಮತ್ತಿತರ ಆಹಾರ ಉತ್ಪನ್ನಗಳು ಬರುವುದು ಅನ್ನದಾತನಿಂದ. ಸೈನಿಕರು ಗಡಿಕಾಯ್ದು ದೇಶರಕ್ಷಿಸಿದರೆ ಅನ್ನದಾತರು ಹೊಲ ಕಾಯ್ದು ನಮ್ಮ ಉದರ ತುಂಬಿಸುತ್ತಾರೆ. ಆದರೆ, ಅವರ ಶ್ರಮ ಮಾತ್ರ ಯಾರಿಗೂ ಕಾಣುವುದಿಲ್ಲ.  ರೈತರನ್ನು ಗೌರವಿಸುವುದಕ್ಕಾಗಿಯೇ ಇಂದು (ಡಿಸೆಂಬರ್ 23) ದೇಶದೆಲ್ಲೆಡೆ ರಾಷ್ಟ್ರೀಯ ರೈತರ ದಿನ ಅಥವಾ ಕಿಸಾನ್ ದಿನವನ್ನಾಗಿ ಆಚರಿಸಲಾಗುತ್ತಿದೆ.

ರೈತ ದಿನದ ಆಯ್ಕೆಯ ಹಿಂದೆ ಮತ್ತೊಂದು ಕಾರಣವೂ ಇದೆ. ರೈತ ನಾಯಕ ಹಾಗೂ ಮಾಜಿ ಪ್ರಧಾನಿ ದಿ.ಚೌಧರಿ ಚರಣ್‍ಸಿಂಗ್ ಅವರ ಹುಟ್ಟಿದ ದಿನವೂ ಹೌದು. ಹಾಗಾಗಿ ಅವರ ಸ್ಮರಣಾರ್ಥವಾಗಿ ಈ ದಿನವನ್ನು ರಾಷ್ಟ್ರೀಯ ರೈತ ದಿನವನ್ನಾಗಿ ಆಚರಿಸಲಾಗುತ್ತಿದೆ. ವರುಣನ ಕಣ್ಣಾಮುಚ್ಚಾಲೆ, ಬೆಲೆ ಕುಸಿತ, ಕೂಲಿ ಕಾರ್ಮಿಕರ ಕೊರತೆ ಸೇರಿದಂತೆ ಹಲವಾರು ಕಾರಣಗಳಿಂದ ಇಂದು ಕೃಷಿ ಕ್ಷೀಣಿಸುತ್ತಿರುವುದು ದುಃಖದ ವಿಷಯ. ಮುಗ್ದ ಅನ್ನದಾತರಿಗೆ ಕೃಷಿ ಬಿಟ್ಟು ಬೇರೆ ಕಸುಬು ಗೊತ್ತಿಲ್ಲ. ಆದ್ದರಿಂದ ಇಂದೂ ಸಹ ಕೆಲವು ರೈತರು ಲಾಭವೋ, ನಷ್ಟವೋ ತನ್ನ ಕಾಯಕವನ್ನು ಮಾತ್ರ ಬಿಟ್ಟಿಲ್ಲ.

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಹಲವರು ಪ್ರತಿಭಟನೆ ನಡೆಸುವ ಮೂಲಕ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳುತ್ತಾರೆ. ಆದರೆ, ನಮ್ಮ ಅನ್ನದಾತರು ಪ್ರತಿಭಟನೆ ನಡೆಸಿದರೆ ಏನಾಗಬಹುದು. ಹಾಲು, ತರಕಾರಿ ಮತ್ತಿತರ ಉತ್ಪನ್ನಗಳನ್ನು ಒಂದು ವಾರ ತಡೆಹಿಡಿದರೆ ಜನರ ಸ್ಥಿತಿಯನ್ನು ಊಹಿಸಲಸಾಧ್ಯ.

ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ, ನೀರು, ವಿದ್ಯುತ್ ರಸಗೊಬ್ಬರಕ್ಕಾಗಿ ಹೋರಾಟ ನಡೆಸುತ್ತಲೇ ಬರುತ್ತಿದ್ದಾರೆ. ರೈತರ ಬೇಡಿಕೆಗೆ ಅನುಗುಣವಾಗಿ ಹಾಗೂ ಅನ್ನದಾತನ ಅಭಿವೃದ್ಧಿಗಾಗಿ ಸರ್ಕಾರಗಳು ಹಲವಾರು ಯೋಜನೆಗಳನ್ನು ಜಾರಿಗೆ ತರುವ ಮೂಲಕ ಆರ್ಥಿಕ ಅಭಿವೃದ್ಧಿಗೆ ಒತ್ತು ನೀಡುತ್ತಲೇ ಇವೆ. ರೈತರಿಗಾಗಿ ಇರುವ ಪ್ರತಿಯೊಂದು ಯೋಜನೆಗಳು ಸಮರ್ಪಕವಾಗಿ ಜಾರಿಯಾಗಿ ರೈತರ ಮನೆ ಬಾಗಿಲಿಗೆ ತಲುಪಿದರೆ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ಸಾಧ್ಯವಾಗುತ್ತದೆ.

ಮಳೆ, ಗಾಳಿ, ಹಗಲು-ರಾತ್ರಿ ಎನ್ನದೆ ಹೊಲದಲ್ಲಿ ದುಡಿಯುವ ರೈತರ ಸ್ಥಿತಿಗತಿ, ಕಷ್ಟವನ್ನು ತಿಳಿಯಲು ಇದೊಂದು ದಿನವನ್ನು ಆಚರಿಸಲಾಗುತ್ತದೆ. ಅನ್ನದಾತರು ಚೆನ್ನಾಗಿದ್ದರೆ ದೇಶವೇ ಸುಭೀಕ್ಷವಾಗಿರುತ್ತದೆ. ಇಂತಹ ನಿಸ್ವಾರ್ಥ ಮಣ್ಣಿನ ಮಕ್ಕಳಿಗೆ ಪ್ರತಿಯೊಬ್ಬರು ಗೌರವ ಕೊಡಲೇಬೇಕು. ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶಗಳ ವ್ಯಾಮೋಹದಿಂದಾಗಿ ಯುವಕರು
ತಮ್ಮ ಪೂರ್ವಜರ ಕುಲಕಸುಬು ಕೃಷಿಯಿಂದ ವಿಮುಖರಾಗುತ್ತಿರುವುದು ವಿಷಾದನೀಯ. ಅದರಲ್ಲೂ ಸಹ ಕೆಲ ರೈತರು ತಂತ್ರಜ್ಞಾನ ಬಳಸಿಕೊಂಡು ಯಶಸ್ಸು ಕಾಣುತ್ತಿದ್ದಾರೆ.

ಅತ್ಯಾಧುನಿಕ ತಂತ್ರಜ್ಞಾನ, ವಿವಿಧ ತಳಿಗಳ ಆವಿಷ್ಕಾರದಿಂದ ಹಲವಾರು ಪ್ರಗತಿಪರ ರೈತರು ಯಶಸ್ಸು ಕಂಡಿದ್ದಾರೆ. ಅಂತಹವರನ್ನು ಗುರುತಿಸುವ ಕೆಲಸವಾಗಬೇಕು. ಜತೆಗೆ ಮತ್ತಷ್ಟು ಪ್ರೋತ್ಸಾಹಿಸಿದರೆ ಇತರ ರೈತರಿಗೆ ಉತ್ತೇಜನ ನೀಡಿದಂತಾಗುತ್ತದೆ.

ನಗರ ವಾಸಿಗಳೇ ಮಾಲುಗಳಲ್ಲಿ ಕೇಳಿದಷ್ಟು ಹಣ ನೀಡಿ ವಸ್ತು ಖರೀದಿಸಿ ತರಕಾರಿ ಮಾರುವ ರೈತನ ಬಳಿ ಚೌಕಾಸಿ ಮಾಡಬೇಡಿ. ಆತನ ಬೆವರಿಗೆ ಬೆಲೆ ನೀಡಿದರೆ ರೈತನ ಕುಟುಂಬ ಚೆನ್ನಾಗಿರುತ್ತದೆ. ಮತ್ತಷ್ಟು ಆಹಾರ ಬೆಳೆಗಳ ಬೆಳೆ ಬೆಳೆಯಲೂ ನೆರವಾಗುತ್ತದೆ. ಆಹಾರವನ್ನು ವ್ಯರ್ಥ ಮಾಡಬೇಡಿ. ನಮಗೆ ತಿನ್ನುವ ಹಕ್ಕಿದೆ, ಬಿಸಾಡುವ ಹಕ್ಕಿಲ್ಲ. ಹಾಗಾಗಿ ಪ್ರತಿಯೊಂದು ಅನ್ನದ ಅಗುಳಿನ ಹಿಂದೆ ಸಾವಿರಾರು ರೈತರ ಶ್ರಮವಿರುತ್ತದೆ. ಚೆಲ್ಲದಿರಣ್ಣ ಅನ್ನ… ಚಿನ್ನಕ್ಕಿಂತ ಹೆಚ್ಚು ಅನ್ನ…

ಜೈ ಜವಾನ್-ಜೈ ಕಿಸಾನ್.
– ಗುರುಪ್ರಸಾದ್, ಕೋಳಾಲ

Facebook Comments