ರೈತರ ಪರೇಡ್ ನಿರ್ಬಂಧಿಸಿದರೆ ಪರಿಣಾಮ ನೆಟ್ಟಗಿರಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.25- ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ಒತ್ತಾಯಿಸಿ ನಾಳೆ ರೈತರು ನಡೆಸುತ್ತಿರುವ ಜನಗಣ ರಾಜ್ಯೋತ್ಸವ ಪರೇಡನ್ನು ನಿರ್ಬಂಧ ಮಾಡುವ ನಿರ್ಧಾರ ಕೈಗೊಂಡರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ರೈತ ಕಾರ್ಮಿಕ ಸಂಯುಕ್ತ ಹೋರಾಟ ಸಮಿತಿ ಎಚ್ಚರಿಸಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೈತ ಸಂಘದ ಮುಖಂಡ ಚಾಮರಸ ಮಾಲೀಪಾಟೀಲ್, ಕೇಂದ್ರ ಕೃಷಿ ಕಾಯ್ದೆಗಳು ಹಾಗೂ ರಾಜ್ಯ ಸರ್ಕಾರದ ರೈತ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ನಾಳೆ ಐತಿಹಾಸಿಕ ಜನಗಣ ಪರೇಡೆಗೆ ಕರ್ನಾಟಕದ ಮೂಲೆ ಮೂಲೆಗಳಿಂದಲೂ ರೈತರು ಸಾಗರೋಪಾದಿಯಲ್ಲಿ ಬೆಂಗಳೂರಿಗೆ ಹರಿದು ಬರುತ್ತಿದ್ದಾರೆ. ದೂರದ ಜಿಲ್ಲೆಗಳವರು ಕಾರು, ಬಸ್, ಜೀಪ್‍ಗಳಲ್ಲಿ ಬರುತ್ತಿದ್ದಾರೆ ಎಂದರು.

ಹತ್ತಿರದ ಜಿಲ್ಲೆಗಳವರು ಟ್ರ್ಯಾಕ್ಟರ್‍ಗಳಲ್ಲಿ ಆಗಮಿಸುತ್ತಾರೆ. ರೈತರಿಗೆ ಬೆಂಬಲವಾಗಿ ವಿದ್ಯಾರ್ಥಿಗಳು, ಯುವ ಜನರು, ದಲಿತರು, ಕಾರ್ಮಿಕರು, ಮಹಿಳೆಯರು ಹಾಗೂ ಎಲ್ಲಾ ವಲಯದ ಜನರು ರಾಜಧಾನಿಗೆ ಈಗಾಗಲೇ ಪಯಣ ಬೆಳೆಸಿದ್ದಾರೆ. ಹೋರಾಟಗಾರರು ಈಗಾಗಲೇ ನಿಗದಿಪಡಿಸಿರುವ ನಿರ್ದಿಷ್ಟ ಜಾಗದಲ್ಲಿ ಬಂದು ಸೇರಿ ಅಲ್ಲಿಂದ ನಾಳೆ ಬೆಳಗ್ಗೆ 9 ಗಂಟೆಗೆ ಹೊರಟು ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ 12 ಗಂಟೆಗೆ ಸೇರಲಿದ್ದಾರೆ ಎಂದರು.

ರೈಲ್ವೆ ನಿಲ್ದಾಣದಿಂದ 12.30ಕ್ಕೆ ಮೆರವಣಿಗೆಯಲ್ಲಿ ಹೊರಟು ಫ್ರೀಡಂ ಪಾರ್ಕ್‍ಗೆ ಆಗಮಿಸುತ್ತಾರೆ. ಮಧ್ಯಾಹ್ನ 2 ಗಂಟೆಗೆ ಪ್ರತಿಭಟನಾ ಸಭೆ ಪ್ರಾರಂಭವಾಗುತ್ತದೆ. ಮೊದಲಿಗೆ ಸ್ವಾತಂತ್ರ ಹೋರಾಟಗಾರರಾದ ಎಚ್.ಎಸ್.ದೊರೆಸ್ವಾಮಿ ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಲಿದ್ದಾರೆ. ಪ್ರಾಂತ ಕೃಷಿ ಕೂಲಿಕಾರರ ಸಂಘದ ಅಧ್ಯಕ್ಷ ನಿತ್ಯಾನಂದಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಹೇಳಿದರು.

ಕೇವಲ 2 ರಾಜ್ಯಗಳ ರೈತರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ. ಹಾಗಾಗಿ ದಕ್ಷಿಣ ರಾಜ್ಯದ ಎಲ್ಲಾ ರೈತರು ಸಹ ನಾಳಿನ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು. ಸರ್ಕಾರ ನಮ್ಮ ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸ ಮಾಡಿದರೆ ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ ಎಂದು ಅವರು ಎಚ್ಚರಿಸಿದರು.

ದಲಿತ ಸಂಘರ್ಷ ಸಮಿತಿ ಮುಖಂಡ ಮಾವಳ್ಳಿ ಶಂಕರ್ ಮಾತನಾಡಿ, ಟ್ರ್ಯಾಕ್ಟರ್ ಪರೇಡ್ ನಡೆಸುವುದೆಂದು ಈಗಾಗಲೇ ತೀರ್ಮಾನವಾಗಿದೆ. ಆದರೆ, ಟ್ರ್ಯಾಕ್ಟರ್‍ಗಳಿಗೆ ಡೀಸೆಲ್ ಹಾಕದಂತೆ ತಡೆಯುವ ಪ್ರಯತ್ನ ಮಾಡಲಾಗುತ್ತಿದೆ. ಈ ರೀತಿ ಮಾಡುವುದರಿಂದ ಪ್ರತಿರೋಧ ಮತ್ತಷ್ಟು ಹೆಚ್ಚಾಗುತ್ತದೆ. ನಾವು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದರು.
ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ವೀ ಸಂಗಯ್ಯ ಕಾರ್ಮಿಕ ಸಂಘಟನೆ ಮುಖಂಡ ಕೆ.ವಿ.ಭಟ್, ಗೋಪಾಲ್ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿದ್ದರು.

Facebook Comments