ಕೇಂದ್ರ ಸರ್ಕಾರ ಮತ್ತು ರೈತರ ನಡುವಿನ 8ನೇ ಸುತ್ತಿನ ಮಾತುಕತೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜ.8- ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾನೂನುಗಳ ವಿರುದ್ಧ ಕಳೆದ ಎರಡು ತಿಂಗಳಿಂದ ದೆಹಲಿ ಹೊರವಲಯದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಮತ್ತು ಸರ್ಕಾರ ನಡುವಿನ ಎಂಟನೇ ಸುತ್ತಿನ ಮಾತುಕತೆ ಇಂದು ಮಧ್ಯಾಹ್ನ ಆರಂಭವಾಗಲಿದೆ.

ಈಗಾಗಲೇ ಏಳು ಬಾರಿ ಸರ್ಕಾರದ ಪ್ರಮುಖ ಸಚಿವರು ಹಾಗೂ ಪ್ರತಿನಿಧಿಗಳೊಡನೆ ನಡೆಸಿದ ಮಾತುಕತೆ ವಿಫಲವಾಗಿದ್ದು, ಜಾರಿಗೆ ತಂದಿರುವ ಎಂಎಸ್‍ಪಿ ಮೂರು ಕಾಯಿದೆಗಳನ್ನು ವಾಪಾಸು ಪಡೆಯುವವರೆಗೆ ಮುಷ್ಕರ ಹಿಂತೆದುಕೊಳ್ಳವುದಿಲ್ಲ ಎಂದು ಕಟ್ಟುನಿಟ್ಟಿನ ಮಾತನ್ನು ಆಡಿರುವ ರೈತ ಮುಖಂಡರು ಮತ್ತೇ ಶುಕ್ರವಾರ ಮಾತುಕತೆಗೆ ಸಿದ್ಧವಾಗಿದ್ದಾರೆ.

ಇತ್ತೀಚೆಗೆ ಟ್ರಾಕ್ಟರ್ ರ್ಯಾಲಿಯನ್ನು ಧರಣಿ ನಿರತ ಪ್ರದೇಶದ ಬಳಿಯ ಸಿಂಗೂ, ಟಿಕ್ರಿ, ಗಾಜಿಫುರ ಬಾರ್ಡರ್ ಹಾಗೂ ಹರಿಯಾಣದ ರೆವಾಸನ್ ಪ್ರದೇಶದಲ್ಲಿ ಹಮ್ಮಿಕೊಂಡಿದ್ದ ರೈತರು ಯಾವುದೇ ಕಾರಣಕ್ಕೂ ನೂತನ ಮೂರು ಕಾಯಿದೆಗಳನ್ನು ವಾಪಸು ಪಡೆಯಬೇಕು. ಇಲ್ಲದಿದ್ದರೆ ನಮ್ಮ ಪ್ರತಿಭಟನೆ ಮುಂದುವರಿಯಲಿದೆ ಎಂದಿದ್ದರು. ಇದು ಕೇವಲ ಪೂರ್ವಾಭ್ಯಾಸದ ರ್ಯಾಲಿ, ಜ.26 ರಂದು ಬೃಹತ್ ಕಿಸಾನ್ ಪರೇಡ್‍ಅನ್ನು ಹರಿಯಾಣ, ಪಂಜಾಬ್ ಮತ್ತು ಉತ್ತರ ಪ್ರದೇಶದಲ್ಲಿ ಹಮ್ಮಿಕೊಳ್ಳಲಾಗುವುದು ಎನ್ನುವ ಮಾತನ್ನು ರೈತ ಮುಖಂಡರು ಆಡಿದ್ದಾರೆ.

ಜ.4 ರಂದಿನ ಮಾತುಕತೆ ವಿಫಲವಾದ ನಿಟ್ಟಿನಲ್ಲಿ ಇಂದು ಮಧ್ಯಾಹ್ನ 2 ಗಂಟೆಯ ನಂತರ ದೆಹಲಿಯ ವಿಗ್ಯಾನ್ ಭವನದಲ್ಲಿ ಮತ್ತೆ ಸಭೆ ಸೇರಲಿದೆ.  ದೆಹಲಿ ಸಂಚಾರ ಪೊಲೀಸರ ಮಾಹಿತಿ ಪ್ರಕಾರ ಸಿಂಗೂ, ಔಚಾಂಡಿ, ಪಿಯು, ಮನಿಯಾರಿ, ಸಬೋಲಿ ಹಾಗೂ ಮಂಗೇಶ್ ಗಡಿಗಳನ್ನು ಮುಂಜಾಗ್ರತೆ ಕ್ರಮವಾಗಿ ಮುಚ್ಚಲಾಗಿದೆ ಎಂದು ತಿಳಿದುಬಂದಿದೆ.

Facebook Comments