ಹಾಲು ಖರೀದಿ ದರ ಹೆಚ್ಚಿಸುವಂತೆ ರೈತಸೇನೆ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಮಾ.1- ಹಾಲು ಉತ್ಪಾದಕರಿಗೆ ಕನಿಷ್ಠ 40 ರೂ. ಬೆಲೆ ನಿಗದಿಪಡಿಸಬೇಕೆಂದು ಆಗ್ರಹಿಸಿ ಕರ್ನಾಟಕ ರೈತ ಸೇನೆ ವತಿಯಿಂದ ನಗರದಲ್ಲಿಂದು ಪ್ರತಿಭಟನೆ ನಡೆಸಲಾಯಿತು. ಕರ್ನಾಟಕ ರೈತಸೇನೆ ಅಧ್ಯಕ್ಷ ಎಂ.ಆರ್.ನಾರಾಯಣಗೌಡ ನೇತೃತ್ವದಲ್ಲಿ ನಗರದ ಫ್ರೀಡಂಪಾರ್ಕ್‍ನಲ್ಲಿಂದು ಪ್ರತಿಭಟನೆ ನಡೆಸಿದ ಹಾಲು ಉತ್ಪಾದಕರು, ರಾಜ್ಯದಲ್ಲಿ ಎಲ್ಲ ಬೆಲೆ ಏರಿಕೆಯಾಗಿದೆ. ಹಾಲು ಉತ್ಪಾದಕರು ಸಂಕಷ್ಟದಲ್ಲಿದ್ದು, ಉತ್ಪಾದಕರಿಂದ ಖರೀದಿಸುವ ಹಾಲಿನ ದರವನ್ನು ಹೆಚ್ಚಳ ಮಾಡಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ನಾರಾಯಣಗೌಡ ಅವರು, ಉತ್ಪಾದಕರಿಗೆ ಒಂದು ಲೀಟರ್ ಹಾಲಿಗೆ 26 ರೂ. ನೀಡಲಾಗುತ್ತಿದೆ. ಹಾಲು ಉತ್ಪಾದನೆಯ ವೆಚ್ಚ ಹೆಚ್ಚಾಗಿದೆ. ಹಿಂಡಿ, ಬೂಸಾ, ಮೇವಿನ ದರ ಹೆಚ್ಚಾಗಿದ್ದು, ಹೈನುಗಾರಿಕೆ ಮಾಡುವುದು ದುಸ್ತರವಾಗಿದೆ. ಸರ್ಕಾರ ಉತ್ಪಾದಕರಿಗೆ ನೀಡುತ್ತಿರುವ 26 ರೂ.ಗಳಿಂದ ಹೈನುಗಾರಿಕೆ ನಡೆಸುವುದು ಕಷ್ಟಸಾಧ್ಯವಾಗಿದೆ. ಹೀಗಾಗಿ ಒಂದು ಲೀಟರ್ ಹಾಲಿಗೆ ಕನಿಷ್ಠ 40 ರೂ. ನೀಡಬೇಕೆಂದು ಆಗ್ರಹಿಸಿದರು.

ನಾವು ಗ್ರಾಹಕರಿಗೆ ದರ ಹೆಚ್ಚಿಸಬೇಕೆಂದು ಹೇಳುವುದಿಲ್ಲ. ಸರ್ಕಾರ ಉತ್ಪಾದಕರಿಗೆ ಹೆಚ್ಚಿನ ದರ ನೀಡಬೇಕು ಎಂದು ಒತ್ತಾಯಿಸು ತ್ತೇವೆ. ಇಲ್ಲದಿದ್ದರೆ ಹಿಂಡಿ, ಬೂಸಾ, ಮೇವಿಗೆ ಶೇ.50ರಷ್ಟು ಸಬ್ಸಿಡಿ ನೀಡಬೇಕು ಎಂದು ಹೇಳಿದರು. ರಾಜ್ಯದಲ್ಲಿ ಪ್ರತಿ ದಿನ 80 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಂದ 18 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ರೈತರ ಉಪಕಸುಬಾಗಿ ಹೈನುಗಾರಿಕೆ ನಡೆಯುತ್ತಿದೆ.

ಲಕ್ಷಾಂತರ ಜನ ಇದನ್ನು ಅವಲಂಬಿಸಿ ಬದುಕುತ್ತಿದ್ದಾರೆ. ಸರ್ಕಾರ ಲೀಟರ್‍ವೊಂದಕ್ಕೆ ನೀಡುತ್ತಿರುವ ಪ್ರೋತ್ಸಾಹ ಧನದಲ್ಲೂ ಕೂಡ ಗುಣಮಟ್ಟದ ಹಾಲು ಉತ್ಪಾದನೆ ಎಂದು ವಿಂಗಡಿಸಿ ಅದನ್ನು ಸರಿಯಾಗಿ ವಿತರಿಸುತ್ತಿಲ್ಲ ಎಂದು ಆರೋಪಿಸಿದರು.

ಕೆಲವೊಂದು ಒಕ್ಕೂಟಗಳು ಕೆಲವೊಂದು ದರವನ್ನು ನೀಡುತ್ತಿವೆ. ಒಟ್ಟಾರೆ ಇದೇ ರೀತಿ ಸಂಕಷ್ಟ ಎದುರಾದರೆ ಜನ ಹೈನುಗಾರಿಕೆ ಯಿಂದ ವಿಮುಖರಾಗು ತ್ತಾರೆ. ಸರ್ಕಾರ ಎಚ್ಚೆತ್ತು ಬಜೆಟ್‍ನಲ್ಲಿ ಉತ್ಪಾದಕರಿಂದ ಖರೀದಿಸುವ ಹಾಲಿನ ದರವನ್ನು ಹೆಚ್ಚಳ ಮಾಡಬೇಕು.

ಬೇರೆ ರಾಜ್ಯಗಳಲ್ಲಿ ಉತ್ಪಾದಕರಿಗೆ ಹೆಚ್ಚಿನ ದರ ನೀಡಲಾಗುತ್ತಿದೆ. ಇದೇ ರೀತಿ ನಮಗೂ ಹೆಚ್ಚಿನ ದರ ನೀಡಬೇಕೆಂದು ಆಗ್ರಹಿಸಿದ ಅವರು, ಸರ್ಕಾರಕ್ಕೆ ಮನವಿ ನೀಡುತ್ತೇವೆ. ನಮ್ಮ ಮನವಿಗೆ ಸ್ಪಂದಿಸದಿದ್ದರೆ ಹೋರಾಟವನ್ನು ತೀವ್ರಗೊಳಿಸುತ್ತೇವೆ ಎಂದು ಹೇಳಿದರು.

Facebook Comments