ಕೇಂದ್ರ-ರಾಜ್ಯ ಸರ್ಕಾರಗಳ ವಿರುದ್ಧ ರೈತರ ಬೃಹತ್ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.21- ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ಮುಂದಾಗಿರುವ ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ, ವಿದ್ಯುತ್ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತ ಸಂಘ, ಕಾರ್ಮಿಕ ಸಂಘಟನೆಗಳು ಸೇರಿದಂತೆ 30ಕ್ಕೂ ಹೆಚ್ಚು ಸಂಘಟನೆಗಳು ನಗರದಲ್ಲಿಂದು ಬೃಹತ್ ಪ್ರತಿಭಟನೆ ನಡೆಸಿದವು.

ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು, ನಗರದ ರೈಲ್ವೆ ನಿಲ್ದಾಣದ ಬಳಿ ಜಮಾಯಿಸಿ ಅಲ್ಲಿಂದ ಫ್ರೀಡಂಪಾರ್ಕ್‍ವರೆಗೆ ಮೆರವಣಿಗೆಯಲ್ಲಿ ಸಾಗಿ ಸರ್ಕಾರ ರೈತ ವಿರೋಧಿ, ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಕೈ ಬಿಡಬೇಕೆಂದು ಒತ್ತಾಯಿಸಿದರು.

ಬೀದರ್‍ನಿಂದ ಕೋಲಾರದವರೆಗೆ, ಬಳ್ಳಾರಿಯಿಂದ ಚಾಮರಾಜಪೇಟೆ ವರೆಗೆ ರಾಜ್ಯದ ಮೂಲೆ ಮೂಲೆಗಳಿಂದ ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದ ರೈತರು, ರೈತ ಮಹಿಳೆಯರು ಮೆರವಣಿಗೆ ಮೂಲಕ ಸಾಗಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಕೃಷಿಕರಿಗೆ ಮಾರಕವಾಗಿರುವ ಕಾಯ್ದೆಗಳನ್ನು ಯಾವುದೇ ಕಾರಣಕ್ಕೂ ಸರ್ಕಾರ ಜಾರಿಗೆ ತರಬಾರದು ಎಂದು ಆಗ್ರಹಿಸಿದರು.

ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಈ ಸಂದರ್ಭದಲ್ಲಿ ಮಾತನಾಡಿ, ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ಉದ್ದೇಶಿಸಿರುವ ಭೂ ಸುಧಾರಣೆ, ಎಪಿಎಂಸಿ ಕಾಯ್ದೆ ವಿದ್ಯುತ್ ಕಾಯ್ದೆ ರೈತರ ಪಾಲಿಗೆ ಮರಣ ಶಾಸನವಾಗಿವೆ ಎಂದು ಆರೋಪಿಸಿದರು.

ನಮ್ಮದು ರೈತರ ಸರ್ಕಾರ. ನಾವು ರೈತಪರ ಎಂದು ಹೇಳುವ ಮುಖ್ಯಮಂತ್ರಿಗಳು ಇಂತಹ ಕಾಯ್ದೆಯನ್ನು ಜಾರಿಗೊಳಿಸಲು ಹೊರಟಿರುವುದು ಎಷ್ಟು ಸಮಂಜಸ. ಕೃಷಿಕರ ಬದುಕಿಗೆ ವಿರೋಧವಾಗಿರುವ ಇಂತಹ ಕಾಯ್ದೆಗಳನ್ನು ಜಾರಿಮಾಡಲು ಮುಂದಾಗಿರುವ ಸರ್ಕಾರ ರೈತಪರ ಸರ್ಕಾರ ಹೇಗೆ ಆಗುತ್ತದೆ ಎಂದು ಕಿಡಿಕಾರಿದರು.

ಕಾಯ್ದೆಗಳನ್ನು ವಿರೋಧಿಸಿ ಹಮ್ಮಿಕೊಂಡಿರುವ ಪ್ರತಿಭಟನೆಯನ್ನು ನಾವು ಕೈ ಬಿಡುವುದಿಲ್ಲ. ಇಂದಿನಿಂದ ಅಧಿವೇಶನ ಮುಗಿಯುವವರೆಗೂ ಆನಂದರಾವ್ ವೃತ್ತದ ಬಳಿ ಅಹೋರಾತ್ರಿ ಧರಣಿ ನಡೆಸುತ್ತೇವೆ. ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಹೇಳಿದರು. ರೈತರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಬೆಳೆ ನಷ್ಟವಾಗಿದ್ದು, ಲಕ್ಷಾಂತರ ರೈತರ ಬದುಕು ಅತಂತ್ರವಾಗಿದೆ.

ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ರೈತರಿರುವಾಗ ಮಾರಕ ಕಾಯ್ದೆಗಳನ್ನು ಜಾರಿಗೊಳಿಸಿ ಸರ್ಕಾರ ಗಾಯದ ಮೇಲೆ ಬರೆ ಎಳೆಯುತ್ತಿದೆ ಎಂದು ಕಿಡಿಕಾರಿದರು. ಪ್ರತಿಭಟನೆಯಲ್ಲಿ ಹೆಚ್ಚು ಸಂಖ್ಯೆಯಲ್ಲಿ ರೈತ ಮಹಿಳೆಯರು ಪಾಲ್ಗೊಂಡು ಕಾಯ್ದೆಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಬಿಗಿ ಬಂ ದೋಬಸ್ತ್: ಪ್ರತಿಭಟನೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ರೈಲ್ವೆ ನಿಲ್ದಾಣದಿಂದ ಫ್ರೀಡಂಪಾರ್ಕ್‍ವರೆಗೆ ಸುಮಾರು 500ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಇಬ್ಬರು ಡಿಸಿಪಿ, 9 ಎಸಿಪಿ, 26 ಇನ್ಸ್‍ಪೆಕ್ಟರ್, ಒಬ್ಬರು ಮಹಿಳಾ ಇನ್ಸ್‍ಪೆಕ್ಟರ್, 24 ಪಿಎಸ್‍ಐ, ಐವರು ಮಹಿಳಾ ಪಿಎಸ್‍ಐ, 31 ಎಎಸ್‍ಐ, 250 ಕಾನ್ಸ್‍ಟೆಬಲ್, 32 ಮಹಿಳಾ ಕಾನ್ಸ್‍ಟೆಬಲ್‍ಗಳನ್ನು ಭದ್ರತೆಗೆ ನಿಯೋಜಿಸಲಾಗಿತ್ತು.

Facebook Comments