ರಾಜ್ಯದಲ್ಲಿ ‘ಭಾರತ್ ಬಂದ್‍’ಗೆ ನೀರಸ ಪ್ರತಿಕ್ರಿಯೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.26- ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ಕಳೆದ ನಾಲ್ಕು ತಿಂಗಳುಗಳಿಂದ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲಾರ್ಥವಾಗಿ ಕರೆ ನೀಡಲಾದ ಭಾರತ್ ಬಂದ್‍ಗೆ ರಾಜ್ಯದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ದೆಹಲಿ ಗಡಿಗಳಲ್ಲಿ ನಡೆಯುತ್ತಿರುವ ಹೋರಾಟವನ್ನು ದೇಶದ ಬೇರೆ ಬೇರೆ ಭಾಗಗಳಿಗೂ ಕೊಂಡೊಯ್ಯಲು 40ಕ್ಕೂ ಹೆಚ್ಚು ರೈತ ಸಂಘಟನೆಗಳ ಒಕ್ಕೂಟ ಸಂಯುಕ್ತ ಕಿಸಾನ್ ಮೋರ್ಚಾ ಇಂದು ಭಾರತ್ ಬಂದ್‍ಗೆ ಕರೆ ನೀಡಿತ್ತು. ಆದರೆ ಅದು ರಾಜ್ಯದಲ್ಲಿ ನಿರೀಕ್ಷಿತ ಯಶಸ್ಸು ಕಾಣಲಿಲ್ಲ.

ಬೆಳಗ್ಗೆ 6ಗಂಟೆಯಿಂದ ಸಂಜೆ 6ರವರೆಗೆ ಭಾರತ್ ಬಂದ್ ನಡೆಯಲಿದೆ ಎಂದು ಹೇಳಲಾಗಿತ್ತು. ಆದರೆ, ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಎಂದಿನಂತೆ ವಾಹನ ಸಂಚಾರ ಸಹಜ ಸ್ಥಿತಿಯಲ್ಲಿತ್ತು. ಅಂಗಡಿ, ವ್ಯಾಪಾರ ವಹಿವಾಟುಗಳು ಯಥಾಸ್ಥಿತಿ ಯಲ್ಲಿ ಮುಂದುವರೆದಿದ್ದವು. ಬಂದ್ ಜನಸಾಮಾನ್ಯರ ಮೇಲೆ ಯಾವುದೇ ರೀತಿಯ ಪರಿಣಾಮ ಉಂಟುಮಾಡಿಲ್ಲ.
ಬ್ಯಾಂಕಿಂಗ್ ಸೇವೆಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಚೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ಕಚೇರಿಗಳಲ್ಲಿ ಹಾಜರಾತಿ ಕೂಡ ಎಂದಿನಂತೆ ಇತ್ತು.

ಬೆಂಗಳೂರಿನ ಟೌನ್‍ಹಾಲ್ ಬಳಿ ರೈತ ಹಾಗೂ ಇತರ ಸಂಘಟನೆಗಳು ಪ್ರತಿಭಟನೆ ನಡೆಸಿ ಫ್ರೀಡಂ ಪಾರ್ಕ್‍ವರೆಗೂ ಮೆರವಣಿಗೆ ಹೋಗಲು ಮುಂದಾದಾಗ ಪೊಲೀಸರು ಅಡ್ಡಿಪಡಿಸಿದರು. ಪ್ರತಿಭಟನೆಗೆ ಪೂರ್ವಭಾವಿಯಾಗಿ ಅನುಮತಿ ಪಡೆದಿಲ್ಲದ ಕಾರಣಕ್ಕಾಗಿ ಪ್ರತಿಭಟನಾ ನಿರತರನ್ನು ಬಂಧಿಸಲಾಯಿತು. ಹಲವಾರು ಸಂಘಟನೆಗಳು ಬಂದ್‍ಗೆ ನೈತಿಕ ಬೆಂಬಲ ವ್ಯಕ್ತಪಡಿಸಿದ್ದವು. ಆದರೆ, ಜನ ಜೀವನಕ್ಕೆ ತೊಂದರೆಯಾಗುವಂತೆ ವಾಣಿಜ್ಯ ಹಾಗೂ ನಿತ್ಯ ಜೀವನದ ಚಟುವಟಿಕೆಗಳನ್ನು ಸ್ಥಗಿತಗೊಳಿಸಲು ನಿರಾಕರಿಸಿದ್ದವು. ಹೀಗಾಗ ಬಂದ್ ನಡೆದರೂ ಕೂಡ ಜನರಿಗೆ ಅದರ ಬಿಸಿ ತಟ್ಟಲಿಲ್ಲ.

# ಶವಯಾತ್ರೆ:
ಬಂದ್‍ಗೆ ವಿವಿಧ ಕಾರ್ಮಿಕ ಸಂಘಟನೆ, ಸಾರಿಗೆ ಹಾಗೂ ವಿವಿಧ ಒಕ್ಕೂಟಗಳು ಬೆಂಬಲ ಸೂಚಿಸಿದ್ದರೂ ಬಂದ್ ನೀರಸವಾಗಿತ್ತು. ಬಂದ್ ಬೆಂಬಲಿಸಿ ರೈತ ಮುಖಂಡ ಕುರಬೂರು ಶಾಂತಕುಮಾರ್ ಅವರ ನೇತೃತ್ವದಲ್ಲಿ ರೈತರು ಕೃಷಿ ಕಾಯ್ದೆಗಳ ಶವಯಾತ್ರೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಹಿಂದೆ ಸರಿದ ಕೋಡಿಹಳ್ಳಿ: ಬಂದ್ ಆಚರಣೆಯಿಂದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದ ಸಂಘಟನೆ ಹಿಂದೆ ಸರಿದಿತ್ತು.

ಯಾವುದೇ ತಯಾರಿ ಇಲ್ಲದೆ ಬಂದ್ ಮಾಡಲು ಸಾಧ್ಯವಿಲ್ಲ. ಒಂದು ದಿನ ಮೊದಲೇ ಬಂದ್ ಘೋಷಣೆ ಮಾಡಿದರೆ ಯಶಸ್ವಿಯಾಗಲ್ಲ. ಮೊನ್ನೆ ಫ್ರೀಡಂಪಾರ್ಕ್‍ನಲ್ಲಿ ಯಾರೋ ಒಬ್ಬರು ಮಾ.26 ರಂದು ಬಂದ್ ಮಾಡುತ್ತೇವೆ ಎಂದು ಬ್ಯಾನರ್‍ಹಿಡಿದುಕೊಂಡಿದ್ದರು. ಅದರಲ್ಲಿ ಏನಿದೆ ಎಂಬುದು ನನ್ನ ಗಮನಕ್ಕೆ ಬಂದಿಲ್ಲ. ಹಾಗಾಗಿ ನಾವು ಭಾರತ್ ಬಂದ್‍ನಲ್ಲಿ ಭಾಗವಹಿಸದೆ ತಟಸ್ಥವಾಗಿರುತ್ತೇವೆ ಎಂದು ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.

Facebook Comments