ಸಾಲದ ಹೊರೆ : ಇಬ್ಬರು ಕೃಷಿಕರು ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕಮಗಳೂರು, ನ.9- ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಸಾಲದ ಹೊರೆಯಿಂದ ನೊಂದ ಇಬ್ಬರು ಕೃಷಿಕರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಶೃಂಗೇರಿ ತಾಲ್ಲೂಕಿನ ಕೂತಗೋಡು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೃಷಿಕ ಚಂದ್ರಶೇಖರ್ (53) ಸಾಲದ ಹೊರೆಯಿಂದ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಐದು ಎಕರೆ ತೋಟ ಹಾಗೂ ಮೂರು ಎಕರೆ ತರಿ ಜಮೀನು ಹೊಂದಿದ್ದ ಇವರು ಇತ್ತೀಚೆಗೆ ನೆರೆಯಿಂದ ತೋಟ ಹಾಳಾಗಿತ್ತು. ಬೆಳೆ ಇಲ್ಲದೆ ಬ್ಯಾಂಕ್ ಸಾಲ ತೀರಿಸಲು ಚಿಂತಿಸುತ್ತಿದ್ದರು.
ವಾಣಿಜ್ಯ ಬ್ಯಾಂಕ್‍ನಲ್ಲಿ ಕೃಷಿಗಾಗಿ 10 ಲಕ್ಷ ಸಾಲ ಮಾಡಿದ್ದ ಇವರು ಸಾಲ ತೀರಿಸಲಾಗದೆ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶೃಂಗೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಎನ್‍ಆರ್ ಪುರದ ಮುಂಡಳ್ಳಿ ನಿವಾಸಿ ಅಭಿಲಾಷ್ (34) ಮೆಣಸಿನಸೇತುವೆ ಬಳಿಯ ಭದ್ರಾ ಹಿನ್ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೃಷಿ ಜತೆಗೆ ಆಟೋ ಸಹ ಓಡಿಸುತ್ತ ಜೀವನ ಸಾಗಿಸುತ್ತಿದ್ದರು. ಇವರು ಧರ್ಮಸ್ಥಳ ಸಂಘದಿಂದ 1 ಲಕ್ಷ, ವೆಲ್ಫೇರ್ ಸೊಸೈಟಿಯಿಂದ 50 ಸಾವಿರ ಬೆಳೆ ಸಾಲ ಪಡೆದಿದ್ದರು. ಈ ಬಾರಿ ನಿರೀಕ್ಷೆಗೂ ಮೀರಿ ಮಳೆಯಾಗಿ ನೆರೆ ಆವರಿಸಿದ್ದರಿಂದ ಬೆಳೆ ನಾಶವಾಗಿತ್ತು.

ಸಾಲ ತೀರಿಸಲಾಗದೆ ಮನನೊಂದಿದ್ದ ಅಭಿಲಾಷ್ ನಿನ್ನೆ ಸಂಜೆ ಮೆಣಸೂರು ಸೇತುವೆಯಿಂದ ಭದ್ರಾ ಹಿನ್ನೀರಿಗೆ ಹಾರಿದ್ದಾರೆ. ಇದನ್ನು ಗಮನಿಸಿದ ದಾರಿಹೋಕರು ತಕ್ಷಣ ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಹಾಗೂ ಅಗ್ನಿಶಾಮಕ ದಳದ ಅಧಿಕಾರಿಗಳು ಕೂಡಲೇ ಸ್ಥಳಕ್ಕಾಗಮಿಸಿ ಕಾರ್ಯಾಚರಣೆ ನಡೆಸಿ ಅರ್ಧಗಂಟೆಯೊಳಗೆ ಶವ ಪತ್ತೆಹಚ್ಚಿದ್ದಾರೆ.

ನೆರೆಯಿಂದಾಗಿ ಬೆಳೆ ಕೈಕೊಟ್ಟಿದ್ದರಿಂದ ಸಾಲ ತೀರಿಸಲಾಗದೆ ನೊಂದಿದ್ದ ಮಗ ಅಭಿಲಾಷ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಈತನ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments