ದೆಹಲಿಯಲ್ಲಿ ಟ್ರ್ಯಾಕ್ಟರ್ ರ‍್ಯಾಲಿ : ರೈತ ಮೇಲೆ ಲಾಠಿಚಾರ್ಜ್, ಅಶ್ರುವಾಯು ಪ್ರಯೋಗ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಜ.26- ಎಪ್ಪತ್ತೆರಡನೆ ಗಣರಾಜ್ಯೋತ್ಸವ ಸಂಭ್ರಮಾಚರಣೆ ನಡುವೆ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ದೆಹಲಿಯಲ್ಲಿ ರೈತರು ಟ್ರ್ಯಾಕ್ಟರ್ ರ‍್ಯಾಲಿ ನಡೆಸಿದರೆ, ದೇಶದ ನಾನಾ ಭಾಗಗಳಲ್ಲಿ ಬೃಹತ್ ರೈತ ಹೋರಾಟಗಳು ನಡೆದವು.  ರಾಷ್ಟ್ರ ರಾಜಧಾನಿ ನವದೆಹಲಿ, ಎಲ್ಲಾ ರಾಜ್ಯಗಳ ರಾಜಧಾನಿಗಳು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಪಥಸಂಚಲನ ನಡೆಯಿತು. ಅದೇ ಸಂದರ್ಭದಲ್ಲಿ ರೈತರು ಗಣರಾಜ್ಯೋತ್ಸವಕ್ಕೆ ಪರ್ಯಾಯವಾಗಿ ರೈತ ಹೋರಾಟಗಳನ್ನು ನಡೆಸಿದರು. ಸೇನೆ ಮತ್ತು ಸಶಸ್ತ್ರ ಪಡೆಗಳ ಪರೇಡ್‍ಗೆ ಪರ್ಯಾಯವಾಗಿ ಟ್ರ್ಯಾಕ್ಟರ್ ರ‍್ಯಾಲಿಗಳು ನಡೆದವು.

ದೆಹಲಿಗೆ ಪಂಜಾಬ್ ಹಾಗೂ ಹರಿಯಾಣದಿಂದ ಸುಮಾರು 2 ಲಕ್ಷ ಟ್ರ್ಯಾಕ್ಟರ್‍ಗಳಲ್ಲಿ ಆಗಮಿಸಿದ ರೈತರು ದೆಹಲಿಯ ಗಡಿ ಭಾಗಗಳಲ್ಲಿ 42 ಕಿ.ಮೀ.ವರೆಗೂ ಸಾಲುಗಟ್ಟಿ ನಿಂತಿದ್ದರು. ಕೆಲವು ಕಡೆ ರೈತರನ್ನು ತಡೆಯುವ ಪ್ರಯತ್ನಗಳು ನಡೆದವು. ಆದರೆ, ಇದ್ಯಾವುದಕ್ಕೂ ಲೆಕ್ಕಿಸದೆ ಪೊಲೀಸರ ಬ್ಯಾರಿಕೇಡ್, ಭದ್ರತೆಗಳನ್ನು ಮೀರಿ ರೈತರು ದೆಹಲಿಯತ್ತ ಮುನ್ನುಗ್ಗಿದರು.

ರಸ್ತೆಗೆ ಅಡ್ಡಲಾಗಿ ಸಿಮೆಂಟ್ ಬ್ಲಾಕ್‍ಗಳು, ಬ್ಯಾರಿಕೇಡ್‍ಗಳನ್ನು ಹಾಕಲಾಗಿತ್ತು. ಕೆಲವು ಕಡೆ ಭಾರೀ ವಾಹನಗಳನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿ ರೈತರನ್ನು ತಡೆಯುವ ಪ್ರಯತ್ನ ನಡೆದಿತ್ತು. ಆದರೆ, ಅದ್ಯಾವುದಕ್ಕೂ ರೈತ ನಾಯಕರು ಜಗ್ಗಲಿಲ್ಲ. ತಮ್ಮ ಟ್ರ್ಯಾಕ್ಟರ್‍ಗಳನ್ನು ಅಡೆತಡೆಗಳ ಮೇಲೆಯೇ ನುಗ್ಗಿಸಿ ಪ್ರತಿಭಟನೆಯತ್ತ ಸಾಗಿದರು.

ದೆಹಲಿಯ ಗಡಿ ಭಾಗಗಳ ಸುತ್ತಲೂ ಟ್ರ್ಯಾಕ್ಟರ್‍ಗಳ ಪರೇಡ್ ಭಾರೀ ಸದ್ದು ಮಾಡಿದವು. ಕೆಲವೊಮ್ಮೆ ಪೊಲೀಸರ ಸೂಚನೆಗಳನ್ನು ಉಲ್ಲಂಘಿಸಿದ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಅಶ್ರುವಾಯು ಸಿಡಿಸಿ ಲಾಠಿಚಾರ್ಜ್ ಮಾಡಲಾಯಿತು. ದೆಹಲಿಯ ಪಾಂಡವನಗರದ ಮೀರತ್‍ಎಕ್ಸ್‍ಪ್ರೆಸ್‍ವೇ ಬಳಿ ಸಾವಿರಾರು ಸಂಖ್ಯೆಯಲ್ಲಿದ್ದ ರೈತರು ಬ್ಯಾರಿಕೇಡ್‍ಗಳನ್ನು ತಳ್ಳಿ ನುಗ್ಗಲು ಯತ್ನಿಸಿದಾಗ ಅವರನ್ನು ನಿಯಂತ್ರಿಸಲು ಲಾಠಿ ಪ್ರಹಾರ ನಡೆಸಲಾಗಿದೆ.


ಸಿಂಗು ಗಡಿಯ ಸಂಜಯ್‍ಗಾಂಧಿಯ ಟ್ರಾನ್ಸ್‍ಪೋರ್ಟ್‍ನಗರದಲ್ಲಿ ಮತ್ತು ಘಾಜಿಪುರ್ ಗಡಿಯಲ್ಲಿ ಅಶ್ರುವಾಯು ಸಿಡಿಸಿ ರೈತರನ್ನು ನಿಯಂತ್ರಿಸುವ ಪ್ರಯತ್ನಗಳು ನಡೆದಿವೆ. ಕಲಂ ಬೈಪಾಸ್‍ನಲ್ಲಿ ಪೊಲೀಸರ ಅಶ್ವದಳದ ಭದ್ರತೆ, ಬ್ಯಾರಿಕೇಡ್‍ಗಳನ್ನು ಭೇದಿಸಿ ರೈತರು ಪ್ರತಿಭಟನೆ ಮುಂದುವರೆಸಿದ್ದಾರೆ.

ಟ್ರ್ಯಾಕ್ಟರ್, ಜೀಪು, ಲಾರಿ, ಬಸ್, ದ್ವಿಚಕ್ರವಾಹನ ಸೇರಿದಂತೆ ನಾನಾ ರೀತಿಯ ವಾಹನಗಳಲ್ಲಿ ರೈತರು ದೆಹಲಿಗೆ ದೌಡಾಯಿಸಿದ್ದಾರೆ. ದೆಹಲಿ ಒಳಗೆ ನುಗ್ಗಲು ಪ್ರಯತ್ನಿಸಿದ ರೈತರನ್ನು ತಡೆಯಲು ಪೊಲೀಸರು ಮತ್ತು ಸೇನಾ ತುಕಡಿಗಳು ಹರಸಾಹಸ ಪಡಬೇಕಾಯಿತು. ಏಕಕಾಲಕ್ಕೆ ಲಕ್ಷಾಂತರ ಮಂದಿ ಆಗಮಿಸಿದ್ದರಿಂದ ದೆಹಲಿಯ ಗಡಿಭಾಗಗಳಲ್ಲಿ ಕಿಸಾನ್ ಘೋಷಣೆಗಳು ಬೊಬ್ಬಿರಿದವು.

ಇದಷ್ಟೇ ಅಲ್ಲದೆ ಎಲ್ಲಾ ರಾಜ್ಯಗಳಲ್ಲೂ ರೈತರ ಬೆಂಬಲವಾಗಿ ಪ್ರತಿಭಟನೆಗಳು ನಡೆದಿವೆ. ಕರ್ನಾಟಕ, ಮಹಾರಾಷ್ಟ್ರ, ಕೇರಳ, ತಮಿಳುನಾಡು, ಉತ್ತರ ಪ್ರದೇಶ, ಮಧ್ಯ ಪ್ರದೇಶ ಸೇರಿದಂತೆ ನಾನಾ ರಾಜ್ಯಗಳ ರೈತರು ದೆಹಲಿಯ ಟ್ರ್ಯಾಕ್ಟರ್ ಪರೇಡ್‍ಗೆ ಬೆಂಬಲ ವ್ಯಕ್ತಪಡಿಸಿ ರಾಜ್ಯಮಟ್ಟಗಳಲ್ಲಿ ಟ್ರ್ಯಾಕ್ಟರ್ ರ್ಯಾಲಿ ನಡೆಸಿದ್ದಾರೆ.

ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಗ್ರಾಮ ಮಟ್ಟಗಳಲ್ಲೇ ರೈತರನ್ನು ತಡೆಯುವ ಪ್ರಯತ್ನ ಮಾಡಿದ್ದಾರೆ. ಕೆಲವು ಭಾಗಗಳಲ್ಲಿ ಮನೆ ಮನೆಗೆ ಹೋಗಿ ಟ್ರ್ಯಾಕ್ಟರ್‍ಗಳನ್ನು ಹೊರ ತೆಗೆಯದಂತೆ ರೈತರಿಗೆ ಎಚ್ಚರಿಕೆ ನೀಡಲಾಗಿತ್ತು. ಇದನ್ನೂ ಮೀರಿ ಪ್ರತಿಭಟನೆಗೆ ಮುಂದಾದವರನ್ನು ಹೆದ್ದಾರಿ, ಜಿಲ್ಲಾ ರಸ್ತೆಗಳಲ್ಲಿ ತಡೆದು ನಿಲ್ಲಿಸಲಾಗಿದೆ. ಕಾಂಗ್ರೆಸ್, ಆಮ್‍ಆದ್ಮಿ, ಎಡಪಕ್ಷಗಳು ಸೇರಿದಂತೆ ಅನೇಕ ವಿರೋಧ ಪಕ್ಷಗಳು ರೈತ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿವೆ. ರಾಜಕೀಯ ಹೊರತಾಗಿ ನಡೆದ ರೈತರ ಹೋರಾಟ ರಾಷ್ಟ್ರಾದ್ಯಂತ ಭಾರೀ ಸಂಚಲನ ಮೂಡಿಸಿತ್ತು.

ಕೇಂದ್ರ ಸರ್ಕಾರ ತನ್ನ ಕೃಷಿ ಕಾನೂನುಗಳನ್ನು ಹಿಂಪಡೆಯದೇ ಇದ್ದರೆ ಮುಂದಿನ ದಿನಗಳಲ್ಲಿ ಬಜೆಟ್ ನಡೆಯುವಾಗ ಸಂಸತ್‍ಗೆ ಮುತ್ತಿಗೆ ಹಾಕುವ ಎಚ್ಚರಿಕೆಯನ್ನು ರೈತ ಸಂಘಟನೆಗಳು ನೀಡಿವೆ.

Facebook Comments