ಆತ್ಮಹತ್ಯೆ ಮಾಡಿಕೊಂಡ ಮಗ, ನೊಂದ ತಂದೆಯೂ ಬಾವಿಗೆ ಬಿದ್ದು ಸಾವಿಗೆ ಶರಣು..!

ಈ ಸುದ್ದಿಯನ್ನು ಶೇರ್ ಮಾಡಿ

ಹನೂರು, ಜೂ.14- ದಾಯಾದಿಗಳ ಕೌಟುಂಬಿಕ ಕಲಹದಿಂದಾಗಿ ಮನನೊಂದ ಮಗ ಆತ್ಮಹತ್ಯೆ ಮಾಡಿಕೊಂಡ ದುಃಖದಲ್ಲಿದ್ದ ಅಪ್ಪನೂ ಸಹ ತೋಟದ ಬಾವಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಹನೂರು ಪೊಲೀಸ್ ಠಾಣೆ ವ್ಯಾಪ್ತಿಯ ಆರ್.ಎಸ್.ದೊಡ್ಡಿ ಗ್ರಾಮದಲ್ಲಿ ನಡೆದಿದೆ.

ಹನೂರು ಪಟ್ಟಣ ಪಂಚಾಯ್ತಿ ಸರಹದ್ದಿಗೆ ಒಳಪಡುವ ಆರ್‍ಎಸ್ ದೊಡ್ಡಿ ಗ್ರಾಮದ ನಿವಾಸಿ ಮಹಾದೇವ ಶೆಟ್ಟಿ(48) ಮೃತ ದುರ್ಧೈವಿ. ಕಳೆದ ಮೂರು ದಿನಗಳ ಹಿಂದೆ ಮಹದೇವಶೆಟ್ಟಿ ಅವರ ಮನೆ ಮುಂದೆ ಡಿಶ್ ಟಿವಿ ಹಾಕಲಾಗಿತ್ತು.

ಈತನ ಮನೆ ಹಿಂದೆ ಒಡಹುಟ್ಟಿದ ಅಣ್ಣನ ಕುಟುಂಬ ವಾಸವಾಗಿದ್ದು , ತಿರುಗಾಡಲು ತೊಂದರೆ ಆಗುತ್ತಿದೆ ಎಂದು ಅಣ್ಣನ ಮಕ್ಕಳು ಮತ್ತು ಅಳಿಯ ಹಾಗೂ ಅವರ ಸಂಬಂಕರು ಮಹದೇವಶೆಟ್ಟಿ ಮತ್ತು ಆತನ ಮಗ ಕೆಂಪಶೆಟ್ಟಿ ಮೇಲೆ ಹಿಗ್ಗಾ ಮುಗ್ಗ ಥಳಿಸಿ ಹಲ್ಲೆ ಮಾಡಿದ್ದರು.

ಇದಲ್ಲದೆ ಆಸ್ತಿ ವಿಚಾರವಾಗಿ ಹಲವು ಭಾರಿ ಗಲಾಟೆ ಆಗುತ್ತಲೇ ಇತ್ತು. ಕಳೆದ ಮೂರು ದಿನದ ಹಿಂದೆ ಡಿಶ್ ಟಿವಿ ಸ್ಥಳದ ವಿಚಾರವಾಗಿ ತಂದೆ ಮತ್ತು ಮಗನ ಮೇಲೆ ಹಲ್ಲೆ ಮಾಡಲಾಗಿತ್ತು.

ಮನನೊಂದ ಮಹದೇವಶೆಟ್ಟಿ ಮಗ ಕೆಂಪ ಹನೂರು ಪಟ್ಟಣದ ಹೊರ ವಲಯದಲ್ಲಿ ವಿಷದ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದನು.
ಮಗ ಸಾವನ್ನಾಪ್ಪಿದ ದಿನವೇ ಮಹದೇವಶೆಟ್ಟಿಯೂ ಆತ್ಮಹತ್ಯೆಗೆ ಯತ್ನಿಸುತ್ತಿದ್ದು ನೆರೆ ಹೊರೆಯವರು ಅದನ್ನು ತಪ್ಪಿಸಿದ್ದರು.

ಆದರೆ ಮಗನ ಸಾವಿನ ದುಃಖದ ನೆನಪಿನಲ್ಲಿಯೇ ಇದ್ದ ಮಹದೇವಶೆಟ್ಟಿ ನಿನ್ನೆ ಮಧ್ಯಾಹ್ನ ತೋಟದ ಬಾವಿಗೆ ಬಿದ್ದು ಪ್ರಾಣ ಕಳೆದುಕೊಂಡಿರುವುದಾಗಿ ತಿಳಿದು ಬಂದಿದೆ.

ಈ ವಿಚಾರವಾಗಿ ಪೊಲೀಸ್ ಠಾಣೆಗೆ ಯಾವುದೆ ದೂರು ನೀಡಿಲ್ಲ. ಮೃತನಿಗೆ ಪತ್ನಿ ಮತ್ತು ಮತ್ತೊಬ್ಬ ಮಗನಿದ್ದು ಗ್ರಾಮದ ಮುಖಂಡರ ತೀರ್ಮಾನಕ್ಕೆ ಬಿಡಲಾಗಿದೆ.

Facebook Comments

Sri Raghav

Admin