ಆಸ್ತಿ ಜಗಳ : ಮಗನನ್ನೇ ಕೊಂದ ತಂದೆ..!

ಈ ಸುದ್ದಿಯನ್ನು ಶೇರ್ ಮಾಡಿ

ಕೊಳ್ಳೆಗಾಲ,ಜೂ.28- ಆಸ್ತಿ ವ್ಯಾಜ್ಯದ ಹಿನ್ನೆಲೆಯಲ್ಲಿ ತಂದೆಯೇ ಮಗನನ್ನು ಕೊಡಲಿಯಿಂದ ಕೊಚ್ಚಿ ಹತ್ಯೆಗೈದಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಹೊನ್ನೆಗೌಡನಹಳ್ಳಿಯಲ್ಲಿ ಇಂದು ಬೆಳಗ್ಗೆ ನಡೆದಿದೆ.

ಮಲ್ಲಿಕಾರ್ಜುನಪ್ಪ (47) ತಂದೆಯಿಂದ ಹತ್ಯೆಯಾದ ಮಗ.  ಆಸ್ತಿ ವಿಚಾರವಾಗಿ ತಂದೆ ಮಹದೇವಪ್ಪ ಹಾಗೂ ಹಿರಿಯ ಪುತ್ರ ಮೃತ ಮಲ್ಲಿಕಾರ್ಜುನಪ್ಪ ಅವರ ನಡುವೆ ಕಳೆದ ಕೆಲವು ವರ್ಷಗಳಿಂದ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.

ಇಂದು ಬೆಳಗ್ಗೆ ಮಲ್ಲಿಕಾರ್ಜುನಪ್ಪ ಜಮೀನಿನ ಮೇಲೆ ಬಳಿ ಹೋಗಿದ್ದಾಗ ಅಲ್ಲಿಗೆ ಬಂದ ಮಹದೇವಪ್ಪ ಮಗನ ಜೊತೆ ಗಲಾಟೆ ಮಾಡಿಕೊಂಡಿದ್ದಾರೆ.  ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ರೊಚ್ಚುಗೆದ್ದ ಮಹದೇವಪ್ಪ ಕೊಡಲಿಯಿಂದ ಪುತ್ರ ಮಲ್ಲಿಕಾರ್ಜುನಪ್ಪನ ಮೇಲೆ ಹಲ್ಲೆ ಮಾಡಿದ್ದಾರೆ. ತಲೆಗೆ ಗಂಭೀರವಾದ ಪೆಟ್ಟು ಬಿದ್ದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.

ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಜಮೀನನ ಬಳಿ ದೌಡಾಯಿಸುತ್ತಿದ್ದಂತೆ ಮಹದೇವಪ್ಪ ಅಲ್ಲಿಂದ ಪರಾರಿಯಾಗಿದ್ದಾರೆ.  ಈ ಸಂಬಂಧ ಗುಂಡ್ಲುಪೇಟೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments