ಮುದ್ದಾದ ಮಕ್ಕಳನ್ನು ಕತ್ತು ಹಿಸುಕಿ ಕೊಂದ ಪಾಪಿ ತಂದೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಮಾ.21-ತಂದೆಯೇ ತನ್ನಿಬ್ಬರು ಮುದ್ದಾದ ಮಕ್ಕಳನ್ನು ಕತ್ತು ಹಿಸುಕಿ ಸಾಯಿಸಿರುವ ಅಮಾನವೀಯ ಘಟನೆ ಹುಳಿಮಾವು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ತೌಶಿನಿ(5) ಮತ್ತು ಶಾಸ್ತಿ (ಒಂದೂವರೆ ವರ್ಷ) ತಂದೆಯಿಂದ ಕೊಲೆಯಾದ ಮಕ್ಕಳು.

ಘಟನೆಗೆ ಸಂಬಂಧಿಸಿದಂತೆ ಆರೋಪಿ ಜಿತಿನ್‍ನನ್ನು ಪೊಲೀಸರು ವಶಕೆ ಪಡೆದಿದ್ದಾರೆ. ತಮಿಳುನಾಡು ಮೂಲದ ಲಕ್ಷ್ಮಿ, ಕೇರಳ ಮೂಲದ ಜಿತಿನ್‍ನನ್ನು ಪ್ರೀತಿಸಿ ವಿವಾಹವಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದರು. ಹುಳಿಮಾವು ಪೊಲೀಸ್ ಠಾಣೆ ವ್ಯಾಪ್ತಿಯ ಅಕ್ಷಯ್‍ನಗರದ ಅಪಾರ್ಟ್‍ಮೆಂಟ್‍ನಲ್ಲಿ ಈ ಕುಟುಂಬ ವಾಸವಾಗಿದೆ.

ಸಾಫ್ಟ್‍ವೆರ್ ಇಂಜಿನಿಯರ್ ಆಗಿರುವ ಲಕ್ಷ್ಮಿ ನಿನ್ನೆ ಎಂದಿನಂತೆ ಕೆಲಸಕ್ಕೆ ತೆರಳಿದ್ದಾರೆ. ಮನೆಯಲ್ಲೇ ಇದ್ದ ಜಿತಿನ್ ತನ್ನಿಬ್ಬರು ಮಕ್ಕಳನ್ನು ಕತ್ತು ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಸಂಜೆ ಲಕ್ಷ್ಮಿ ಕೆಲಸ ಮುಗಿಸಿಕೊಂಡು ಮನೆಗೆ ಬಂದಾಗಲೇ ಈ ಪ್ರಕರಣ ಬೆಳಕಿಗೆ ಬಂದಿದೆ. ಸುದ್ದಿ ತಿಳಿದ ಹುಳಿಮಾವು ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಆರೋಪಿ ಜಿತಿನ್‍ನನ್ನು ವಶಕ್ಕೆ ಪಡೆದಿದ್ದಾರೆ.

ಮಕ್ಕಳ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಒಂದು ಮೂಲದ ಪ್ರಕಾರ ದಂಪತಿ ನಡುವಿನ ಜಗಳದಿಂದ ಮಕ್ಕಳು ಕೊಲೆಯಾಗಿರಬಹುದೇ ಎಂಬ ಶಂಕೆ ವ್ಯಕ್ತವಾಗಿದ್ದು, ಈ ನಿಟ್ಟಿನಲ್ಲಿ ತನಿಖೆ ವ್ಯಕ್ತವಾಗಿದೆ.  ಹುಳಿಮಾವು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments