ಅಮ್ಮನ ಎದೆಹಾಲಿನಷ್ಟೇ ಮುಖ್ಯ, ಅಪ್ಪನ ಬೆವರಿನ ಹನಿ..! ‘ಅಪ್ಪ ಐ ಲವ್ ಯು’…

ಈ ಸುದ್ದಿಯನ್ನು ಶೇರ್ ಮಾಡಿ

appa-i-lovo-you

ಅಣಬೇರು ತಾರೇಶ್ ಕೆ.ಪಿ., ದಾವಣಗೆರೆ

“ನನಗೀಗ ಅರಿವಾಗುತ್ತಿದೆ
ಚಿಕ್ಕಂದಿನಲ್ಲಿ ಚೆನ್ನಾಗಿ ಓದಿದ್ದರೆ
ಲಕ್ಷ ರೂಪಾಯಿ ಸಂಬಳ ತರುವ
ನೌಕರನಾಗಿರುತ್ತಿದ್ದೆನೆಂದು.
ಆದರೀಗ ಕಾಲ ಮುಂದೆ ಹೋಗಿದೆ
ನನಗೀಗ ಅರಿವಾಗುತ್ತಿದೆ
ಅಪ್ಪ ಏಕೆ ಬಯ್ಯುತ್ತಿದ್ದರೆಂದು.
ಅವರಿಗಾಗಲೇ ತಿಳಿದಿತ್ತೇನೋ
ನಾನು ಮತ್ತೊಬ್ಬರ ಕೈ ಕೆಳಗೆ
ಕೆಲಸ ಮಾಡುತ್ತೇನೆಂದು.
ಅಪ್ಪನ ಮಾತು ಕೇಳದೆ
ಪಶ್ಚಾತ್ತಾಪ ಪಡುತ್ತಿದ್ದೇನೆ ಇಂದು.
ಆದರೇನು ಮಾಡಲಿ
ಅಪ್ಪನೂ ಕೂಡ ಕಾಲದ ಜತೆ
ಕಾಲವಾಗಿದ್ದಾರೆ ಇಂದು.”

 

appa-i-lovo-you-2

ಬರೀ ಜೂನ್ ತಿಂಗಳಲ್ಲಿ ಮಾತ್ರ ತಂದೆಯನ್ನು ಗೌರವಿಸುವುದಲ್ಲ, ಪ್ರತಿನಿತ್ಯ ಆಂತರಿಕವಾಗಿ ಪೂಜ್ಯ ಭಾವನೆಯಿಂದಿರಬೇಕು. ಅಪ್ಪಾ ಎನ್ನುವ ಎರಡಕ್ಷರದ ಜನಕ ಸಾಮಾನ್ಯ ವ್ಯಕ್ತಿಯಾದರೂ ಅವರೊಬ್ಬ ಸಾಕ್ಷಾತ್ ಪರಮಾತ್ಮನ ಪ್ರತಿರೂಪ. ತಾಯಿ-ತಂದೆ ಇಬ್ಬರೂ ನಮಗೆ ಜನ್ಮ ನೀಡಿದ ದೈವಸ್ವರೂಪಿಗಳು. ತಾಯಿಗೆ ಗೌರವ ಇರುವಂತೆಯೇ ತಂದೆಗೂ ಕೂಡ ತನ್ನದೇ ಆದಂತಹ ಘನತೆ ಗೌರವವಿದೆ.

ತಾಯಿ ಹಗಲಾದರೆ, ತಂದೆ ಇರುಳಿದ್ದಂತೆ. ತಾಯಿ ಪ್ರೀತಿಯ ಸ್ವರೂಪ ಮಮತಾಮಯಿ. ತಂದೆ ಸದಾ ಕಾಲ ಮೋಡದ ಮರೆಯ ಚಂದ್ರನಂತೆ ತನ್ನೆಲ್ಲ ಪ್ರೀತಿ-ನಲಿವುಗಳನ್ನು ತಾಯಿಯೊಡನೆ ಮಾತ್ರ ಹಂಚಿಕೊಳ್ಳುವಂತೆ ಮಾಡಿ ತಾನು ಮಾತ್ರ ಕಷ್ಟ-ನೋವುಗಳೊಡನೆ ಜೀವಿಸುವ ಭಾವಜೀವಿ. ತಂದೆಗೂ ಕೂಡ ತನ್ನ ಮಕ್ಕಳ ಮೇಲೆ ತಾಯಿಗಿಂತ ಹೆಚ್ಚು ಪ್ರೀತಿ ಇರುತ್ತದೆ. ಆ ಪ್ರೀತಿ, ಸ್ನೇಹ, ಸಲುಗೆಯನ್ನು ಬಾಹ್ಯದಲ್ಲಿ ಹಂಚಿಕೊಳ್ಳದೆ ತನ್ನೊಳಗೇ ಆನಂದಿಸುತ್ತಾನೆ. ಏಕೆಂದರೆ, ಅಮ್ಮನಂತೆ ಸಲುಗೆಯಿಂದ ಇದ್ದರೆ ಎಲ್ಲಿ ಮಕ್ಕಳು ಹಾಳಾಗುವರೋ ಎನ್ನುವ ಆತಂಕ. ಅಪ್ಪ ಒಬ್ಬ ಅರ್ಥ ಮಾಡಿಕೊಳ್ಳಲಾಗದಂತಹ, ಅಳತೆಗೆ ಮೀರಿದ ವ್ಯಕ್ತಿತ್ವದವರು. ತಾಯಿಯ ಪ್ರೀತಿಯ ಮುಂದೆ ಮಕ್ಕಳು ಹೇಗೆ ಕರಗುತ್ತಾರೋ ಹಾಗೆಯೇ ತಂದೆಯ ಬೆದರಿಕೆಯಿಂದ ಮಕ್ಕಳು ಸುಶಿಕ್ಷಿತರಾಗುತ್ತಾರೆ ಎನ್ನುವುದು ಅಷ್ಟೇ ಸತ್ಯ. ಒಬ್ಬ ತಾಯಿಗೆ ಮಕ್ಕಳ ಮೇಲಿರುವ ಭರವಸೆ ತಂದೆಗೆ ಇರುವುದು ಬಹಳ ಕಡಿಮೆಯೇ. ಅದಕ್ಕಾಗಿಯೇ ಅಲ್ಲವೇ ತಂದೆ-ತಾಯಿ ಮಕ್ಕಳ ಸಲುವಾಗಿ ಜಗಳ ಆಡುವಾಗ ತಂದೆ ನೀನೇ ಅವರನ್ನು ಕೆಡಿಸಿದ್ದು, ನಿನ್ನಿಂದಲೇ ಅವರು ಹಾಳಾಗಿದ್ದು ಎನ್ನುತ್ತಾರೆ.

ಆದರೆ, ತಾಯಿಗೆ ತಾಳ್ಮೆ ಜಾಸ್ತಿ, ತಂದೆಗೆ ಭಯ ಜಾಸ್ತಿ. ಏಕೆಂಬುದು ಈ ಅಪ್ಪಂದಿರು ಕೆಲವು ಸಲ ಪ್ರೀತಿಯಿಂದ ಇದ್ದರೆ ಇನ್ನೂ ಕೆಲವು ಸಲ ಕೋಪಿಗಳಾಗಿರುತ್ತಾರೆ ಎಂದು ನಮ್ಮಲ್ಲಿನ ಪ್ರಶ್ನೆಗೆ ಉತ್ತರ ಹುಡುಕಿದರೆ ತಿಳಿಯುತ್ತದೆ. ಅಪ್ಪ ನೂರು ಕಡೆ ತಿರುಗಾಡುವವರು, ಅನೇಕ ಜನಗಳ ಪರಿಚಯ ವಿರುವವರು. ಎಲ್ಲಾ ದರೂ, ಯಾರಾ ದರೂ ನಿಮ್ಮ ಮಕ್ಕಳು ಹೀಗೆ ಎಂದು ಕೆಟ್ಟದಾಗಿ ಮಾತನಾಡಿದರೆ ಅಷ್ಟು ದಿನ ಕಾಪಾಡಿಕೊಂಡು ಬಂದಿರುವ ಗೌರವ, ಮಾನ ಮರ್ಯಾದೆ ಹಾಳಾಗುತ್ತದೋ, ಮನೆತನದ ಘನತೆಗೆ ಎಲ್ಲಿ ಧಕ್ಕೆ ಬರುತ್ತದೋ ಎನ್ನುವ ಭಯದಿಂದ ತಂದೆಯಾದವರು ಸ್ವಲ್ಪ ಹೆಚ್ಚಾಗಿ ಗಂಭೀರವಾಗಿರುತ್ತಾರೆ ಎನ್ನುವ ವಿಚಾರ ನಮಗೆ ತಿಳಿಯುತ್ತದೆ.  ಯಾರು ಏನೇ ಹೇಳಿದರೂ ಕೂಡ ತಂದೆಯ ಒಳ ಮನಸ್ಸಿನಲ್ಲಿ ಮಕ್ಕಳ ಬಗ್ಗೆ ಪ್ರೀತಿ ಇದ್ದೇ ಇರುತ್ತದೆ. ಹಾಗೆ ಯಾವ ತಂದೆಯಾದರೂ ತನ್ನ ಮಕ್ಕಳು ದಾರಿ ತಪ್ಪುತ್ತಿದ್ದಾರೆ ಎಂದರೆ ಸಹಿಸಿಕೊಂಡಿರಲು ಹೇಗೆ ಸಾಧ್ಯ ಹಾಗೂ ಸಹಿಸಿ ಕೊಂಡಿರುವುದಾದರೂ ಹೇಗೆ..?
ಅಮ್ಮನ ದುಃಖ-ದುಮ್ಮಾನಗಳು ಏನೆಂಬುದು ಮಕ್ಕಳಿಗೆ ಅತಿ ಬೇಗನೆ ತಿಳಿಯುತ್ತದೆ. ಏಕೆಂದರೆ ಮಕ್ಕಳು ಹೆಚ್ಚು ಕಾಲ ತಾಯಿಯ ಒಡನಾಟದಲ್ಲಿ ಬೆಳೆದ ಕಾರಣದಿಂದ. ಆದರೆ, ತಂದೆಯ ಅಂತರಾಳವಾಗಲಿ, ಕಷ್ಟಗಳಾಗಲಿ ಮಕ್ಕಳಿಗೆ ತಿಳಿಯಲು ಅಸಾಧ್ಯವಾಗುತ್ತದೆ.

ಅಪ್ಪನ ಬೆವರ ಹನಿ ತಾಯಿಯ ಪ್ರೀತಿ-ವಾತ್ಸಲ್ಯದಲ್ಲಿ ಕರಗಿ ಹೋಗುತ್ತವೆ. ಅಪ್ಪನೇ ಮುನೆಗೆ ಆಧಾರ ಸ್ಥಂಭ. ಮನೆಗೆ ಅವರೇ ಕಾಮಧೇನು. ಬಯಸಿದ್ದೆಲ್ಲವನ್ನು ನೀಡುವ ಅಕ್ಷಯ ಪಾತ್ರೆ ಇದ್ದಂತೆ. ಮನೆಯಲ್ಲಿ ಅಪ್ಪ ಇದ್ದರೇನೆ ಆ ಮನೆಗೊಂದು ಹಿರಿಮೆ. ಅವರು ತನ್ನ ನೋವು-ಕಷ್ಟಗಳನ್ನು ಹೇಳಿಕೊಳ್ಳುವುದು ಬಹಳ ಕಡಿಮೆ. ಮನದಲ್ಲಿಯೇ ನೋವುಗಳನ್ನು ಸಮಾಧಾನಿಸುವ ಶಕ್ತಿ ಉಳ್ಳವರು.  ನಾನು ತಂದೆಯಾದ ಮೇಲೆ ನನಗೀಗ ತಿಳಿಯುತ್ತಿದೆ. ಸಂಸಾರದ ಮಹಾ ಸಾಗರದಲ್ಲಿ ಬರುವ ನೂರಾರು ರೂಪಾಯಿ ಸಂಬಳದಿಂದ ನಮ್ಮನ್ನು ಹೇಗೆ ಸಾಕಿ ಸಲುಹಿದರೆಂದು ಚಿಕ್ಕವರಿರುವಾಗ ನಾವು ಕೇಳಿದ್ದನ್ನು ಅಪ್ಪ ಕೊಡಿಸಲಿಲ್ಲ ಎಂದು ಅದೆಷ್ಟು ರಂಪಾಟ ಮಾಡಿ ನೆರೆ-ಹೊರೆಯವರ ಮುಂದೆ ತಂದೆಯ ಮಾನ ತೆಗೆದಿದ್ದೇವೆ. ಆದರೆ, ತಂದೆಯ ಒಳ ಉಡುಪು ಹರಿದಿದೆ ಎನ್ನುವುದು ನಮ್ಮ ಗಮನಕ್ಕೆ ಬರುವುದೇ ಇಲ್ಲ.

appa-i-lovo-you-3

ತಾನು ಹರಿದ ಬಟ್ಟೆ ಧರಿಸಿದ್ದರೂ ಕೂಡ ತನ್ನ ಮಕ್ಕಳು ಹಬ್ಬ-ಹರಿ ದಿನಗಳಲ್ಲಿ ಹೊಸ ಬಟ್ಟೆ ಧರಿಸಬೇಕೆನ್ನುವುದು ತಂದೆ-ತಾಯಿಯ ಆಶಯವಾಗಿರುತ್ತದೆ. ಅಂತಹ ತಂದೆಗೆ ಜೀವಂತವಿರುವಾಗ ಒಂದು ಕೃತಜ್ಞತೆ ಹೇಳಲು ಮರೆಯುತ್ತಿದ್ದೇವೆ. ಆ ತಂದೆಯ ಕೃತಜ್ಞತಾ ಭಾವಕ್ಕೆ ಅಪ್ಪಂದಿರ ದಿನವಾದರೂ ಎಲ್ಲಾ ಮಕ್ಕಳು ಶುಭಾಶಯ ಕೋರೋಣ. ಚಿಕ್ಕಂದಿನಲ್ಲಿ ನಮಗರಿಯದೇ ಮಾಡಿದ ತಪ್ಪಿಗೆ ಕ್ಷಮೆ ಇರಲಿ. ಅಂದು ಮಾಡಿದ ತಪ್ಪಿನ ಅರಿವು, ಇಂದು ನಾವು ತಂದೆ-ತಾಯಿಯರಾದಾಗ ತಿಳಿಯುತ್ತಿದೆ. ಅರಿಯದೇ ನಿಮ್ಮ ಬಗ್ಗೆ ತಪ್ಪು ಭಾವನೆ ಇರಿಸಿಕೊಂಡಿದ್ದಕ್ಕೆ ಒಂದು ಸಣ್ಣ ಕ್ಷಮಾದಾನ ಇರಲಿ. ನಿಮ್ಮ ಬಗ್ಗೆ ತಪ್ಪು ಮಾತನಾಡಿದರೆ ನಿಮ್ಮ ಮಕ್ಕಳಾದ ನಾವು ಸುಮ್ಮನಿರಲಾಗುತ್ತದೆಯೇ. ನಿಮ್ಮನ್ನು ಅಂತರಂಗದಲ್ಲಿಟ್ಟು ಪೂಜಿಸುತ್ತೇವೆ. ನಿಮ್ಮ ದಾರಿಯಲ್ಲೇ ಮುನ್ನಡೆಯುತ್ತೇವೆ.

 

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin