ಅಪ್ಪ ಬೆಳಕ ಬೆಳಗಿಸೋ ದೀಪ..!

ಈ ಸುದ್ದಿಯನ್ನು ಶೇರ್ ಮಾಡಿ

# ಸುನೀಲ್ ರಾಜೇನಹಳ್ಳಿ
ಆಧುನಿಕ ಜಗತ್ತು ಅತೀ ವೇಗದಲ್ಲಿ ಸಾಗುತ್ತಿದೆ ಸಮಯ ಕಳೆದಂತೆ ಹೊಸ ಹೊಸ ವಿಚಾರಗಳು-ಆಚರಣೆಗಳು ಹೆಚ್ಚುತ್ತಿವೆ. ವರ್ಷಪೂರ್ತಿ ಒಂದೊಂದು ವಸ್ತು, ವಿಷಯ ಪಾತ್ರಕ್ಕೆ ಸಂಬಂಧಿಸಿದಂತೆ ಅವುಗಳಿಗೆಂದೆ ಒಂದು ದಿನವನ್ನು ಆಚರಿಸಲಾಗುತ್ತಿದೆ. ಇದರ ಹಿಂದಿನ ಉದ್ದೇಶ ಇಷ್ಟೆ.

ಸಮಾಜದಲ್ಲಿ ಒಳ್ಳೆಯ ವಿಷಯ, ವಸ್ತುಗಳಿಗೆ ಸಂಬಂಧಿಸಿದಂತೆ ಜಾಗೃತಿ ಯನ್ನು ಮೂಡಿ ಸುವುದು. ಜೀವನ ದಲ್ಲಿ ಮುಖ್ಯ ರಾದವರ ಕುರಿತು ಪ್ರೀತಿ ಗೌರವ ತೋರ್ಪಡಿಸುವುದು. ಅಂತೆಯೇ ಜಗತ್ತಿನಾದ್ಯಂತ ತಾಯಿ ದಿನಾಚರಣೆ, ಭೂದಿನಾಚರಣೆ, ಯೋಗದಿನಾಚರಣೆ ಪರಿಸರ ದಿನಾಚರಣೆ ಹೀಗೆ ಹತ್ತು ಹಲವು ಆಚರಣೆಗಳನ್ನು ಮಾಡುವುದನ್ನು ಗಮನಿಸಬಹುದು.

ಅದರಂತೆಯೆ ಪ್ರತಿಯೊಬ್ಬರ ಜೀವನ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸುವ ತಂದೆಗೆ ಸಹ ಗೌರವ, ಪ್ರೀತಿಗೆ ಅರ್ಹರು. ಹಾಗಾಗಿ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಪ್ರತಿ ವರ್ಷ ಜೂನ್ ತಿಂಗಳ ಮೂರನೇಯ ಭಾನುವಾರದಂದು ತಂದೆಯಂದಿರಿಗೆ ಗೌರವ ಸೂಚಕವಾಗಿ ತಂದೆ ದಿನಾಚರಣೆಯನ್ನು ಆಚರಿಸಲಾಗುತ್ತದೆ.

ಪ್ರತಿಯೊಂದು ಮಗುವಿಗೂ ತಾಯಿಯ ಪ್ರೀತಿಯ ಅವಶ್ಯಕತೆಯಂತೆ ತಂದೆಯ ಪ್ರೀತಿಯೂ ಅತ್ಯಾವಶ್ಯಕ. ಮಗುವನ್ನು ಹೆತ್ತು, ಹೊತ್ತು ಲಾಲನೆ ಪಾಲನೆ ಮಾಡುವವಳು ತಾಯಿಯೆ ಆದರೂ, ಆ ಕಾರ್ಯದಲ್ಲಿ ನೆರವಾಗಿ ತನ್ನ ಕರುಳ ಕುಡಿಯನ್ನು ಅತ್ಯಂತ ಜೋಪಾನದಿಂದ ನೋಡಿಕೊಳ್ಳುವ ಹೊಣೆಗಾರಿಕೆಯೂ ಪ್ರತಿಯೊಬ್ಬ ತಂದೆಯದಾಗಿರುತ್ತದೆ. ಮಗುವನ್ನು ಯೋಗ್ಯವಾಗಿ ಬೆಳೆಸಿ ಸನ್ಮಾರ್ಗದಲ್ಲಿ ನಡೆಸಿ ಸಮಾಜದಲ್ಲಿ ಸತ್ಪ್ರಜೆಯನ್ನಾಗಿಸುವ ಗುರುತರವಾದ ಜವಾಬ್ದಾರಿ ಅಪ್ಪನದೇ ಆಗಿರುತ್ತದೆ. ಮಕ್ಳಳನ್ನು ಬೆಳೆಸುವಲ್ಲಿ ತಂದೆಯ ಪಾತ್ರ ಗುರುತರವಾದದು.

ಸಣ್ಣ ಮಗುವಾಗಿರುವಾಗ ತಂದೆ ಎಂದರೆ ಹೆಚ್ಚಿನ ಮಕ್ಕಳಿಗೆ ಭಯವೇ, ಕಾರಣ ತಾಯಿಯಂತೆ ಲಾಲಿಸಿ ಅಲ್ಲ ,ತಂದೆಯ ಮಾತಿನಲ್ಲಿ ಗಾಂಭೀರ್ಯತೆ ಎದ್ದು ಕಾಣುತ್ತದೆ. ಆದರೆ ನಿಜವಾಗಿಯೂ ಆ ಮಾತಿನ ಅರ್ಥ ತಂದೆಗೆ ಮಗುವಿನ ಮೇಲೆ ಪ್ರೀತಿಯೇ ಇಲ್ಲ ಎಂದಲ್ಲ, ಬದಲಾಗಿ ಮಗುವಿನ ಭವಿಷ್ಯವು ಒಳಿತಾಗಿರಬೇಕೆಂಬ ಬಯಕೆಯಿಂದ ಆ ರೀತಿಯ ಗಾಂಭೀರ್ಯತೆಯು ತಮ್ಮ ಮಾತಿನಲ್ಲೂ ಇರುವುದು.

ತಂದೆಯಾದವನಿಗೂ ಅರಿವಿದೆ ನನ್ನ ಮಾತಿನಿಂದ ಮಗುವಿಗೆ ಭಯವುಂಟಾಗುತ್ತೆ ಎಂದು, ಆದರೂ ಆ ಮಾತಿನಲ್ಲಿ ಗಾಂಭೀರ್ಯತೆ ಇರುವುದು ಭಯವಾದರೆ ಸಾಂತ್ವನ ಹೇಳಲು ತಾಯಿ ಇರುವಳೆಂಬ ಅರಿವಿನಲ್ಲೂ ಮಗುವಿನ ದಾರಿ ತಪ್ಪಿನೆಡೆಗೆ ಸರಿಯಬಾರದೆಂಬ ನಿಟ್ಟಿನಲ್ಲೂ ಆಗಿರುತ್ತದೆ.ತಾಯಿ ಮಗುವಿನ ಬೆಳಕಾದರೆ, ತಂದೆ ಆ ಬೆಳಕ ಬೆಳಗಿಸೋ ದೀಪ..!!

ಅಪ್ಪನೆಂದರೆ ತೋಳುಗಳಲ್ಲಿ ಅಪ್ಪಿ ಬದುಕಿನಲ್ಲಿ ಭದ್ರತೆಯ ಭಾವ ಬಿಂಬಿಸಿ, ಕೈ ಹಿಡಿದು ಹೆಜ್ಜೆಯ ಜೊತೆ ಹೆಜ್ಜೆ ಬೆರೆಸಿ ಹೊರ ಜಗತ್ತಿಗೆ ತಮ್ಮನ್ನು ಪರಿಚಯಿಸುವ ಅಪ್ಪನೆಂದರೆ ಪುಳಕ, ಅಪ್ಪನೆಂದೆರೆ ಹೀರೋ. ಅಪ್ಪನೆಂದರೆ ಜಗದ ಸಿರಿಯನ್ನೆಲ್ಲ ಬೊಗಸೆಯಲ್ಲಿ ಮೊಗೆದು ಕೊಟ್ಟವನು. ಅಪ್ಪನೆಂದರೆ ಬದುಕಿನಲ್ಲಿ ಚೈತನ್ಯ ತುಂಬಿದವನು. ಅಪ್ಪನೆಂದರೆ ಬೆರಗುಗಣ್ಣಿನಲಿ ಪ್ರಪಂಚ ನೋಡುವಂತೆ ಮಾಡಿದವನು, ತಪ್ಪು ತಪ್ಪು ಹೆಜ್ಜೆ ಇರಿಸುವಾಗ ಕೈ ಹಿಡಿದು ಸರಿ ದಾರಿಯಲ್ಲಿ ನಡೆಸಿದವನು, ಹೆಗಲ ಮೇಲೆ ಕೂರಿಸಿಕೊಂಡು ಹಾದಿಯುದ್ದಕ್ಕೂ ನಡೆದವನು, ಬಿದ್ದು ಗಾಯ ಗೊಂಡಾಗ ಮೈ ದಡವಿ ರಮಿಸಿದವನು.ಹೀಗೆ ಬದುಕಿನ ಒಂದೊಂದು ಮಜುಲುಗಳಲ್ಲೂ ತನ್ನ ಛಾಪು ಮೂಡಿಸಿ ಎಲ್ಲರ ಬದುಕಿನಲ್ಲೂ ಮಹತ್ವದ ಸ್ಥಾನ ಪಡೆದು ಮಕ್ಕಳ ಬಾಳಿನಲ್ಲಿ ಬೆಳಕಾಗಿ ಬೆಳಕು ನೀಡುತ್ತಿದ್ದಾನೆ.

ಯಾವುದೇ ಸ್ವಾರ್ಥ ಮನೋಭಾವನೆಯಿಲ್ಲದೇ ಮಕ್ಕಳ ಭವಿಷ್ಯವನ್ನು ರೂಪಿಸಿ ಅವರು ನಮ್ಮಂತೆ ಎಂದೂ ಕಷ್ಟಪಡಬಾರದು, ಇರುವ ಎಲ್ಲ ಕಷ್ಟಗಳೂ ನಮ್ಮೊಟ್ಟಿಗೇ ಅಂತ್ಯಕಾಣಬೇಕು. ಅವರ ಬಾಳಿಗೆ ಸಂತೋಷದ ದಿನಗಳನ್ನು ಕೂಡಿಡಬೇಕೆಂದು ಜೀವನದ ಸಂತೋಷಗಳನ್ನೆಲ್ಲಾ ತ್ಯಾಗ ಮಾಡುವ ತಂದೆ ಮಕ್ಕಳ ಪಾಲಿಗೆ ದೇವರೇ ಅಲ್ಲವೇ..? ಹೌದು, ಇಂದು ಜಗತ್ತು ಆಧುನಿಕತೆಯತ್ತ ಓಡುತ್ತಿದೆ.

ಮಾತೃದೇವೋಭವ, ಪಿತೃದೇವೋಭವ ಎಂದು ಉದ್ಗರಿಸಿದ ನಮ್ಮ ನೆಲದಲ್ಲೇ ಸಂಬಂಧಗಳು ತಮ್ಮ ಬೆಲೆ ಕಳೆದುಕೊಳ್ಳುತ್ತಿವೆ. ಮಕ್ಕಳಿಗಾಗಿ ತಂದೆ ಮಾಡಿದ ತ್ಯಾಗವನ್ನು ಮಕ್ಕಳು ಅರಿತು ಅವರ ಮುಪ್ಪಿನ ಕಾಲದಲ್ಲಿ ತಂದೆ ಮಾಡಿದ ತ್ಯಾಗದ ಋಣ ತೀರಿಸಿಕೊಳ್ಳುವ ಜವಾಬ್ದಾರಿಯನ್ನರಿಯದೇ, ಮಕ್ಕಳನ್ನು ಬೆಳೆಸುವುದು ತಂದೆ ಕರ್ತವ್ಯ ಅದನ್ನು ಅವರು ಮಾಡಿದ್ದಾರೆ. ಎಂದು ಕೆಲವರು ಹೇಳುತ್ತಾರೆ. ತನ್ನ ರಕ್ತವನ್ನೆ ಬಸಿದು ಬೆಳೆಸಿದ ಮಕ್ಕಳು ತಂದೆ ತಾಯಿಗಳ ಮುಪ್ಪಿನ ಕಾಲದಲ್ಲಾಗದಿದ್ದರೆ ಮಾನವೀಯತೆಗೆ ಅರ್ಥವೇ ಇಲ್ಲದಂತಾಗುತ್ತದೆ ಯಲ್ಲವೇ? ಸಂಬಂಧಗಳಿಗೆ ಬೆಲೆಯೇ ಇಲ್ಲದಂತಾಗುತ್ತದಲ್ಲವೇ?

ಓಡುತ್ತಿರುವ ಈ ಆಧುನಿಕತೆಯಲ್ಲಿ ಬೆಳೆದು ನಿಂತ ಮಕ್ಕಳು ತಂದೆ-ತಾಯಿಯರೊಟ್ಟಿಗೆ ಬದುಕಲಿಚ್ಛಿಸುವುದಿಲ್ಲ. ಅವರಿಗೆ ಸ್ವತಂತ್ರ ಬೇಕಾಗಿರುತ್ತದೆ. ವೃದ್ಧಾಪ್ಯದಲ್ಲಿರುವ ಅದೆಷ್ಟೋ ಅಪ್ಪ ಅಮ್ಮಂದಿರು ಇಂದು ಬೀದಿಪಾಲಾಗಿದ್ದಾರೆ. ಕಾರಣ ಏನು ಗೊತ್ತೇ? ತಮ್ಮನ್ನು ಬೆಳೆಸಲು ತಮ್ಮ ಅಮೂಲ್ಯ ಸಮಯ ತೆಗಿದಿಟ್ಟ ಅಪ್ಪ ಅಮ್ಮನನ್ನು ನೋಡಿಕೊಳ್ಳಲು ಮಕ್ಕಳಿಗೆ ಸಮಯವಿಲ್ಲ. ಹಾಗೂ ಕೆಲಸ ಮಾಡಲಾಗದ ಅವರ ಅಸಹಾಯಕತೆ. ನಾವೆಲ್ಲರೂ ನಮ್ಮ ಪರಿಧಿಯಲ್ಲಿ ಈ ಘಟನೆಗಳು ನಡೆಯದಂತೆ ನೋಡಿಕೊಳ್ಳೋಣ, ನಮ್ಮ ನಾಗರಿಕತೆಯನ್ನ ಸರಿಯಾದ ಹಾದಿಯಲ್ಲಿ ನಡೆಸೋಣ.

ಈ ಸುಂದರ, ಸವಿ ಬದುಕಿನ ಕಾರಣ ಕರ್ತನಿಗೆ ಒಂದು ದಿನದಲ್ಲಿ ಕೃತಜ್ಞತೆ ಸಲ್ಲಿಸಿ ಅಪ್ಪನ ದಿನ ಆಚರಿಸಿದರೆ ತಮ್ಮ ಕರ್ತವ್ಯ ಮುಗಿದು ಹೋಗುವುದಿಲ್ಲ. ಹೆತ್ತವರ ದಿನವನ್ನು ಆಚರಿಸಿದರಷ್ಟೆ ಸಾಲದು, ನಿಮ್ಮ ಬದುಕಿನ ಮುಸ್ಸಂಜೆಯಲಿ ನಾವೂ ನಿಮ್ಮ ಜೊತೆ ಇದ್ದೇವೆ ಅನ್ನುವ ಭಾವ ಬಿಂಬಿಸುವ ನಮ್ಮ ನಿಮ್ಮ ನಡವಳಿಕೆಯೂ ಅಷ್ಟೆ ಮುಖ್ಯವಾಗ ಬೇಕು. ಹೆತ್ತವರಿಗೆ ಅವರ ವೃದ್ಧಾಪ್ಯದಲ್ಲಿ ಬೇಕಾದದ್ದು ಹಿಡಿಯಷ್ಟು ಪ್ರೀತಿ,ಒಂದಿಷ್ಟು ಕಾಳಜಿ, ನಿಮ್ಮೊಡನಿದ್ದೇವೆ ಎಂಬ ಭರವಸೆ ಮಾತ್ರ. ಅದನ್ನು ಕೊಡುತ್ತೇವೆಂದು ಪ್ರತಿe್ಞÉ ಮಾಡೋಣ.

Facebook Comments