ಗಿನ್ನಿಸ್ ದಾಖಲೆ ನಿರ್ಮಿಸಿದ್ದ ಹಿರಿಯ ನಟಿ, ನಿರ್ದೇಶಕಿ ವಿಜಯ ನಿರ್ಮಲಾ ವಿಧಿವಶ..!

ಈ ಸುದ್ದಿಯನ್ನು ಶೇರ್ ಮಾಡಿ

ಹೈದ್ರಾಬಾದ್, ಜೂ. 27- ತ್ರಿಭಾಷಾ ನಟಿ, ಗಿನ್ನಿಸ್ ದಾಖಲೆ ನಿರ್ದೇಶಕಿ , ಸೂಪರ್‍ಸ್ಟಾರ್ ಕೃಷ್ಣನ ಪತ್ನಿ ವಿಜಯನಿರ್ಮಲಾ (75) ಅವರು ಇಂದು ವಿಧಿವಶರಾಗಿದ್ದಾರೆ. ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ ವಿಜಯ ನಿರ್ಮಲಾ ಅವರನ್ನು ನಿನ್ನೆ ಗಚ್ಚಿಬೌಲಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಇಹಲೋಕವನ್ನು ತ್ಯಜಿಸಿದ್ದಾರೆ.

ತಮಿಳುನಾಡಿನಲ್ಲಿ 20 ಫೆಬ್ರುವರಿ 1944ರಲ್ಲಿ ಜನಿಸಿದ ವಿಜಯಾ ನಿರ್ಮಲಾ ಅವರು 1950 ರಲ್ಲಿ ಮಚ್ಚಾರೇಖೈ ಎಂಬ ತಮಿಳು ಚಿತ್ರದಿಂದ ಬಣ್ಣದ ಲೋಕಕ್ಕೆ ಪದಾರ್ಪಣ ಮಾಡಿದ ವಿಜಯ ನಿರ್ಮಲಾ, 1964ರಲ್ಲಿ ರಂಗುಲಾ ರಟಾಂ ಮೂಲಕ ತೆಲುಗು ಚಿತ್ರರಂಗಕ್ಕೆ ಚಿರಪಚಿತರಾದರು.

ಮಲಯಾಳಂನ ಶ್ರೇಷ್ಠ ನಟ ಪ್ರೇಮ್‍ನಜೀರ್ ಜೊತೆ 1967ರಲ್ಲಿ ಭರ್ಗವಿ ನಿಲಯಂ ಎಂಬ ಚಿತ್ರದ ಮೂಲಕ ಕೇರಳಿಗರಿಗೂ ಚಿರಪರಿಚಿತರಾದ ವಿಜಯನಿರ್ಮಲಾ ಇದುವರೆಗೂ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

ಸಾವಿತ್ರಿ ನಂತರ ಶಿವಾಜಿಗಣೇಶನ್ ಅವರ ಚಿತ್ರವನ್ನು ನಿರ್ದೇಶಿಸಿದ್ದ ನಿರ್ದೇಶಕಿ ಎಂಬ ಖ್ಯಾತಿಗೆ ಭಾಜನರಾಗಿದ್ದ ವಿಜಯ ಅವರು ತಮ್ಮ 44ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ್ದಕ್ಕಾಗಿ 2002ರಲ್ಲಿ ಅವರು ಗಿನ್ನಿಸ್ ಬುಕ್‍ನಲ್ಲಿ ಸ್ಥಾನ ಪಡೆದಿದ್ದರಲ್ಲದೆ ರಘುಪತಿ ವೆಂಕಯ್ಯ ಪ್ರಶಸ್ತಿಗೂ ಭಾಜನರಾಗಿದ್ದಾರೆ.

ಸಾಕ್ಷಿ ಚಿತ್ರದಲ್ಲಿ ಸೂಪರ್‍ಸ್ಟಾರ್ ಕೃಷ್ಣರೊಂದಿಗೆ ಬಣ್ಣ ಹಚ್ಚಿದ ವಿಜಯ ನಂತರ ಅವರೊಂದಿಗೆ 47 ಚಿತ್ರಗಳಲ್ಲಿ ನಟಿಸಿದ್ದರು. ತಮ್ಮ ಮೊದಲ ಪತ್ನಿ ಕೃಷ್ಣಮೂರ್ತಿಯಿಂದ ವಿಚ್ಛೇದನ ಪಡೆದ ನಂತರ ವಿಜಯಾ , ಕೃಷ್ಣರನ್ನೇ ಮದುವೆಯಾದರು.

ತಮಿಳು ಚಿತ್ರರಂಗದಿಂದ ನಟನೆಗೆ ಆರಂಭಿಸಿದ ವಿಜಯನಿರ್ಮಲಾ, ಮಲಯಾಳಂನಲ್ಲಿ 3 ಲಕ್ಷದ ಬಜೆಟ್‍ನಲ್ಲಿ ಚಿತ್ರ ನಿರ್ಮಿಸಿದ ವಿಜಯಾ ನಿರ್ಮಲಾ ನಂತರ ತೆಲುಗಿನ ಮೀನಾ ಸೇರಿದಂತೆ 44 ಚಿತ್ರಗಳಿಗೆ ನಿರ್ದೇಶನ ಮಾಡಿದ್ದಾರೆ.

ನಿರ್ದೇಶನವಲ್ಲದೆ ತಮ್ಮ ವಿಜಯಾ ಕೃಷ್ಣ ಮೂವೀಸ್‍ನಡಿ 15ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿದ್ದಾರೆ. ಬೆಳ್ಳಿತೆರೆಯಲ್ಲದೆ ಕಿರುತೆರೆಯಲ್ಲೂ ತಮ್ಮನ್ನು ಗುರುತಿಸಿಕೊಂಡಿದ್ದ ವಿಜಯಾನಿರ್ಮಲಾ ಬಾಲಾಜಿ ಟೆಲಿಫಿಲಂಸ್ ನಿರ್ಮಿಸಿದ್ದ ಪೆಳ್ಳಿ ಕಾನುಕ ಧಾರಾವಾಹಿಯಲ್ಲೂ ನಟಿಸಿದ್ದರು.

ವಿಜಯನಿರ್ಮಲಾ ಅವರು ಪತಿ ಕೃಷ್ಣ, ಪುತ್ರರಾದ ನರೇಶ್, ಪ್ರಿನ್ಸ್ ಮಹೇಶ್‍ಬಾಬು ಹಾಗು ಕುಟುಂಬ ವರ್ಗದವರನ್ನು ಅಗಲಿದ್ದಾರೆ. ವಿಜಯನಿರ್ಮಲಾ ಅವರ ನಿಧನಕ್ಕೆ ಟಾಲಿವುಡ್‍ನ ನಟರಾದ ಅಕ್ಕಿನೇನಿ ನಾಗಾರ್ಜುನ್, ಮೆಗಾಸ್ಟಾರ್ ಚಿರಂಜೀವಿ, ವಿಕ್ಟರಿ ವೆಂಕಟೇಶ್, ಜ್ಯೂನಿಯರ್ ಎನ್‍ಟಿಆರ್ ಸೇರಿದಂತೆ ಅನೇಕ ಕಲಾವಿದರು ಹಾಗೂ ಚಿತ್ರವಲಯದವರು ಸಂತಾಪ ಸೂಚಿಸಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin