“ರೈತರಿಗೆ ಅಗತ್ಯವಿರುವಷ್ಟು ರಸಗೊಬ್ಬರ ದಾಸ್ತಾನು ಮಾಡಲಾಗಿದೆ”

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.15-ರಾಜ್ಯದಲ್ಲಿ ರೈತರಿಗೆ ಅಗತ್ಯವಿರುವಷ್ಟು ರಸಗೊಬ್ಬರವನ್ನು ದಾಸ್ತಾನು ಮಾಡಲಾಗಿದೆ. ಎಷ್ಟು ಬೇಕಾದರೂ ಪೂರೈಕೆ ಮಾಡಲು ಸರ್ಕಾರ ಸಿದ್ದವಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ವಿಧಾನಸಭೆಯಲ್ಲಿಂದು ತಿಳಿಸಿದರು. ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‍ನ ಸದಸ್ಯ ಡಾ.ಅಜಯ್ ಧರ್ಮಸಿಂಗ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಸ್ತುತ ರಾಜ್ಯದಲ್ಲಿ 64 ಸಾವಿರ ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಇದೆ.

ರೈತರಿಗೆ ಎಷ್ಟು ಅಗತ್ಯವಿದೆಯೋ ಅಷ್ಟನ್ನೂ ನೀಡಲು ನಾವು ಸಿದ್ದವಿದ್ದೇವೆ. ಈ ಬಗ್ಗೆ ಯಾರಿಗೂ ಯಾವುದೇ ರೀತಿಯ ಆತಂಕ ಬೇಡ ಎಂದು ಅಭಯ ನೀಡಿದರು. ಕೇಂದ್ರ ಸರ್ಕಾರದಿಂದ ನಮಗೆ 4,44,000 ಮೆಟ್ರಿಕ್ ಟನ್ ರಸಗೊಬ್ಬರನಿಗದಿಯಾಗಿತ್ತು.ಇದರಲ್ಲಿ 4,13,000 ಮೆಟ್ರಿಕ್ ಟನ್ ಗೊಬ್ಬರ ರಾಜ್ಯಕ್ಕೆ ಹಂಚಿಕೆ ಮಾಡಲಾಗಿದೆ. ಅದರಲ್ಲಿ 3 ಲಕ್ಷ ಮೆಟ್ರಿಕ್ ಟನ್ ರಾಜ್ಯಾದ್ಯಂತ ವಿತರಣೆ ಮಾಡಿದ್ದೇವೆ. ಪ್ರಸ್ತುತ 64 ಸಾವಿರ ಮೆಟ್ರಿಕ್ ಟನ್ ದಾಸ್ತಾನು ಇದೆ ಎಂದರು.

ಒಂದು ಕ್ವಿಂಟಾಲ್ ಡಿಎಪಿ ರಸಗೊಬ್ಬರಕ್ಕೆ 4 ಸಾವಿರ ನಿಗದಿಪಡಿಸಿದ್ದೇವೆ. ಯಾರಾದರೂ ಹೆಚ್ಚುವರಿಯಾಗಿ ಹಣ ಪಡೆದರೆ ಅಂಥವರ ಮೇಲೆ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಸಿದರು. ನಕಲಿ ಅಭಾವ ಸೃಷ್ಟಿಸುವುದು , ದರ ಹೆಚ್ಚಳ ಮಾಡಿರುವ ಬಗ್ಗೆ ರಾಜ್ಯದ ವಿವಿಧೆಡೆ ಅಧಿಕಾರಿಗಳು ದಾಳಿ ನಡೆಸಿ 659 ಪ್ರಕರಣಗಳನ್ನು ದಾಖಲಿಸಿದ್ದಾರೆ. ಇದರಲ್ಲಿ ಕೆಲವರ ಲೈಸೆನ್ಸ್‍ಗಳನ್ನು ಅಮಾನತುಪಡಿಸಲಾಗಿದೆ. ಒಂದು ವೇಳೆ ಯಾರಾದರೂ ಹೆಚ್ಚುವರಿ ದರ ಪಡೆದರೆ ಅಂಥವರ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಬಿ.ಸಿ.ಪಾಟೀಲ್ ಎಚ್ಚರಿಕೆ ನೀಡಿದರು.

Facebook Comments