ಬೆಂಗಳೂರಿನಲ್ಲೇ ಫಿಲಂ ಸಿಟಿ ನಿರ್ಮಿಸಲು ಸ್ಥಳಕ್ಕಾಗಿ ಹುಡುಕಾಟ : ಡಿಸಿಎಂ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.17- ಮಾಜಿ ಸಚಿವ ಹಾಗೂ ಹಿರಿಯ ನಟ ದಿವಂಗತ ಅಂಬರೀಷ್ ಅವರಿಗೆ ಮರಣೋತ್ತರವಾಗಿ ಪದ್ಮಭೂಷಣ ಡಾ. ಬಿ.ಸರೋಜಾದೇವಿ ರಾಷ್ಟ್ರೀಯ ಪ್ರಶಸ್ತಿಯನ್ನು ಇಂದು ಪ್ರದಾನ ಮಾಡಲಾಯಿತು.

ನಗರದ ಭಾರತೀಯ ವಿದ್ಯಾಭವನದಲ್ಲಿಂದು ನಡೆದ ಕಾರ್ಯಕ್ರಮದಲ್ಲಿ ಹಿರಿಯ ನಟಿ ಡಾ.ಬಿ.ಸರೋಜಾದೇವಿ ಅವರ ಉಪಸ್ಥಿತಿ ಯಲ್ಲಿ ಅಂಬರೀಷ್ ಅವರ ಪತ್ನಿ ಹಾಗೂ ಸಂಸದೆ ಸುಮಲತಾ ಅವರು ಉಪಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವತ್ಥನಾರಾಯಣ ಅವರಿಂದ ಡಾ.ಬಿ.ಸರೋಜಾದೇವಿ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ, ಅಂಬರೀಷ್ ಒಬ್ಬ ಮಹಾನ್ ನಟ. ನನ್ನ ಪ್ರತಿಯೊಂದು ವಿಚಾರದಲ್ಲೂ ಅಂಬರೀಷ್ ಅವರ ಪ್ರಭಾವವಿದ್ದು, ಈ ಪ್ರಶಸ್ತಿ ಅಂಬರೀಷ್ ಅವರಿಗೆ ನೀಡುವ ಅವಕಾಶ ಸಿಕ್ಕಿದ್ದಕ್ಕೆ ಸಂತೋಷವಾಗಿದೆ ಎಂದು ಹೇಳಿದರು.

ಫಿಲಂ ಸಿಟಿಯನ್ನು ಶೀಘ್ರ ನಿರ್ಮಿಸಬೇಕು ಎಂಬುದು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಶಯವಾಗಿದ್ದು, ಬೆಂಗಳೂರಿನಲ್ಲೇ ಫಿಲಂ ಸಿಟಿ ಮಾಡಬೇಕು ಎಂಬ ಚಿಂತನೆ ಇದೆ, ಸ್ಥಳ ಹುಡುಕಾಟ ನಡೆಸಲಾಗುತ್ತಿದೆ ಎಂದರು.

ಏನೇ ಸಮಸ್ಯೆ ಇದ್ದರೂ ಅಂಬರೀಷ್ ಪರಿಹಾರ ನೀಡುತ್ತಿದ್ದರು. ಅವರ ದಾರಿಯಲ್ಲಿ ನಾವು ಸಾಗಬೇಕಾಗಿದೆ ಎಂದ ಅವರು, ಪಿಟೀಲು ಚೌಡಯ್ಯ ಭವನದಂತಹ ಮತ್ತೊಂದು ಸಭಾಂಗಣ ನಿರ್ಮಿಸುವ ಯೋಜನೆ ಇದೆ ಎಂದು ತಿಳಿಸಿದರು.

ಹಿರಿಯ ನಟಿ ಬಿ.ಸರೋಜಾದೇವಿ ಮಾತನಾಡಿ, ನನ್ನ ಪ್ರೀತಿಯ ಸಹೋದರನಿಗೆ ಪ್ರಶಸ್ತಿ ನೀಡಿದ ತೃಪ್ತಿ ಇದೆ. ಉದ್ಯಮದಲ್ಲಿ ಕಷ್ಟವನ್ನು ಹೇಳಿಕೊಳ್ಳಲು ಅಂಬರೀಷ್ ಅವರಂತಹವರಿಲ್ಲ ಎಂಬ ಬೇಸರ ಕಾಡುತ್ತಿದೆ ಎಂದರು.

ಸಂಸದೆ ಸುಮಲತಾ ಮಾತನಾಡಿ, ಅಂಬರೀಷ್ ಅವರೇ ಸ್ವತಃ ಈ ಪ್ರಶಸ್ತಿ ಸ್ವೀಕರಿಸಬೇಕಿತ್ತು. ಈ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಅವರು ತಪ್ಪಿಸಿಕೊಂಡಿದ್ದೇ ಇಲ್ಲ ಎಂದು ಭಾವುಕರಾದರು.

Facebook Comments

Sri Raghav

Admin