12ನೇ ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ಸಿದ್ಧತೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.22- 12ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವವನ್ನು ಅದ್ದೂರಿ ಹಾಗೂ ಯಶಸ್ವಿಯಾಗಿ ನಡೆಸುವ ಸಂಬಂಧ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ ಪುರಾಣಿಕ್ ಅವರು ಚಿತ್ರರಂಗದ ಗಣ್ಯರೊಂದಿಗೆ ವಿಶೇಷ ಸಭೆ ನಡೆಸಿ ಸಲಹೆ ಸೂಚನೆಗಳ ಜತೆಗೆ ಸಂಪೂರ್ಣ ಸಹಕಾರ ನೀಡುವಂತೆ ಕೋರಿದರು.

ಚಿತ್ರೋತ್ಸವದ ಯಶಸ್ವಿಗೆ ಅಗತ್ಯ ಮುಂಜಾಗ್ರತಾ ಕ್ರಮ, ಚಿತ್ರ ಪ್ರದರ್ಶನಗಳ ವ್ಯವಸ್ಥೆ, ಪ್ರವೇಶಪತ್ರಗಳ ವಿತರಣೆ ವ್ಯವಸ್ಥೆ ಮತ್ತು ಚಿತ್ರೋದ್ಯಮದ ಗಣ್ಯರು, ಕಲಾವಿದರು, ತಂತ್ರಜ್ಞರು, ನಿರ್ದೇಶಕರು ಸೇರಿದಂತೆ ಚಿತ್ರರಂಗದ ಎಲ್ಲ ವರ್ಗದ ಜನರು ಸಕ್ರಿಯವಾಗಿ ಪಾಲ್ಗೊಳ್ಳುವ ಸಂಬಂಧ ಸಭೆಯಲ್ಲಿ ಚರ್ಚಿಸಲಾಯಿತು.

ಮುಂದಿನ ದಿನಗಳಲ್ಲಿ ಚಿತ್ರೋತ್ಸವ ವನ್ನು ನಿಗದಿತ ಅವಧಿಯಲ್ಲೇ ನಡೆಸಬೇಕೆಂಬ ಆಶಯದಲ್ಲಿ ಪ್ರತಿ ವರ್ಷ ಫೆಬ್ರವರಿ ಮಾಹೆಯಲ್ಲಿಯೇ ಚಿತ್ರೋತ್ಸವ ನಡೆಸಲು ನಿರ್ಣಯಿಸ ಲಾಯಿತು.
ಈ ಬಾರಿಯ ಚಿತ್ರೋತ್ಸವದಲ್ಲಿ ವಿಶೇಷವಾಗಿ ರೆಡ ಕಾರ್ಪೆಟ ಸ್ಕ್ರೀನಿಂಗ ಮಾಡುವ ಬಗ್ಗೆಯೂ ಚರ್ಚಿಸಲಾಯಿತು. ಸಭೆಯಲ್ಲಿ ವಿಶೇಷವಾಗಿ ಉಚಿತ ಪಾಸು ವಿತರಿಸುವ ವ್ಯವಸ್ಥೆಗೆ ಕಡಿವಾಣ ಹಾಕಿ ಪ್ರತಿಯೊಬ್ಬರೂ ಟಿಕೆಟ ಖರೀದಿಸಿಯೇ ಸಿನಿಮೋತ್ಸವದಲ್ಲಿ ಭಾಗವಹಿಸಬೇಕೆಂಬ ಅಭಿಪ್ರಾಯ ವ್ಯಕ್ತವಾಯಿತು.

ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ಸರ್ಕಾರ ಸಂಪೂರ್ಣ ಸಹಕಾರ ನೀಡಿದ್ದು, ಚಿತ್ರೋದ್ಯಮ ಸಂಪೂರ್ಣ ಸಹಕಾರ ನೀಡುವಂತೆ ಮನವಿ ಮಾಡಿದರು. ಚಿತ್ರೋದ್ಯಮದ ಗಣ್ಯರಾದ ಎಸ್.ವಿ.ರಾಜೇಂದ್ರಸಿಂಗ್ ಬಾಬು, ಗಿರೀಶ್ ಕಾಸರವಳ್ಳಿ, ಟಿ.ಎಸ್. ನಾಗಾಭರಣ, ಎಸ್.ಕೆ.ಭಗವಾನ್, ಪಿ.ಶೇಷಾದ್ರಿ, ಬಿ.ಸುರೇಶ, ಎಚ್.ಎಸ್.ಭಾಸ್ಕರ, ಜಾರ್ಜ್ ಕುಟ್ಟಿ, ಬಿ.ಎಸ್.ಲಿಂಗದೇವರು, ನಟ ದೊಡ್ಡಣ್ಣ, ವಿದ್ಯಾಶಂಕರ್, ಅಕಾಡೆಮಿ ರಿಜಿಸ್ಟ್ರಾರ್ ಹಿಮಂತರಾಜು ಜಿ ಮತ್ತಿತರರಿದ್ದರು.

Facebook Comments