ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಸಿಎಂ ಒಪ್ಪಿಗೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.1- ನಗರದಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ ಏರ್ಪಡಿಸಿರುವ ಕುರಿತು ಇಂದು ಚಿತ್ರರಂಗದ ಗಣ್ಯರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಚರ್ಚಿಸಿದರು.

ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧಕ್ಷ ಸುನಿಲ್ ಪುರಾಣಿಕ್ ನೇತೃತ್ವದಲ್ಲಿ ಚಿತ್ರೋತ್ಸವದ ಕಲಾತ್ಮಕ ನಿರ್ದೇಶಕ ವಿದ್ಯಾಶಂಕರ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜಯರಾಜ್, ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶೃತಿ, ಹಿರಿಯ ಪತ್ರಕರ್ತ ಮುರುಳೀಧರ್ ಕಜಾನೆ, ವಾರ್ತಾ ಇಲಾಖೆ ಆಯುಕ್ತ ಡಾ.ಪಿ.ಎಸ್.ಹರ್ಷ, ನಿಮಾರ್ಪಕ ಲಿಂಗದೇವರು ಅವರನ್ನೊಳಗೊಂಡ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿತು.

ಭೇಟಿ ನಂತರ ಈ ಸಂಜೆಯೊಂದಿಗೆ ಮಾತನಾಡಿದ ಸುನಿಲ್ ಪುರಾಣಿಕ್ ಅವರು, ಫೆ.25ರಂದು 13ನೆ ಅಂತಾರಾಷ್ಟ್ರೀಯ ಚಿತ್ರೋತ್ಸವ ಹಮ್ಮಿಕೊಳ್ಳಬೇಕಿದೆ. ಅದಕ್ಕಾಗಿ ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದು , ಮುಖ್ಯಮಂತ್ರಿಗಳು ಒಪ್ಪಿಗೆ ಕೊಟ್ಟಿದ್ದಾರೆ ಎಂದು ಹೇಳಿದರು. ವಿಶ್ವಾದ್ಯಂತ ಇಂತಹ 5000 ಉತ್ಸವಗಳನ್ನು ಆಯೋಜಿಸಲಾಗುತ್ತದೆ.

ಅದರಲ್ಲಿ ಕೇವಲ 45 ಉತ್ಸವಗಳಿಗೆ ಮಾತ್ರ ಅಂತಾರಾಷ್ಟ್ರೀಯ ಮಾನ್ಯತೆ ಸಿಗುತ್ತದೆ. ಅದರಲ್ಲಿ ನಮ್ಮ ಬೆಂಗಳೂರು ಕೂಡಾ ಒಂದು. ಇದು ನಮಗೆ ಹೆಮ್ಮೆಯ ವಿಷಯ ಎಂದು ತಿಳಿಸಿದರು.

ನಮಗೆ ಅಂತಾರಾಷ್ಟ್ರೀಯ ಮಾನ್ಯತೆ ಸಿಕ್ಕಿರುವುದರಿಂದ ಏನೇ ಆದರೂ ಉತ್ಸವ ನಡೆಯಲೇಬೇಕಿದೆ. ಇದನ್ನು ನಾವು ಯಶಸ್ವಿಗೊಳಿಸಬೇಕು. ಮುಖ್ಯಮಂತ್ರಿಗಳು ಒಪ್ಪಿಗೆ ನೀಡಿರುವುದರಿಂದ ಸಿದ್ಧತೆ ಭರದಿಂದ ಸಾಗಲಿದೆ ಎಂದು ಸುನಿಲ್ ಪುರಾಣಿಕ್ ಹೇಳಿದರು.

Facebook Comments