ಫೆ.26ರಿಂದ ಮಾ.4ರವರೆಗೆ ನಗರದಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.9- ಹನ್ನೆರಡನೆ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಫೆ.26 ರಿಂದ ಮಾರ್ಚ್ 4ರ ವರೆಗೆ ನಡೆಯಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ತಿಳಿಸಿದರು. ಗೃಹ ಕಚೇರಿ ಕೃಷ್ಣಾದಲ್ಲಿ 12ನೆ ಅಂತಾರಾಷ್ಟ್ರೀಯ ಚಿತ್ರೋತ್ಸವದ ಲೋಗೋ ಬಿಡುಗಡೆ ಮಾಡಿ ಮಾತನಾಡಿದ ಅವರು, 26ರಂದು ಸಂಜೆ ನಗರದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಚಿತ್ರೋತ್ಸವಕ್ಕೆ ಚಾಲನೆ ದೊರೆಯಲಿದ್ದು, 27 ರಿಂದ ಚಿತ್ರ ಪ್ರದರ್ಶನ ಆರಂಭಗೊಳ್ಳಲಿದೆ.

ನಗರದ ಒರಾಯನ್ ಮಾಲ್‍ನಲ್ಲಿ ಒಂದು ವಾರದ ಕಾಲ 50 ದೇಶಗಳ 200ಕ್ಕೂ ಹೆಚ್ಚು ಚಿತ್ರಗಳು 14 ವಿಭಾಗಗಳಲ್ಲಿ ಪ್ರದರ್ಶನಗೊಳ್ಳುತ್ತಿವೆ.  ಅದರಲ್ಲಿ ಕನ್ನಡ ಸೇರಿದಂತೆ ಅನೇಕ ಭಾಷೆಗಳ ಚಿತ್ರಗಳು ವಿವಿಧ ವಿಭಾಗಗಳಲ್ಲಿ ಪ್ರದರ್ಶನವಾಗುತ್ತಿದ್ದು, ಇದರಲ್ಲಿ ಹಲವು ದೇಶಗಳ ಪ್ರಮುಖರು ಭಾಗವಹಿಸಿ ಸಿನಿಮಾ ಬೆಳವಣಿಗೆ ಕುರಿತ ಸಂವಾದ, ಉಪನ್ಯಾಸ, ಚಲನಚಿತ್ರ ತಯಾರಿಕೆ, ಚಲನಚಿತ್ರ ಕಲೆ ರಸಗ್ರಹಣ ಶಿಬಿರ, ವಿಚಾರ ಸಂಕಿರಣ, ಕಾರ್ಯಾಗಾರ, ಮಾಸ್ಟರ್‍ಕ್ಲಾಸ್ ವಿಭಾಗದಲ್ಲಿ ಸಿನಿಮಾ ತಜ್ಞರಿಂದ ಉಪನ್ಯಾಸದಂತಹ ಕಾರ್ಯಕ್ರಮಗಳು ನಡೆಯಲಿದ್ದು, ಸಿನಿಮಾಸಕ್ತರಿಗೆ ಮತ್ತು ಸಿನಿಮಾ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಲಿದೆ ಎಂದು ಮಾಹಿತಿ ನೀಡಿದರು.

ಬೆಂಗಳೂರು ನಗರಕ್ಕೆ ವಿಶ್ವ ಸಿನಿಮಾವನ್ನು ಪರಿಚಯಿಸುವ ನಿಟ್ಟಿನಲ್ಲಿ ಚಲನಚಿತ್ರೋತ್ಸವ ಆಯೋಜಿಸಲಾಗುತ್ತಿದ್ದು, ಕನ್ನಡ ಸಿನಿಮಾದ ಸೃಜನಶೀಲ ಮುಖಗಳನ್ನು ವಿಶ್ವದ ನಾನಾ ರಾಷ್ಟ್ರಗಳಿಗೆ ಪರಿಚಯಿಸುವ ಕೆಲಸ ಈ ಮೂಲಕ ನಡೆಯಲಿದೆ.  ಇದೇ ಸಂದರ್ಭದಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ತಮ್ಮನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಿದ ನೂತನ ಅಧ್ಯಕ್ಷ ಸುನಿಲ್ ಪುರಾಣಿಕ್ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಈಗಾಗಲೇ 11 ವರ್ಷಗಳನ್ನು ಪೂರೈಸಿದೆ.

ಈ ಬಾರಿ 12ನೆ ಚಲನಚಿತ್ರೋತ್ಸವ ನಡೆಯುತ್ತಿದ್ದು, ತಮ್ಮ ಅವಧಿಯಲ್ಲಿ ಇದನ್ನು ನಡೆಸುತ್ತಿರುವುದಕ್ಕೆ ಸಂತಸವಾಗಿದೆ ಎಂದರು. ಈ ಹಿಂದೆ ಖಾಸಗಿಯವರು ನಡೆಸುತ್ತಿದ್ದ ಚಿತ್ರೋತ್ಸವವನ್ನು ಯಡಿಯೂರಪ್ಪನವರೇ ಸರ್ಕಾರದಿಂದ ನಡೆಸಲು ಮುಂದಾಗಿ ಯಶಸ್ವಿಯಾಗಿ ಅದನ್ನು ನಡೆಸಿಕೊಂಡು ಬಂದಿದ್ದಾರೆ ಎಂದು ಹೇಳಿದರು.

ಕರ್ನಾಟಕ ಸರ್ಕಾರದ ಈ ಪ್ರತಿಷ್ಠಿತ ಸಿನಿಮೋತ್ಸವವನ್ನು ಚಲನಚಿತ್ರ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿ ಸಹಯೋಗದಲ್ಲಿ ಆಯೋಜಿಸಲಾಗಿದೆ. ರಾಜಾಜಿನಗರದ ಒರಾಯನ್‍ಮಾಲ್‍ನ ಪಿವಿಆರ್‍ನಲ್ಲಿ 11 ಪರದೆಗಳಲ್ಲಿ ಚಿತ್ರೋತ್ಸವದ ವಿಶೇಷ ಪ್ರದರ್ಶನ ನಡೆಯಲಿದೆ.

ಮಾ.4ರಂದು ಮುಕ್ತಾಯ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಏಳು ದಿನಗಳ ಸಿನಿಮೋತ್ಸವದಲ್ಲಿ ವಿಶ್ವಸಿನಿಮಾ, ಚಿತ್ರಭಾರತಿ, ಭಾರತೀಯ ಚಿತ್ರಗಳ ಸ್ಪರ್ಧಾ ವಿಭಾಗ, ಕನ್ನಡ ಸಿನಿಮಾ ಸ್ಪರ್ಧಾ ವಿಭಾಗ, ಏಷಿಯನ್ ಸಿನಿಮಾ, ಆತ್ಮಚರಿತ್ರೆ ಆಧರಿತ ಚಿತ್ರಗಳು ಸೇರಿದಂತೆ ಕಣ್ಮರೆಯಾದ ನಟ-ನಿರ್ದೇಶಕರ ಸ್ಮರಣೆ, ಸಾಕ್ಷ್ಯಚಿತ್ರಗಳನ್ನು ಸಿನಿಮೋತ್ಸವದಲ್ಲಿ ತೆರೆದಿಡಲಾಗಿದೆ.

ಸಿನಿಮೋತ್ಸವದಲ್ಲಿ ಪ್ರೇಕ್ಷಕರಿಗೆ 800ರೂ. ಶುಲ್ಕವಿದ್ದು, ಚಿತ್ರರಂಗದವರು ಮತ್ತು ವಿದ್ಯಾರ್ಥಿಗಳಿಗೆ ಪ್ರವೇಶ ಶುಲ್ಕ 400ರೂ. ಇರಲಿದೆ.  ಈ ಸಂದರ್ಭದಲ್ಲಿ ಸಚಿವರಾದ ಬಸವರಾಜ ಬೊಮ್ಮಾಯಿ, ಎಸ್.ಆರ್.ವಿಶ್ವನಾಥ್, ವಾರ್ತಾ ಇಲಾಖೆ ಕಾರ್ಯದರ್ಶಿ ಮಣಿವಣ್ಣನ್, ರಿಜಿಸ್ಟ್ರಾರ್ ದಿನೇಶ್, ಆಯುಕ್ತ ಸಿದ್ದರಾಮಯ್ಯ, ಕರ್ನಾಟಕ ವಾಣಿಜ್ಯ ಮಂಡಳಿ ಅಧ್ಯಕ್ಷ ಜಯರಾಜ್, ಮುಖ್ಯಮಂತಿಗಳ ಮಾಧ್ಯಮ ಕಾರ್ಯದರ್ಶಿ ಬೃಂಗೇಶ್ ಮತ್ತಿತರರು ಉಪಸ್ಥಿತರಿದ್ದರು.

Facebook Comments