ಚಿತ್ರೋದ್ಯಮಕ್ಕೂ ತಟ್ಟಿದ ಕೊರೊನಾ ಎಫೆಕ್ಟ್, ಚಿತ್ರೀಕರಣ ರದ್ದು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.10- ಕೊರೊನಾ ಭೀತಿಯಿಂದ ವಿದೇಶಕ್ಕೆ ಚಿತ್ರೀಕರಣಕ್ಕೆ ತೆರಳಬೇಕಿದ್ದ ಚಿತ್ರ ತಂಡಗಳು ಅದನ್ನು ರದ್ದುಮಾಡಿರುವ ನಡುವೆ ದೇಶ, ರಾಜ್ಯದಲ್ಲೂ ಕೊರೊನಾ ಸೋಂಕು ಕಂಡುಬಂದಿರುವ ಹಿನ್ನೆಲೆಯಲ್ಲಿ ಇಡೀ ಚಿತ್ರೋದ್ಯಮವೇ ಸಂಕಷ್ಟಕ್ಕೆ ಸಿಲುಕಿದೆ. ದೇಶದ ವಿವಿಧ ರಾಜ್ಯಗಳ ಪ್ರಮುಖ ನಗರಗಳಾದ ಬಾಂಬೆ, ಮತ್ತಿತರೆಡೆ ಚಿತ್ರೀಕರಣಕ್ಕೆ ತೆರಳಬೇಕಿದ್ದ ಚಿತ್ರತಂಡೆಗಳು ಅದನ್ನು ಕ್ಯಾನ್ಸಲ್ ಮಾಡಿ ಚಿತ್ರೀಕರಣದಿಂದ ಹಿಂದೆ ಸರಿದಿವೆ.

ಅಳಿದುಳಿದ ಕಡೆಗಳಲ್ಲಿ ಚಿತ್ರೀಕರಣ ನಡೆಯುತ್ತಿದ್ದರೂ ಅಲ್ಲಿ ಭಾಗವಹಿಸಬೇಕಾದ ಚಿತ್ರತಂಡದ ಕಲಾವಿದರಾದಿಯಾಗಿ, ತಂತ್ರಜ್ಞರು, ಮತ್ತಿತರ ಸಿಬ್ಬಂದಿ ಗೈರು ಹಾಜರಾಗುತ್ತಿರುವುದರಿಂದ ಚಿತ್ರೀಕರಣವೂ ಸರಿಯಾಗಿ ನಡೆಯುತ್ತಿಲ್ಲ. ಇನ್ನು ಚಿತ್ರ ವೀಕ್ಷಿಸಲು ಸಹ ಸಾರ್ವಜನಿಕರು ಹಿಂಜರಿಯುತ್ತಿದ್ದು, ಚಿತ್ರಮಂದಿರಗಳಿಗೆ ಜನ ಬಾರದೆ ಪ್ರದರ್ಶನಕ್ಕೂ ಸಂಕಷ್ಟ ಎದುರಾಗಿದೆ.

ಇತ್ತ ಮಲ್ಟಿಪ್ಲೆಕ್ಸ್-ಮಾಲ್‍ಗಳಿಗೂ ಜನ ಬರುವುದನ್ನು ಕಡಿಮೆ ಮಾಡಿದ್ದು, ಸಾಕಷ್ಟು ಮಾಲ್‍ಗಳು ಖಾಲಿ ಖಾಲಿಯಾಗುತ್ತಿವೆ. ಈ ಎಲ್ಲ ಬೆಳವಣಿಗೆಗಳಿಂದ ಈಗಾಗಲೇ ಚಿತ್ರ ಪೂರ್ಣಗೊಂಡಿದ್ದು, ಚಿತ್ರ ಪ್ರದಶರ್ನಕ್ಕೆ ಸಿದ್ಧವಾಗಿದ್ದ ಚಿತ್ರಗಳ ನಿರ್ದೇಶಕು, ನಿರ್ಮಾಪಕರು ಚಿತ್ರ ಬಿಡುಗಡೆಗೆ ಹಿಂದೆ ಸರಿಯುತ್ತಿದ್ದಾರೆ. ಕೊರೊನಾ ಭೀತಿಯಲ್ಲಿ ಜನ ಸಿನಿಮಾ ಮಂದಿರಗಳಿಗೆ ಬರುತ್ತಿಲ್ಲ. ಇನ್ನು ಚಿತ್ರ ನೋಡಲು ಬಾರದಿದ್ದರೆ ನಷ್ಟ ಕಟ್ಟಿಟ್ಟ ಬುತ್ತಿ ಎಂಬ ಆತಂಕದಲ್ಲಿ ದಿನ ಕಳೆಯುತ್ತಿದ್ದಾರೆ.

ಕೆಲ ದಿನಗಳ ಹಿಂದೆಯೇ ಪವರ್ ಸ್ಟಾರ್ ಪುನಿತ್ ರಾಜ್‍ಕುಮಾರ್ ಅವರ ಯುವರತ್ನ ಚಿತ್ರತಂಡ ವಿದೇಶದಲ್ಲಿ ನಡೆಸಬೇಕಿದ್ದ ಚಿತ್ರೀಕರಣವನ್ನು ನಿಲ್ಲಿಸಿತ್ತು. ಅದೇ ರೀತಿ ದರ್ಶನ್ ಅಭಿನಯದ ರಾಬರ್ಟ್ ಚಿತ್ರ ತಂಡವು ವಿದೇಶಕ್ಕೆ ತೆರಳದೆ ಉಳಿದುಕೊಂಡಿತ್ತು. ಈಗ ಇಡೀ ಚಿತ್ರೋದ್ಯಮವೇ ಕೊರೊನಾ ಭೀತಿ ಎಲ್ಲ ಹಂತದ ಚಿತ್ರ ನಿರ್ಮಾಣ, ಬಿಡುಗಡೆ ಪ್ರದರ್ಶನದ ಮೇಲೂ ಆವರಿಸಿರುವುದರಿಂದ ದೊಡ್ಡಮಟ್ಟದ ನಷ್ಟ ಉಂಟಾಗುವ ಸ್ಥಿತಿ ನಿರ್ಮಾಣವಾಗಿದ್ದು, ಇಡೀ ಉದ್ಯಮವೇ ಕಂಗಾಲಾಗಿದೆ.

Facebook Comments