ಬಿಗ್ ಬ್ರೇಕಿಂಗ್ : ಕೊನೆಗೂ ಡಿಕೆಶಿಗೆ ಸಿಕ್ತು ಜಾಮೀ(ಮೂ)ನು..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಅ.23- ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿ 48 ದಿನಗಳಿಂದ ಜೈಲಿನಲ್ಲಿದ್ದ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಇಂದು ದೆಹಲಿ ಹೈಕೋರ್ಟ್ ಜಾಮೀನು ನೀಡಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಾರಿ ನಿರ್ದೇಶನಾಲಯ ಸೆ.3ರಂದು ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸಿತ್ತು.

ಆರಂಭದಲ್ಲಿ ನಾಲ್ಕು ದಿನ ವಿಚಾರಣೆಗೊಳಗಾದ ಡಿ.ಕೆ.ಶಿವಕುಮಾರ್ ಅವರು, ಬಂಧನದ ನಂತರ 14 ದಿನಗಳ ಕಾಲ ಜಾರಿನಿರ್ದೇಶನಾಲಯದ ವಶದಲ್ಲಿದ್ದು ವಿಚಾರಣೆ ಎದುರಿಸಿದರು. ಅನಂತರ ಡಿ.ಕೆ.ಶಿವಕುಮಾರ್ ಅವರನ್ನು ನ್ಯಾಯಾಲಯ ಬಂಧನಕ್ಕೆ ಒಪ್ಪಿಸಲಾಗಿತ್ತು.

ಅ.24ಕ್ಕೆ ಅವರ ನ್ಯಾಯಾಂಗ ಬಂಧನದ ಅವಧಿ ಮುಕ್ತಾಯಗೊಳ್ಳಲಿತ್ತು. ಈ ಮಧ್ಯೆ ಡಿ.ಕೆ.ಶಿವಕುಮಾರ್ ಅವರ ಅರ್ಜಿಯನ್ನು ಪರಿಗಣಿಸಿದ ದೆಹಲಿ ಹೈಕೋರ್ಟ್ ನ್ಯಾಯಾಧೀಶರಾದ ಸುರೇಶ್‍ಕುಮಾರ್ ಕೈಟಾ ಅವರು ಜಾಮೀನು ಮಂಜೂರು ಮಾಡಿದ್ದಾರೆ. ಜಾಮೀನು ಜೊತೆಗೆ ಹೈಕೋರ್ಟ್ ಹಲವು ಷರತ್ತುಗಳನ್ನು ವಿಧಿಸಿದ್ದು, 25 ಲಕ್ಷ ರೂ. ಬಾಂಡ್ ನೀಡಬೇಕು, ವಿದೇಶಿ ಪ್ರಯಾಣ ಕೈಗೊಳ್ಳುವಂತಿಲ್ಲ, ಪಾಸ್‍ ಪೋರ್ಟ್‍ನ್ನು ಸರೆಂಡರ್ ಮಾಡಬೇಕು, ಜಾರಿ ನಿರ್ದೇಶನಾಲಯದ ವಿಚಾರಣೆಗೆ ಸಹಕರಿಸಬೇಕು, ಜಾಮೀನು ಆದೇಶದ ಪ್ರತಿಯನ್ನು ಕೆಳಹಂತದ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಷರತ್ತು ವಿಧಿಸಲಾಗಿದೆ.

ಹೈಕೋರ್ಟ್‍ನಲ್ಲಿ ತೀರ್ಪು ಪ್ರಕಟಗೊಳ್ಳುತ್ತಿದ್ದಂತೆ ನ್ಯಾಯಾಲಯದಲ್ಲಿದ್ದ ಡಿ.ಕೆ.ಶಿವಕುಮಾರ್ ಸೋದರ ಹಾಗೂ ಸಂಸದ ಡಿ.ಕೆ.ಸುರೇಶ್ ಅವರು ಖುಷಿಯಿಂದ ವಕೀಲರನ್ನು ತಬ್ಬಿಕೊಂಡು ಅಭಿನಂದಿಸಿದ್ದಲ್ಲದೆ ಕಣ್ಣೀರು ಸುರಿಸಿದರು.

ಜಾರಿ ನಿರ್ದೇಶನಾಲಯ ದಾಖಲಿಸಿದ್ದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್ ಅವರು ಜಾಮೀನು ಪಡೆದು ಜೈಲಿನಿಂದ ಹೊರಬರುವ ನಿರೀಕ್ಷೆ ಇದೆ. ಆದರೆ ಈ ನಡುವೆ ಸಿಬಿಐ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು, ಡಿ.ಕೆ.ಶಿವಕುಮಾರ್ ಅವರನ್ನು ಬಿಡುಗಡೆಗೂ ಮುನ್ನ ತಮ್ಮ ವಶಕ್ಕೆ ಪಡೆದುಕೊಳ್ಳಲು ಸಿದ್ದತೆ ನಡೆಸಿದೆ ಎಂದು ಹೇಳಲಾಗಿದೆ.

ಒಂದು ವೇಳೆ ಇದು ಸಾಧ್ಯವಾದರೆ ಜಾಮೀನು ಪಡೆದರೂ ಡಿ.ಕೆ.ಶಿವಕುಮಾರ್ ಬಿಡುಗಡೆಯಾಗದಿರುವ ಅವಕಾಶಗಳಿವೆ. ಜಾಮೀನಿನಿಂದ ಡಿ.ಕೆ.ಶಿವಕುಮಾರ್ ಬಿಡುಗಡೆಯಾಗಿದ್ದೇ ಆದರೆ ಕುಟುಂಬದ ಜೊತೆ ದೀಪಾವಳಿ ಆಚರಿಸುವ ಅವಕಾಶ ಪಡೆಯಲಿದ್ದಾರೆ. ಈ ಹಿಂದೆ ಗೌರಿ ಹಬ್ಬದ ಸಂದರ್ಭದಲ್ಲಿ ಜಾರಿ ನಿರ್ದೇಶನಾಲಯದ ವಿಚಾರಣೆಯಿಂದಾಗಿ ಹಿರಿಯರಿಗೆ ಧೂಪ ಹಾಕುವ ಅವಕಾಶವನ್ನು ತಪ್ಪಿಸಿಕೊಂಡು ಕಣ್ಣೀರು ಹಾಕಿದ್ದರು.

Facebook Comments

Sri Raghav

Admin