ರಾಜಕೀಯ ದ್ವೇಷಕ್ಕೆ ದನದ ಕೊಟ್ಟಿಗೆ ಬೆಂಕಿ..!

ಈ ಸುದ್ದಿಯನ್ನು ಶೇರ್ ಮಾಡಿ

ಅಜ್ಜಂಪುರ, ಜ.2- ಗ್ರಾಮ ಪಂಚಾಯಿತಿ ಚುನಾವಣಾ ರಾಜಕೀಯ ದ್ವೇಷಕ್ಕೆ ದನದ ಕೊಟ್ಟಿಗೆಯೊಂದು ಬಲಿಯಾಗಿದೆ. ಚುನಾವಣಾ ಫಲಿತಾಂಶ ಬಂದ ನಂತರ ಅಹಿತಕರ ಘಟನೆಗಳು ನಡೆಯುತ್ತಿರುವುದು ಹೆಚ್ಚಾಗುತ್ತಿದೆ. ತಾಲ್ಲೂಕಿನ ಜಾವೂರು ಹೊಸಳ್ಳಿ ಗ್ರಾಮದಲ್ಲಿ ದುಷ್ಕರ್ಮಿಗಳು ಗೆದ್ದ ಅಭ್ಯರ್ಥಿಯ ದನದ ಕೊಟ್ಟಿಗೆಗೆ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿರುವ ಘಟನೆ ನಡೆದಿದೆ.

ಗ್ರಾಮದ ಚಂದ್ರಪ್ಪ ಎಂಬುವವರು ಗ್ರಾಪಂ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಅಸೂಯೆಯಿಂದ ಇವರ ದನದ ಕೊಟ್ಟಿಗೆಗೆ ದುಷ್ಕರ್ಮಿಗಳು ಬೆಂಕಿ ಇಟ್ಟಿದ್ದರಿಂದ ಕೊಟ್ಟಿಗೆ ಸಂಪೂರ್ಣ ಸುಟ್ಟು ಭಸ್ಮವಾಗಿದೆ ಎಂದು ಹೇಳಲಾಗಿದೆ. ನಿನ್ನೆಯಷ್ಟೇ ಚಿತ್ರದುರ್ಗ ಜಿಲ್ಲೆ, ಚಳ್ಳಕೆರೆಯ ಸಾಣಿಕೆರೆ ಗ್ರಾಮದ ಹೊಟೇಲ್‍ವೊಂದಕ್ಕೆ ಬೆಂಕಿ ಹಚ್ಚಿದ ಘಟನೆ ನಡೆದಿತ್ತು.

ಸಾಣಿಕೆರೆ ಗ್ರಾಪಂ ಚುನಾವಣೆಯಲ್ಲಿ ಇಬ್ಬರು ಅಭ್ಯರ್ಥಿಗಳು ಸಮಮತ ಪಡೆದು ಸಮಬಲ ಸಾಧಿಸಿದ್ದರು. ಚುನಾವಣಾಧಿಕಾರಿಗಳ ಸಮಕ್ಷಮದಲ್ಲಿ ಟಾಸ್ ಮೂಲಕ ಸದಸ್ಯರನ್ನು ಆಯ್ಕೆ ಮಾಡಿದ್ದರು. ಫಲಿತಾಂಶ ಹೊರಬಿದ್ದ 24 ಗಂಟೆಯಲ್ಲಿ ಗೆದ್ದ ಅಭ್ಯರ್ಥಿಯ ಹೊಟೇಲ್‍ಗೆ ಬೆಂಕಿ ಇಡಲಾಗಿತ್ತು. ಈಗ ಅಜ್ಜಂಪುರದ ಜಾವೂರು ಹೊಸಳ್ಳಿಯ ಚಂದ್ರಪ್ಪ ಅವರ ದನದ ಕಟ್ಟಿಗೆಗೆ ಬೆಂಕಿ ಹಚ್ಚಲಾಗಿದೆ.

ಗ್ರಾಪಂ ಚುನಾವಣೆ ಫಲಿತಾಂಶ ಘೋಷಣೆಯಾದ ನಂತರ ಅಹಿತಕರ ಘಟನೆಗಳು ನಡೆಯುತ್ತಿರುವುದು ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ಚುನಾವಣೆ ಪೂರ್ವದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಿರಲಿಲ್ಲ. ಫಲಿತಾಂಶ ಘೋಷಣೆಯಾದ ನಂತರ ಗ್ರಾಮಗಳಲ್ಲಿ ಇಂತಹ ಘಟನೆಗಳು ನಡೆಯುತ್ತಿರುವುದು ಕಂಡುಬರುತ್ತಿದೆ.

Facebook Comments