ಬೆಂಕಿ ಅವಘಡದ ನಡುವೆಯೂ ನಿಲ್ಲದ ‘ಈ ಸಂಜೆ’ ಪತ್ರಿಕೆ ಮುದ್ರಣ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.20-ಆಕಸ್ಮಿಕ ಬೆಂಕಿ ಅವಘಡದಿಂದ ಈ ಸಂಜೆ ಪತ್ರಿಕೆ ಸಿಬ್ಬಂದಿಗಳಲ್ಲಿ ಆತಂಕ ಮನೆ ಮಾಡಿದ್ದರೂ ಧೃತಿಗೆಡದ ಸಂಪಾದಕಿಯ ವಲಯ ಸಾರ್ವಜನಿಕರಿಗೆ ಪತ್ರಿಕೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವಘಡದಿಂದ ಇಡೀ ಕಚೇರಿ ಬೆಂಕಿಗಾಹುತಿಯಾಗಿದ್ದರೂ ಸಂಪಾದಕರು ಸಿಬ್ಬಂದಿಗಳಿಗೆ ಧೈರ್ಯ ತುಂಬಿ ಪತ್ರಿಕೆ ಕಾರ್ಯ ಕೈಗೊಳ್ಳಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಿದ ಪರಿಣಾಮ ಇಂದು ಕೂಡ ಈ ಸಂಜೆ ಪತ್ರಿಕೆ ಓದುಗರ ಕೈಸೇರಲು ಸಾಧ್ಯವಾಗಿದೆ.

ಓದುಗರೆ ಅನ್ನದಾತರು ಅವರಿಗೆ ಪತ್ರಿಕೆ ತಲುಪಿಸುವುದು ನಮ್ಮ ಕರ್ತವ್ಯ ಎಂಬ ಸಂಪಾದಕರ ಕಿವಿಮಾತಿನಿಂದ ಸ್ಫೂರ್ತಿ ಪಡೆದ ಸಂಪಾದಕಿಯ ವಲಯ ಪರ್ಯಾಯ ವ್ಯವಸ್ಥೆ ಮಾಡಿಕೊಂಡು ಎಂದಿನಂತೆ ಪತ್ರಿಕೆ ಮುದ್ರಣ ಕಾರ್ಯವನ್ನು ಮುಂದುವರೆಸಿದೆ.ಎಂತಹ ಸಂದರ್ಭದಲ್ಲೂ ಪತ್ರಿಕೆ ನಿಲ್ಲಬಾರದು ಎಂಬ ನಿಲುವಿಗೆ ಸಂಸ್ಥೆ ಕಂಕಣಬದ್ಧವಾಗಿದ್ದು, ನಾಳೆಯಿಂದ ಎಂದಿನಂತೆ ನಿಮ್ಮ ನೆಚ್ಚಿನ ಪತ್ರಿಕೆ ಎಲ್ಲಾ ಮಳಿಗೆಗಳಲ್ಲೂ ಸಿಗಲಿದೆ ಎಂದು ಸಂಪಾದಕರು ಭರವಸೆ ನೀಡಿದ್ದಾರೆ.

ಈ ಹಿಂದೆ ಕಾವೇರಿ ಗಲಭೆ, ವರನಟ ಡಾ.ರಾಜ್‍ಕುಮಾರ್ ಅಪಹರಣದಂತ ಸಂದಿಗ್ಧ ಸಂದರ್ಭದಲ್ಲಿ ನಡೆದ ಗೋಲಿಬಾರ್, ಕಪ್ರ್ಯೂ ನಡುವೆಯೂ ನಿರ್ಭೀಡತೆಯಿಂದ ಪತ್ರಿಕೆ ಹೊರತರಲಾಗಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.

# 4 ಕೋಟಿಗೂ ಹೆಚ್ಚು ನಷ್ಟ!
ಆಕಸ್ಮಿಕ ಬೆಂಕಿ ಅವಘಡದಿಂದ ಈ ಸಂಜೆ ಪತ್ರಿಕಾಲಯ ಸಂಪೂರ್ಣ ಬೆಂಕಿಗಾಹುತಿಯಾಗಿದ್ದು ಅಂದಾಜು 4 ಕೋಟಿಯಷ್ಟು ನಷ್ಟವಾಗಿದೆ.  ನಿನ್ನೆ ಸಂಜೆ ಐದು ಗಂಟೆ ಸುಮಾರಿಗೆ ರಾಜಾಜಿನಗರದ ರಾಜ್‍ಕುಮಾರ್ ರಸ್ತೆಯಲ್ಲಿರುವ ಈ ಸಂಜೆ ಕೇಂದ್ರ ಕಚೇರಿಯಲ್ಲಿ ಶಾರ್ಟ್ ಸಕ್ರ್ಯೂಟ್‍ನಿಂದ ಈ ಅವಘಡ ಸಂಭವಿಸಿದ್ದು ಘಟನೆಯಲ್ಲಿ ಕೋಟ್ಯಾಂತರ ಮೌಲ್ಯದ ವಸ್ತುಗಳು ಆಗ್ನಿಗೆ ಆಹುತಿಯಾಗಿವೆ.

ಈ ಸಂಜೆ ಕೇಂದ್ರ ಕಚೇರಿಯ ಕಟ್ಟಡದ ಮೊದಲ ಮಹಡಿಯಲ್ಲಿ ಶಾರ್ಟ್ ಸಕ್ರ್ಯೂಟ್‍ನಿಂದ ಮೊದಲ ಹೊಗೆ ಕಾಣಿಸಿಕೊಂಡಿತ್ತು. ಡನೋಡುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆ ಇಡೀ ಕಚೇರಿಯನ್ನು ಆವರಿಸಿಕೊಂಡಿತು.

ಘಟನೆಯಲ್ಲಿ ನೂರಾರು ಕಂಪ್ಯೂಟರ್‍ಗಳು, ಪೀಠೊಪಕರಣಗಳು, ದಾಖಲೆಗಳು, ಹವಾನಿಯಂತ್ರಕಗಳು ಸೇರಿದಂತೆ ಕೋಟ್ಯಂತರ ಮೌಲ್ಯದ ವಸ್ತುಗಳು ಸಂಪೂರ್ಣ ನಾಶವಾಗಿವೆ.ನಿನ್ನೆ ಭಾನುವಾರವಾದ್ದರಿಂದ ಕಚೇರಿಯಲ್ಲಿ ಹೆಚ್ಚಿನ ಸಿಬ್ಬಂದಿಗಳು ಹಾಜರಿರಲಿಲ್ಲ. ಹೀಗಾಗಿ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಬೆಂಕಿ ಕಾಣಿಸಿಕೊಂಡ ಸುದ್ದಿ ತಿಳಿದ ಕೂಡಲೆ ಸ್ಥಳಕ್ಕೆ ದೌಡಾಯಿಸಿದ ಆರು ಅಗ್ನಿಶಾಮಕ ದಳದ ವಾಹನಗಳು ಸತತ ಎರಡು ಗಂಟೆಗಳ ಕಾಲ ಕಾರ್ಯಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿವೆ. ಸ್ಥಳಕ್ಕೆ ಮಾಜಿ ಸಚಿವರಾದ ಸುರೇಶ್‍ಕುಮಾರ್, ಚಲುವರಾಯಸ್ವಾಮಿ ಮತ್ತಿತರ ಗಣ್ಯರು ಆಗಮಿಸಿ ಪರಿಸ್ಥಿತಿ ಅವಲೋಕಿಸಿದರು.  ಘಟನೆ ಸಂಬಂಧ ಈ ಸಂಜೆ ಸಂಪಾದಕರೊಂದಿಗೆ ಸಮಾಲೋಚನೆ ನಡೆಸಿ ಮಾಹಿತಿ ಪಡೆದರು.

ರಾಜಾಜಿನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ.
ಅಗ್ನಿಶಾಮಕ ದಳದ ಹಿರಿಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

Facebook Comments

Sri Raghav

Admin