ಧಗಧಗಿಸಿದ 49 ಅಂತಸ್ತುಗಳ ಕಟ್ಟಡ, ನಿವಾಸಿಗಳ ಸೇಫ್, ಅನೇಕರಿಗೆ ಗಾಯ..!

ಈ ಸುದ್ದಿಯನ್ನು ಶೇರ್ ಮಾಡಿ

ಶಾರ್ಜಾ , ಮೇ 6- ಸಂಯುಕ್ತ ಅರಬ್ ಗಣರಾಜ್ಯದ(ಯುಎಇ) ಶಾರ್ಜಾ 49 ಮಹಡಿಗಳ ಮುಗಿಲಚುಂಬಿ ಕಟ್ಟಡದಲ್ಲಿ ನಿನ್ನೆ ರಾತ್ರಿ ಭಾರೀ ಆಗ್ನಿ ಆಕಸ್ಮಿಕ ಸಂಭವಿಸಿದ್ದು, ನಿವಾಸಿಗಳೆಲ್ಲರನ್ನೂ ರಕ್ಷಿಸಲಾಗಿದೆ. ಅನೇಕರು ಗಾಯಗೊಂಡಿದ್ದರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಶಾರ್ಜಾ ಅಬ್ಬಾಕೋ ಎಂಬ ವಸತಿ ಕಟ್ಟಡದ 10ನೇ ಮಹಡಿಯಲ್ಲಿ ನಿನ್ನೆ ರಾತ್ರಿ 9 ಗಂಟೆ ಸುಮಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಮೇಲಂತಸ್ತಿನ 39 ಫ್ಲೋರ್‍ಗಳಿಗೂ ವ್ಯಾಪಿಸಿತ್ತು.

ತಕ್ಷಣ ಕಾರ್ಯಪ್ರವೃತ್ತರಾದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಟ್ರಕ್‍ಗಳು ಮತ್ತು ಡ್ರೋನ್‍ಗಳೊಂದಿಗೆ ಸ್ಥಳಕ್ಕೆ ಧಾವಿಸಿದರು. ಇಡೀ ರಾತ್ರಿ ಕಾರ್ಯಾಚರಣೆ ನಡೆಸಿ ಬಹು ಪ್ರಯಾಸದಿಂದ ಬೆಂಕಿಯನ್ನು ನಂದಿಸಿದರು.

ಈ ದುರ್ಘಟನೆಯಲ್ಲಿ ಮಕ್ಕಳು, ಮಹಿಳೆಯರು ಮತ್ತು ವೃದ್ಧರೂ ಸೇರಿದಂತೆ ಅನೇಕರು ಗಾಯಗೊಂಡಿದ್ಧಾರೆ. ಕೆಲವರಿಗೆ ಸುಟ್ಟ ಗಾಯಗಳಾಗಿದ್ದು, ದಟ್ಟ ಹೊಗೆಯಿಂದ ಕೆಲವರಿಗೆ ಉಸಿರಾಟದ ಸಮಸ್ಯೆಯಾಗಿದ್ದು ಆಸ್ಪತ್ರೆಗೆ ಸೇರಿಸಲಾಗಿದೆ.

ಕಟ್ಟಡದಿಂದ ಎಲ್ಲರನ್ನೂ ತೆರವುಗೊಳಿಸಲಾಗಿದೆ ಎಂದು ಅಗ್ನಿಶಮನ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಉನ್ನತಾಧಿಕಾರಿಯೊಬ್ಬರು ಹೇಳಿದ್ದಾರೆ. ಶಾರ್ಜಾ ನಾಗರಿಕ ರಕ್ಷಣಾ ದಳದ ಸಿಬ್ಬಂದಿ ಸಮಯ ಪ್ರಜ್ಞೆ ಮತ್ತು ಕ್ಷಿಪ್ರ ಕಾರ್ಯಾಚರಣೆಯಿಂದ ಭಾರೀ ಅನಾಹುತ ತಪ್ಪಿದಂತಾಗಿದೆ.

Facebook Comments

Sri Raghav

Admin