ಬಿಬಿಎಂಪಿ ಎಇಇ ಕಚೇರಿಯಲ್ಲಿ ಬೆಂಕಿ, ದಾಖಲೆಗಳು ಭಸ್ಮ , ಅವ್ಯವಹಾರದ ಘಾಟು, ತನಿಖೆಗೆ ಆದೇಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಮೇ.3- ಮಹದೇವಪುರ ವಲಯ ಬೆಳ್ಳಂದೂರು ಇಂಜಿನಿಯರಿಂಗ್ ವಿಭಾಗ ಕಚೇರಿಯಲ್ಲಿ ಇಂದು ಬೆಳ್ಳಂಬೆಳಗ್ಗೆ ಕಾಣಿಸಿಕೊಂಡ ಬೆಂಕಿಗೆ ಮಹತ್ವದ ದಾಖಲೆಗಳು, ಕಂಪ್ಯೂಟರ್, ಪೀಠೋಪಕರಣಗಳು ಸುಟ್ಟು ಹೋಗಿವೆ.ವಿದ್ಯುತ್ ಶಾರ್ಟ್‍ಸಕ್ರ್ಯೂಟ್‍ನಿಂದ ದುರಂತ ಸಂಭವಿಸಿದೆ ಎಂದು ಹೇಳಲಾಗುತ್ತಿದೆಯಾದರೂ ಈ ಘಟನೆ ಹಿಂದೆ ಟಿಡಿಆರ್ ಮಾಫಿಯಾ ಕೈವಾಡದ ಬಲವಾದ ಶಂಕೆ ವ್ಯಕ್ತವಾಗಿದೆ.

ಇತ್ತೀಚೆಗೆ ಎಸಿಬಿ ಬಲೆಗೆ ಬಿದ್ದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಕೃಷ್ಣಲಾಲ್ ಅವರು ಗರುಡಾಚಾರ್ ಪಾಳ್ಯದಲ್ಲಿ ಪಾಲಿಕೆಯ 150 ಮೀಟರ್ ಆಸ್ತಿಯನ್ನು ಖಾಸಗಿ ವ್ಯಕ್ತಿಗಳಿಗೆ ನಕಲಿ ದಾಖಲೆ ಮೂಲಕ 60 ಕೋಟಿ ರೂ.ಗಳಷ್ಟು ಟಿಡಿಆರ್ ನೀಡಿದ್ದರು. ಈ ಜಾಡು ಹಿಡಿದ ಎಸಿಬಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದರು.

ನೂರಾರು ಕೋಟಿ ರೂ. ಟಿಡಿಆರ್ ಪ್ರಕರಣದಲ್ಲಿ ಎಸಿಬಿ ಬಲೆಗೆ ಬಿದ್ದಿದ್ದ ಕೃಷ್ಣಲಾಲ್ ಅವರ ಬಗ್ಗೆ ತನಿಖೆ ನಡೆಸುತ್ತಿದ್ದ ಎಸಿಬಿ ತಂಡ ಪ್ರಮುಖ ದಾಖಲೆಗಳನ್ನು ಸಂಗ್ರಹಿಸಲು ವಿಶೇಷ ತಂಡ ರಚಿಸಿತ್ತು.

ಈ ತಂಡ ಮಾಹಿತಿ ಸಂಗ್ರಹಿಸುತ್ತಿತ್ತು. ಈತನ ವಿರುದ್ಧ ಏನೇನು ಕ್ರಮ ಕೈಗೊಳ್ಳುತ್ತದೆ. ಯಾವ ಯಾವ ದಾಖಲೆಗಳನ್ನು ಸಂಗ್ರಹಿಸುತ್ತಿದೆ ಎಂಬ ಬಗ್ಗೆ ಈತನ ಆಪ್ತ ಪ್ರಸ್ತುತ ಅಮಾನತು ಆಗಿರುವ ಹನುಮಂತಯ್ಯ ಎಂಬುವವರು ಎಲ್ಲಾ ದಾಖಲೆಗಳ ಝೆರಾಕ್ಸ್ ಪ್ರತಿಯನ್ನು ಕೃಷ್ಣ ಲಾಲ್ ಅವರಿಗೆ ತಲುಪಿಸುತ್ತಿದ್ದರು.

ಪ್ರಾಸಿಕ್ಯೂಷನ್‍ಗೆ ಫ್ಯಾಕ್ಸ್ ಮಾಡುವ ವೇಳೆ ಹನುಮಂತಯ್ಯ ಮಾಹಿತಿಯನ್ನು ಲೀಕ್ ಮಾಡಿದ್ದ. ಜೆರಾಕ್ಸ್ ಪ್ರತಿಗಳನ್ನು ಕೃಷ್ಣಲಾಲ್‍ಗೆ ನೀಡಿದ್ದ. ಇದರಿಂದ ಟಿಡಿಆರ್‍ಗೆ ಸಂಬಂಧಿಸಿದ ಮಾಹಿತಿಯನ್ನು ಕೃಷ್ಣಲಾಲ್ ಗೌಪ್ಯವಾಗಿರಿಸಿದ್ದ. ಮಾಹಿತಿ ಸೋರಿಕೆ ವಿಚಾರದಲ್ಲಿ ಉನ್ನತ ಅಧಿಕಾರಿಗಳು ಹನುಮಂತಯ್ಯನನ್ನು ಅಮಾನತು ಮಾಡಿದ್ದಾರೆ.

ಟಿಡಿಆರ್ ಜಾಡನ್ನು ಬೇಧಿಸುತ್ತಿದ್ದ ಎಸಿಬಿ ತಂಡದ ಸುಳಿವರಿತ ತಲೆಮರೆಸಿಕೊಂಡಿರುವ ಕೃಷ್ಣಲಾಲ್ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಎಸಿಬಿ ತಂಡ ಇವರು ಈ ಹಿಂದೆ ಕರ್ತವ್ಯ ನಿರ್ವಹಿಸಿದ್ದ ಮಹದೇವಪುರ ವಲಯದ ಎಂಜಿನಿಯರಿಂಗ್ ವಿಭಾಗದ ಕಚೇರಿಯಲ್ಲೂ ತನಿಖೆ ನಡೆಸಬೇಕಾಗಿತ್ತು.

ಈ ಸಂದರ್ಭದಲ್ಲೇ ಮಹದೇವಪುರ ವಲಯದ ಬೆಳ್ಳಂದೂರು ಎಂಜಿನಿಯರಿಂಗ್ ವಿಭಾಗದ ಕಚೇರಿಗೆ ಬೆಂಕಿಬಿದ್ದು ದಾಖಲೆಗಳು ನಾಶವಾಗಿರುವುದಕ್ಕೆ ಸಾಕಷ್ಟು ಅನುಮಾನಗಳು ಉಂಟಾಗಿವೆ. ಈ ಕಚೇರಿಯಲ್ಲಿ ಟಿಡಿಆರ್‍ಗೆ ಸಂಬಂಧಿಸಿದ ದಾಖಲೆಗಳು ನಾಶವಾಗಿರುವ ಸಾಧ್ಯತೆ ಇದೆ.

ತನಿಖೆಗೆ ಆದೇಶ : ಬೆಳ್ಳಂದೂರು ಬಿಬಿಎಂಪಿ ಕಚೇರಿಗೆ ಬೆಂಕಿ ಬಿದ್ದಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದ್ದು, ಮಹದೇವಪುರ ಜಂಟಿ ಆಯುಕ್ತರ ನೇತೃತ್ವದಲ್ಲಿ ಸಮಿತಿ ರಚಿಸಿದ್ದು ಸಂಜೆಯೊಳಗೆ ವರದಿ ನೀಡಲಿದ್ದಾರೆ ಎಂದು ತಿಳಿಸಿದ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ವರದಿಯ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಕಿಗೆ ಹಲವು ಕಡತಗಳು ಸುಟ್ಟು ಭಸ್ಮವಾಗಿವೆ. ಕಚೇರಿಯಲ್ಲಿ ಟಿಡಿಆರ್‍ಗೆ ಸಂಬಂಧಿಸಿದ ದಾಖಲೆಗಳು ಸುಟ್ಟಿರಬಹುದು. ಯಾರಾದರೂ ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಿದ್ದಾರಾ? ಬೆಂಕಿ ಹೇಗೆ ಹೊತ್ತಿದೆ ಎಂಬ ಬಗ್ಗೆ ವರದಿ ಪಡೆಯುತ್ತೇನೆ.

ಈಗಾಗಲೇ ನಮ್ಮ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಮಹದೇವಪುರ ಜಂಟಿ ಆಯುಕ್ತರು ಸ್ಥಳಪರಿಶೀಲನೆ ಮಾಡಿದ್ದಾರೆ. ಅಧಿಕಾರಿಗಳಿಂದ ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

Facebook Comments