ಒಂದೇ ಒಂದು ಕ್ಷಣ ಯೋಚಿಸಿದ್ದರೆ ಘೋರ ದುರಂತ ತಪ್ಪುತ್ತಿತ್ತು..!

ಈ ಸುದ್ದಿಯನ್ನು ಶೇರ್ ಮಾಡಿ

Firing-Family
ಬೆಂಗಳೂರು,ಜೂ.25- ಪಿಸ್ತೂಲಿನ ಟ್ರಿಗರ್ ಒತ್ತುವ ಮುನ್ನ ಒಂದು ಕ್ಷಣ ಯೋಚಿಸಿದ್ದರೆ ಪತ್ನಿ ಸಾಯುತ್ತಿರಲಿಲ್ಲ. ಮುದ್ದಾದ ಮೂರು ಮಕ್ಕಳು ತಬ್ಬಲಿಗಳಾಗುತ್ತಿರಲಿಲ್ಲ. ತಾನೂ ತಲೆ ತಗ್ಗಿಸಿಕೊಂಡು ಆರೋಪಿ ಸ್ಥಾನದಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಬರುತ್ತಿರಲಿಲ್ಲ. ತಾಳ್ಮೆ ಕಳೆದುಕೊಂಡ ಪರಿಣಾಮ ಇಂದು ಉದ್ಯಮಿ ಗಣೇಶ್ ಅವರ ಕುಟುಂಬವೇ ಬೀದಿಪಾಲಾಗಿದೆ.

ವ್ಯವಹಾರದ ನಿಮಿತ್ತ ಮಾಡಿಕೊಂಡಿದ್ದ ಕೋಟ್ಯಂತರ ರೂ. ಸಾಲ ತೀರಿಸಲು ಮನೆ ಮಾರಲು ಸಮ್ಮತಿಸದ ಪತ್ನಿಯ ಹಠಕ್ಕೆ ಬೇಸತ್ತು ತನ್ನ ಕುಟುಂಬದವರ ಮೇಲೆ ಗುಂಡು ಹಾರಿಸಿದ ಗಣೇಶ್ ಈಗ ಪಶ್ಚಾತಾಪ ಪಡುತ್ತಿದ್ದಾನೆ. ಆದರೆ ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಏನೂ ಫಲವಿಲ್ಲ ಎನ್ನುವಂತಾಗಿದೆ ಆತನ ಪರಿಸ್ಥಿತಿ. ಗಣೇಶ್ ದುಡುಕಿನಲ್ಲಿ ಹಾರಿಸಿದ ಗುಂಡಿಗೆ ಪತ್ನಿ ಸಹನ ಇಹಲೋಕ ತ್ಯಜಿಸಿದ್ದಾರೆ. ಗುಂಡೇಟಿನಿಂದ ಗಾಯಗೊಂಡಿರುವ ಆತನ ಮುದ್ದಾದ ಎರಡು ಮಕ್ಕಳು ಪ್ರಾಣಪಾಯದಿಂದ ಪಾರಾಗಿದ್ದಾರೆ. ಆದರೆ ಅಮ್ಮನಿಲ್ಲ. ಅಪ್ಪ ಜೈಲು ಪಾಲಾದರೆ ಇನ್ನು ಆ ಮಕ್ಕಳ ಗತಿಯೇನು?

ಗಣೇಶ್‍ಗೆ ಎರಡು ಮಕ್ಕಳು. ಜೊತೆಗೆ ದತ್ತು ಪುತ್ರಿ. ಇವರಲ್ಲಿ ಒಂದು ಮಗು ವಿಕಲಚೇತನ. ದುಡುಕಿನಲ್ಲಿ ಆತ ಪತ್ನಿ ಮತ್ತು ಮಕ್ಕಳ ಮೇಲೆ ಗುಂಡು ಹಾರಿಸಿದ ಸಂದರ್ಭದಲ್ಲಿ ವಿಕಲಚೇತನ ಮಗುವಿನ ಮೇಲೆ ಫೈರಿಂಗ್ ಮಾಡುವ ಮನಸ್ಸು ಮಾಡಿಲ್ಲ. ಇದೇ ಮಮಕಾರವನ್ನು ಪತ್ನಿ , ಮಕ್ಕಳ ಮೇಲೂ ತೋರಿದ್ದರೆ ಇಂದು ಇಂತಹ ಅನಾಹುತ ಸಂಭವಿಸುತ್ತಿರಲಿಲ್ಲ.

ಗಣೇಶ್ ಮಾಡಿದ್ದು ವ್ಯವಹಾರಿಕ ಸಾಲ.ಆತ ಯಾವುದೋ ಚಟಕ್ಕೆ ಬಿದ್ದು ನಷ್ಟ ಮಾಡಿಕೊಂಡಿರಲಿಲ್ಲ. ಮನಸ್ಸು ಮಾಡಿದ್ದರೆ ತನ್ನ ಆಸ್ತಿ ಮಾರಿ ಸಾಲ ತೀರಿಸಿಕೊಳ್ಳಬಹುದಿತ್ತು. ಕ್ಷಣ ಹೊತ್ತು ಅಣಿ ಮುತ್ತು ಎಂಬ ಗಾದೆ ಮಾತಿನಂತೆ ಗುಂಡು ಹಾರಿಸುವ ಆ ಕ್ಷಣದಲ್ಲಿ ಒಂದು ನಿಮಿಷ ತಾಳ್ಮೆ ತಂದುಕೊಂಡಿದ್ದರೆ ಆತನ ಕುಟುಂಬ ಉಳಿಯುತ್ತಿತ್ತು.

ಗಣೇಶ್ ಸಾಮಾನ್ಯ ಕುಟುಂಬದವನಲ್ಲ. ಸಕಲೇಶಪುರ ಮೂಲದ ಆತ 100 ಕೋಟಿ ಆಸ್ತಿ ಒಡೆಯ. ಮಾಡಿದ್ದು ಸುಮಾರು 50 ಕೋಟಿ ಸಾಲ. ಆ ಸಾಲ ತೀರಿಸುವುದು ಆತನಿಗೆ ಅಂತಹ ಕಷ್ಟಸಾಧ್ಯವೇನೂ ಆಗಿರಲಿಲ್ಲ. ಸಾಲ ತೀರಿಸಲು ಮನೆ ಮಾರಲು ಪತ್ನಿ ಸಹನ ಸಮ್ಮತಿಸಲಿಲ್ಲ ಎಂಬ ಒಂದೇ ಕಾರಣಕ್ಕೆ ಪತ್ನಿ ಮತ್ತು ಮಕ್ಕಳ ಮೇಲೆ ಗುಂಡು ಹಾರಿಸಿದ ಗಣೇಶ್ ಈ ಕೃತ್ಯ ಮಾಡುವ ಮುನ್ನ ಕಗ್ಗಲಿಪುರ ಸಮೀಪದ ತನ್ನ ರೆಸಾರ್ಟ್ ಮಾರಿ ಸಾಲ ತೀರಿಸಬಹುದಿತ್ತು ಎಂಬ ಸಣ್ಣ ವಿಷಯ ಆತನಿಗೆ ಹೊಳೆಯದೇ ಹೋದದ್ದು ವಿಪರ್ಯಾಸವೇ ಸರಿ.

ಕಗ್ಗಲಿಪುರ ಸಮೀಪದ ನೆಟ್ಟಿಗೆರೆಯಲ್ಲಿ ಗಣೇಶ್ 12 ಎಕರೆ ಜಮೀನು ಹೊಂದಿದ್ದ. ಇದರಲ್ಲಿ ಐದು ಎಕರೆ ಪ್ರದೇಶದಲ್ಲಿ ರೆಸಾರ್ಟ್ ನಿರ್ಮಿಸಿದ್ದ. ಉಳಿದ 7 ಎಕರೆಯಲ್ಲಿ ಲೇಔಟ್ ನಿರ್ಮಿಸಿದ್ದ. ಅಲ್ಲಿ ಒಂದು ಭವ್ಯವಾದ ಬಂಗಲೆಯೂ ಇತ್ತು. ಮನೆ ಮಾರಲು ಪತ್ನಿಯ ಮನವೊಲಿಸಲು ಅವರ ಕುಟುಂಬದವರು ಅಥವಾ ಹತ್ತಿರದ ಸಂಬಂಧಿಗಳ ಸಹಾಯವನ್ನು ಪಡೆದುಕೊಳ್ಳಬಹುದಿತ್ತು. ಆಗಲೂ ಸಮ್ಮತಿಸದಿದ್ದರೇನಂತೆ ಕಗ್ಗಲಿಪುರದಲ್ಲಿರುವ ಈ ಆಸ್ತಿಯನ್ನು ಮಾರಾಟ ಮಾಡಿ ಸಾಲ ತೀರಿಸಬಹುದಿತ್ತು. ಈ ಸಣ್ಣ ಯೋಚನೆ ಆತನಿಗೆ ಹೊಳೆಯದೇ ಹೋದದ್ದು ವಿಧಿಯಾಟವೇ ಸರಿ. ಸ್ಟ್ರಕ್ಚರಲ್ ಇಂಜಿನಿಯರ್ ಗಣೇಶ್ ಪಿಟೀಲು ವಾದಕನೂ ಆಗಿದ್ದ. ಇಂತಹ ಪ್ರತಿಭಾವಂತ ವ್ಯಕ್ತಿ ತಾಳ್ಮೆ ಕಳೆದುಕೊಂಡ ಪರಿಣಾಮ ಇಂದು ಆತನ ಮೂರು ಮಕ್ಕಳು ತಬ್ಬಲಿಗಳಾಗಿದ್ದಾರೆ. ಅವರ ಬದುಕು ರೂಪಿಸುವವರು ಯಾರು ಎಂಬುದಕ್ಕೆ ಮಾತ್ರ ಇನ್ನೂ ಉತ್ತರ ಸಿಕ್ಕಿಲ್ಲ.

ಅದಕ್ಕೆ ಹೇಳೋದು ದುಡುಕುವ ಮುನ್ನ ಒಂದು ಕ್ಷಣ ಯೋಚಿಸದಿದ್ದರೆ ಏನಾಗುತ್ತದೆ ಎಂಬುದಕ್ಕೆ ಗಣೇಶ್ ಪ್ರಕರಣವೇ ಸಾಕ್ಷಿ. ಎಂತಹ ಸಮಸ್ಯೆಗೂ ಒಂದು ಪರಿಹಾರ ಇದ್ದೇ ಇರುತ್ತದೆ. ಯಾರೇ ಆಗಲಿ ಸಮಸ್ಯೆಗೆ ಸಿಲುಕಿಕೊಂಡಾಗ ದುಡುಕಿನ ಕೈಗೆ ಬುದ್ದಿ ಕೊಡದೆ ಒಂದು ಕ್ಷಣ ತಾಳ್ಮೆಯಿಂದ ಯೋಚಿಸಿದರೆ ಎಂತಹ ಸವಾಲನ್ನು ನಿರಾಯಾಸವಾಗಿ ಗೆಲ್ಲಬಹುದು. ಹೀಗಾಗಿ ಕಷ್ಟದಲ್ಲಿರುವವರು ಒಂದು ಕ್ಷಣ ತಾಳ್ಮೆ ವಹಿಸಿದರೆ ಮುಂದೆ ಅವರಿಗೆ ಉಜ್ವಲ ಭವಿಷ್ಯ ಇರುತ್ತದೆ ಎನ್ನುವುದನ್ನು ನೆನಪು ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಉದ್ಯಮಿ ಗಣೇಶ್‍ನ ಪರಿಸ್ಥಿತಿ ಉಂಟಾದೀತು ಎಚ್ಚರ.

Facebook Comments

Sri Raghav

Admin