ರೇಖಾ ಕದಿರೇಶ್ ಹಂತಕರಿಗೆ ಗುಂಡೇಟು, 24 ಗಂಟೆಯಲ್ಲೇ ಆರೋಪಿಗಳು ಅರೆಸ್ಟ್ ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.25- ಕೊಲೆ ನಡೆದ 24 ಗಂಟೆಯೊಳಗೆ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಹಂತಕರ ಕಾಲಿಗೆ ಗುಂಡು ಹಾರಿಸಿ ಸೆರೆ ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.ರೇಖಾ ಕದಿರೇಶ್ ಕೊಲೆ ಪ್ರಕರಣದಲ್ಲಿ ಎ1 ಆರೋಪಿಯಾಗಿದ್ದ ಪೀಟರ್ ಹಾಗೂ ಎ2 ಆರೋಪಿ ಸೂರ್ಯ ಆತ್ಮರಕ್ಷಣೆಗಾಗಿ ಪೊಲೀಸರು ಹಾರಿಸಿದ ಗುಂಡೇಟಿನಿಂದ ಗಾಯಗೊಂಡು ಸಿಕ್ಕಿ ಬಿದ್ದಿದ್ದಾರೆ.

ರೇಖಾ ಅವರ ಕೊಲೆಯಾದ ನಂತರ ಆರೋಪಿಗಳನ್ನು 24 ಗಂಟೆಯೊಳಗೆ ಬಂಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿಕೆ ನೀಡಿದ ನಂತರ ಹಂತಕರ ಪತ್ತೆಗೆ ಪೊಲೀಸರು ತೀವ್ರ ಕಾರ್ಯಾಚರಣೆ ಕೈಗೊಂಡಿದ್ದರು.

ಕೊಲೆ ಆರೋಪಿಗಳಾದ ಪೀಟರ್ ಮತ್ತು ಸೂರ್ಯ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಸುಂಕದಕಟ್ಟೆ ಸಮೀಪದ ಬಜಾಜ್ ಮೈದಾನದಲ್ಲಿ ತಲೆಮರೆಸಿಕೊಂಡಿದ್ದಾರೆ ಎಂಬ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ದೊರೆತಿತ್ತು.

ಹೀಗಾಗಿ ಉಪ್ಪಾರಪೇಟೆ ಪೆಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಶಿವಸ್ವಾಮಿ ಹಾಗೂ ಕಾಟನ್ ಪೇಟೆ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಚಿದಾನಂದಮೂರ್ತಿ ಇಂದು ಮಧ್ಯಾಹ್ನ ಬಜಾಜ್ ಮೈದಾನಕ್ಕೆ ತೆರಳಿ ತಲೆಮರೆಸಿಕೊಂಡಿದ್ದ ಆರೋಪಿಗಳ ಬಂಧನಕ್ಕೆ ಮುಂದಾದರು.

ಈ ಸಂದರ್ಭದಲ್ಲಿ ಹಂತಕರು ಸಬ್ ಇನ್ಸ್‍ಪೆಕ್ಟರ್ ಕರಿಯಣ್ಣ ಹಾಗೂ ಕಾನ್ಸ್‍ಸ್ಟೇಬಲ್ ಚಂದ್ರು ಎಂಬುವರ ಮೇಲೆ ಡ್ರ್ಯಾಗರ್‍ನಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದಾಗ ಇನ್ಸ್‍ಪೆಕ್ಟರ್‍ಗಳಾದ ಶಿವಸ್ವಾಮಿ ಹಾಗೂ ಚಿದಾನಂದಮೂರ್ತಿ ಅವರು ಆರೋಪಿಗಳಿಗೆ ಶರಣಾಗುವಂತೆ ಸೂಚಿಸಿ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಎಚ್ಚರಿಸಿದರೂ ದಾಳಿ ನಡೆಸಿ ಪರಾರಿಯಾಗಲು ಮುಂದಾದಾಗ ಆತ್ಮ ರಕ್ಷಣೆಗಾಗಿ ಇಬ್ಬರು ಇನ್ಸ್‍ಪೆಕ್ಟರ್‍ಗಳು ಹಾರಿಸಿದ ಗುಂಡು ಆರೋಪಿಗಳ ಕಾಲಿಗೆ ತಗುಲಿ ಕುಸಿದು ಬಿದ್ದರು.

ಗುಂಡೇಟಿನಿಂದ ಗಾಯಗೊಂಡಿದ್ದ ಆರೋಪಿಗಳಾದ ಪೀಟರ್ ಮತ್ತು ಸೂರ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆರೋಪಿಗಳ ಹಲ್ಲೆಯಿಂದ ಗಾಯಗೊಂಡಿರುವ ಎಸ್‍ಐ ಕರಿಯಣ್ಣ ಹಾಗೂ ಕಾನ್ಸ್‍ಟೇಬಲ್ ಚಂದ್ರು ಅವರಿಗೂ ಚಿಕಿತ್ಸೆ ಕೊಡಿಸಲಾಗಿದೆ.

# ಯಾರೀ ಪೀಟರ್?:
2018ರಲ್ಲಿ ಕೊಲೆಯಾಗಿದ್ದ ಕದಿರೇಶ್ ಅವರ ಅಂಗರಕ್ಷಕನಾಗಿದ್ದವನೇ ಈ ಪೀಟರ್. ಕದಿರೇಶ್ ಕೊಲೆಯಾದ ನಂತರ ರೇಖಾ ಅವರೊಂದಿಗೂ ಒಡನಾಟವಿಟ್ಟುಕೊಂಡಿದ್ದ ಪೀಟರ್ ಅವರ ಕುಟುಂಬಕ್ಕೆ ತೀರಾ ಪರಿಚಿತನಾಗಿದ್ದ.

ಆದರೆ ಇತ್ತೀಚೆಗೆ ಕಾಮಗಾರಿ ಬಿಲ್ ಬಿಡುಗಡೆ ವಿಚಾರದಲ್ಲಿ ರೇಖಾ ಅವರೊಂದಿಗೆ ವೈಮನಸ್ಸು ಬೆಳೆಸಿಕೊಂಡಿದ್ದ. ಛಲವಾದಿ ಪಾಳ್ಯದ ಫ್ಲವರ್ ಗಾರ್ಡನ್‍ನಲ್ಲಿರುವ ರೇಖಾ ಅವರ ನಿವಾಸದ ಸಮೀಪವೇ ಪೀಟರ್ ಅವರ ನಿವಾಸವಿತ್ತು.

ನಿನ್ನೆ ರೇಖಾ ಅವರ ಹತ್ಯೆಯಾದ ನಂತರ ಪೀಟರ್ ಕುಟುಂಬ ಮನೆಗೆ ಬೀಗ ಹಾಕಿ ತಲೆಮರೆಸಿಕೊಂಡಿತ್ತು. ಹೀಗಾಗಿ ಪೀಟರ್ ಹಾಗೂ ಆತನ ಸಹಚರರ ಮೇಲೆ ಪೊಲೀಸರ ಹದ್ದಿನ ಕಣ್ಣು ಬಿದ್ದಿತ್ತು.

ಪೀಟರ್ ತನ್ನ ಸ್ನೇಹಿತರಾದ ರೌಡಿ ಶೀಟರ್ ಸೂರ್ಯ ಮತ್ತು ಸ್ಟೀಫನ್ ನೆರವಿನೊಂದಿಗೆ ಕೊಲೆ ಮಾಡಿ ಪರಾರಿಯಾಗಿರುವ ಅನುಮಾನದ ಮೇಲೆ ಪೆಪೊಲೀಸರು ಅವರ ಚಲನವಲನದ ಮೇಲೆ ಕಣ್ಣಿಟ್ಟಿದ್ದರು.

Facebook Comments

Sri Raghav

Admin