ಮೊದಲನೇ ಗಂಡನನ್ನು ಕೊಂದ 2ನೇ ಗಂಡ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.8- ತನ್ನನ್ನು ಬಿಟ್ಟು ಬೇರೆ ಮದುವೆಯಾದ ಮಾಜಿ ಪತ್ನಿ ಜೊತೆ ಜಗಳವಾಡುತ್ತಿದ್ದವನನ್ನು ಆಕೆಯ ಎರಡನೆ ಗಂಡ ಕೊಲೆ ಮಾಡಿರುವ ಘಟನೆ ಬಸವನಗುಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಡರಾತ್ರಿ ನಡೆದಿದೆ.

ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಬೆಳಕವಾಡಿ ಗ್ರಾಮದ ಸಿದ್ದರಾಜು (26) ಕೊಲೆಯಾಗಿದ್ದು, ಆರೋಪಿಗಳಾದ ಲಕ್ಷ್ಮಣ ಅಲಿಯಾಸ್ ಲಚ್ಚಿ, ಆತನ ಸ್ನೇಹಿತರಾದ ಕಾಟುಮಣಿ, ಕೇತು ಮತ್ತು ಪ್ರಕಾಶ್ ಪತ್ತೆಗಾಗಿ ಪೊಲೀಸರು ಕಾರ್ಯಚರಣೆ ನಡೆಸಿದ್ದಾರೆ.

ಬಸವನಗುಡಿ ಸುಬ್ಬಣ್ಣ ಚೆಟ್ಟಿ ರಸ್ತೆಯಲ್ಲಿ ವ್ಯಕ್ತಿಯ ಕೊಲೆಯಾಗಿದೆ ಎಂದು ನಿನ್ನೆ ರಾತ್ರಿ 11.30ರ ಸುಮಾರಿಗೆ ಪೊಲೀಸ್ ಕಂಟ್ರೋಲ್ ರೂಂಗೆ ಮಾಹಿತಿ ಬಂತ್ತು.

ಸ್ಥಳಕ್ಕೆ ಧಾವಿಸಿದ ಗಸ್ತು ವಾಹನ ಸಿಬ್ಬಂದಿಗಳು ಪರಿಶೀಲಿಸಿದಾಗ ವ್ಯಕ್ತಿಯೊಬ್ಬ ರಕ್ತದ ಮಡುವಿನಲ್ಲಿ ಬಿದ್ದಿದ್ದು, ಹಲವಾರು ಬಾರಿ ಇರಿತದ ಗಾಯಗಳಿಂದ ಸ್ಥಳದಲ್ಲೆ ಮೃತ ಪಟ್ಟಿರುವುದು ಖಚಿತವಾಗಿತ್ತು.

ತಕ್ಷಣ ಸ್ಥಳಕ್ಕೆ ಧಾವಿಸಿದ ಬಸವನಗುಡಿ ಠಾಣೆಯ ಪೊಲೀಸರು ಮೃತ ವ್ಯಕ್ತಿಯ ಮಾಹಿತಿ ಕಲೆ ಹಾಕಿದಾಗ ಆತ ಲಾರಿ ಕ್ಲಿನರ್ ಸಿದ್ದರಾಜು ಎಂದು ತಿಳಿದು ಬಂದಿದೆ.

ಕೆಲವು ವರ್ಷಗಳ ಹಿಂದೆ ಸಿದ್ದರಾಜು ತಮ್ಮ ಗ್ರಾಮದ ಲತಾ (28) ಎಂಬಾಕೆಯನ್ನು ವಿವಾಹವಾಗಿ ಬೆಂಗಳೂರಿಗೆ ಕರೆದುಕೊಂಡು ಬಂದು ವಾಸವಿದ್ದರು.

ಮೂರ್ನಾಲ್ಕು ವರ್ಷಗಳ ಬಳಿಕ ದಂಪತಿಗಳ ನಡುವೆ ಜಗಳವಾಗಿ ಲತಾ ಸಿದ್ದರಾಜುನನ್ನು ತೊರೆದು ಆರು ತಿಂಗಳ ಹಿಂದೆ ಅದೇ ಏರಿಯಾದ ಹೂವಿನ ವ್ಯಾಪಾರಿ ಲಕ್ಷ್ಮಣ ಅಲಿಯಾಸ್ ಲಚ್ಚಿ ಎಂಬಾತನನ್ನು ಮದುವೆಯಾಗಿದ್ದಳು.

ಮೊದಲ ಪತಿ ಸಿದ್ದರಾಜುಗೆ ಲತಾ ವಿಚ್ಛೇದನ ಕೊಟ್ಟಿರಲಿಲ್ಲ ಎಂದು ಹೇಳಲಾಗಿದೆ. ಇದರಿಂದ ಕ್ರೋಧಗೊಂಡಿದ್ದ ಸಿದ್ದರಾಜು ಪದೇ ಪದೇ ಲತಾ ಅವರ ಮನೆ ಹೋಗಿ ಜಗಳವಾಡುತ್ತಿದ್ದ.

ಕಳೆದೆಡು ದಿನಗಳ ಹೋಗಿ ಹಿಂದೆ ಮತ್ತೆ ಲತಾ ಮತ್ತು ಆಕೆಯ ತಾಯಿ ಜೊತೆ ಸಿದ್ದರಾಜು ಜಗಳವಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದ ಎನ್ನಲಾಗಿದೆ. ಇದರಿಂದ ಸಿಟ್ಟಾದ ಲಕ್ಷ್ಮಣ ಕೊಲೆ ಮಾಡಲು ಸಂಚು ರೂಪಿಸಿದ್ದ.

ನಿನ್ನೆ ರಾತ್ರಿ ಮದ್ಯಪಾನ ಮಾಡಿ ಲಾರಿಯಲ್ಲಿ ಮಲಗಲು ಬರುತ್ತಿದ್ದ ಸಿದ್ದರಾಜು ಮೇಲೆ ಸೇಹಿತರೊಡಗೂಡಿ ದಾಳಿ ಮಾಡಿ ಮಾರಕಾಯುಧಗಳಿಂದ ಕೊಚ್ಚಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿರುವ ಬಸವನ ಗುಡಿ ಪೊಲೀಸರು ಆರೋಪಿಗಳ ಬಂಧನಕ್ಕೆ ಕಾರ್ಯಚರಣೆ ನಡೆಸಿದ್ದಾರೆ.

Facebook Comments

Sri Raghav

Admin