ಆನ್‍ಲೈನ್ ಮೂಲಕ ಮನೆ ಬಾಗಿಲಿಗೆ ಬರಲಿವೆ ತಾಜಾ ತಾಜಾ ಮೀನುಗಳು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.19- ಆನ್‍ಲೈನ್ ಮೂಲಕ ಮನೆ ಬಾಗಿಲಿಗೆ ತಾಜಾ ಮೀನು ಒದಗಿಸುವ ಯೋಜನೆಯನ್ನು ರೂಪಿಸಲಾಗುತ್ತಿದೆ ಎಂದು ಮೀನುಗಾರಿಕೆ ಮತ್ತು ಬಂದರು ಸಚಿವ ಕೋಟಾ ಶ್ರೀನಿವಾಸಪೂಜಾರಿ ತಿಳಿಸಿದರು.  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೀನನ್ನು ಆನ್‍ಲೈನ್ ಮೂಲಕ ಮನೆಗೆ ಸರಬರಾಜು ಮಾಡುವ ಯೋಜನೆ ಇಲಾಖೆಯಲ್ಲಿತ್ತು.

ಈ ಸಂಬಂಧ ಪ್ರಸಕ್ತ ಸಾಲಿನಲ್ಲಿ 137.20 ಕೋಟಿ ರೂ. ಯೋಜನಾ ಕಾರ್ಯಕ್ರಮಗಳನ್ನು ಕೇಂದ್ರ ಸರ್ಕಾರ ಮಂಜೂರು ಮಾಡಿದೆ. ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಮುಂದಿನ ಐದು ವರ್ಷಗಳಿಗೆ ರಾಜ್ಯದಲ್ಲಿ ಸುಮಾರು 4115 ಕೋಟಿ ರೂ. ಕ್ರಿಯಾ ಯೋಜನೆ ಸಲ್ಲಿಸಲಾಗಿದೆ ಎಂದರು.

ಈ ಸಂಬಂಧ ಮೊಬೈಲ್ ಆ್ಯಪನ್ನು ಸಿದ್ದಪಡಿಸಲಾಗುತ್ತಿದೆ. ನ.21ರಂದು ಮತ್ಸ್ಯ ಸಂಪದ ಯೋಜನೆ ಹಾಗೂ ಕಾರ್ಯಗಾರಕ್ಕೆ ಚಾಲನೆ ನೀಡಲಾಗುವುದು ಎಂದರು. ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮತ್ಸ್ಯ ಸಂಪದ ಯೋಜನೆಗೆ ಚಾಲನೆ ನೀಡಲಿದ್ದಾರೆ. ಒಳನಾಡು ಮೀನುಗಾರಿಕೆಯಲ್ಲಿ ರಾಜ್ಯ ದೇಶದಲ್ಲೇ 9ನೇ ಸ್ಥಾನದಲ್ಲಿದೆ. ಸಮುದ್ರ ಕಿನ್ನಾರೆ ಮೀನುಗಾರಿಕೆಯಲ್ಲಿ 4ನೇ ಸ್ಥಾನದಲ್ಲಿ ಇದರಲ್ಲಿ ಪ್ರಥಮ ಸ್ಥಾನ ಪಡೆಯುವುದು ನಮ್ಮ ಗುರಿಯಾಗಿದೆ ಎಂದು ಹೇಳಿದರು.

ನ.21ರಂದು ನಡೆಯುವ ಕಾರ್ಯಾಗಾರದಲ್ಲಿ ಮೀನಿನ ಖಾದ್ಯಗಳನ್ನು ಪರಿಚಯಿಸಲಾಗುವುದು. ಮಂಗಳೂರು ಮೀನುಗಾರಿಕೆ ಕಾಲೇಜನ್ನು ವಿಶ್ವವಿದ್ಯಾಲಯವನ್ನಾಗಿ ಮಾಡಲಾಗುವುದು. ಶಿವಮೊಗ್ಗ, ಅಂಕೋಲ, ಉಡುಪಿ, ಮೈಸೂರು ಮುಂತಾದ ಕಡೆ ಮೀನುಗಾರಿಕೆ ಕಾಲೇಜು ಸ್ಥಾಪನೆ ಮಾಡಿ ಇತರೆ 10 ಕಡೆ ಡಿಪ್ಲೊಮಾ ತರಗತಿಗಳನ್ನು ಪ್ರಾರಂಭಿಸಲಾಗುವುದು ಎಂದರು.

ಹೆಸರುಘಟ್ಟದಲ್ಲಿರುವ ಮೀನುಗಾರಿಕೆ ಸಾಕಾಣಿಕೆ ಕೇಂದ್ರದಲ್ಲಿ ಒಂದು ಕೋಟಿ ರೂ. ವೆಚ್ಚದಲ್ಲಿ ಮೀನು ಕ್ವಾರೈಂಟ್‍ನ್ ಕೇಂದ್ರ ಸ್ಥಾಪಿಸಲಾಗಿದೆ. ಇಲ್ಲಿ ವಿದೇಶದ ಬಣ್ಣದ ಮೀನು ಆಕಾಣಿಕೆ ಮಾಡಲಾಗುವುದು. ವಿದೇಶದಿಂದ ಆಮದಾದ ಮೀನನ್ನು ಒಂದು ವಾರ ಪ್ರತ್ಯೇಕವಾಗಿಟ್ಟು ರೋಗ ಮುಕ್ತವೆಂದು ನಿರ್ಧರಿಸಿದ ನಂತರ ಸಾಕಾಣಿಕೆ ಮಾಡಲಾಗುತ್ತದೆ. ಈ ವ್ಯವಸ್ಥೆ ಚೆನ್ನೈನಲ್ಲಿ ಮಾತ್ರ ಇತ್ತು.

ಈಗ ನಮ್ಮ ರಾಜ್ಯಕ್ಕೂ ವಿಸ್ತರಣೆಯಾಗಿದೆ ಎಂದು ತಿಳಿಸಿದರು. ಆತ್ಮನಿರ್ಭರ ಯೋಜನೆಯಡಿ ಸುಮಾರು 10 ಸಾವಿರ ಯುವಕರಿಗೆ ಮೀನುಗಾರಿಕೆ ಇಲಾಖೆಯಿಂದ ರಾಜ್ಯದ ವಿವಿಧೆಡೆ ಉದ್ಯೋಗ ಕಲ್ಪಿಸಲಾಗಿದೆ ಎಂದು ಹೇಳಿದರು.

#ಮುಖ್ಯಮಂತ್ರಿ ತೀರ್ಮಾನಕ್ಕೆ ಬದ್ಧ:
ರಾಜ್ಯ ಸಚಿವ ಸಂಪುಟ ವಿಸ್ತರಣೆಯೋ ಪುನರಚನೆಯೋ ಎಂಬುದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿರ್ಧಾರ ಮಾಡಲಿದ್ದು, ಪಕ್ಷ ಹಾಗೂ ಸರ್ಕಾರ ಕೈಗೊಳ್ಳುವ ತೀರ್ಮಾನಕ್ಕೆ ಬದ್ಧ ವಿರುವುದಾಗಿ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು. ತಮ್ಮ ಸಂಪುಟ ಹೇಗಿರಬೇಕು ಎಂಬುದನ್ನ ಸಿಎಂ ತೀರ್ಮಾನಿಸುತ್ತಾರೆ.

ಸಂಪುಟ ವಿಸ್ತರಣೆ ಮಾಡುವ ಬಗ್ಗೆ ಸಿಎಂ ಪರಮಾಧಿಕಾರವಿದೆ. ಸಂಪುಟ ವಿಸ್ತರಣೆ ಬಗ್ಗೆ ಸಿಎಂ ಹಾಗೂ ಬಿಜೆಪಿ ರಾಜ್ಯಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಕೇಂದ್ರ ನಾಯಕರ ಜೊತೆ ಚರ್ಚೆ ನಡೆಸಿ ಅಂತಿಮ ತಿರ್ಮಾನ ಕೈಗೊಳ್ಳುತ್ತಾರೆ ಎಂದು ಹೇಳಿದರು.

ಕೆಲ ಸಚಿವರನ್ನು ಸಂಪುಟದಿಂದ ಕೈ ಬಿಡಲಾಗುತ್ತದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅದು ಸ್ವಾಭಿವಿಕ ಅಲ್ಲವೇ ಎಂದು ಹೇಳಿದರು.  ನಮ್ಮಲ್ಲಿ ಯಾವುದೇ ಗೊಂದಲವಿಲ್ಲ ಎಂದ ಅವರು, ತಮ್ಮ ಖಾತೆ ಬದಲಾವಣೆಯ ವಿಚಾರ ಕೇವಲ ಮಾಧ್ಯಮಗಳಲ್ಲಿ ಕೇಳಿ ಬರುತ್ತಿದೆ ಎಂದರು.

ಶಾಸಕರ ಪ್ರತ್ಯೇಕ ಸಭೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸ್ವಾಭಾವಿಕವಾಗಿ ನಾಲ್ಕು ಜನ ಸೇರಿದರೆ ನೀವು ಸಭೆ ಅಂತಿರಾ ನಾವು ಅದನ್ನು ಒಟ್ಟಿಗೆ ಕೂತು ಮಾತನಾಡಿದ್ದೀವಿ ಅಂತೀವಿ ಅಷ್ಟೇ ಎಂದು ಹೇಳಿದರು.

Facebook Comments