ಐದು ಮಂದಿ ಅಂತಾರಾಜ್ಯ ಖದೀಮರು ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

mysoerಮೈಸೂರು, ಜ.21- ಕುಖ್ಯಾತ ಐದು ಮಂದಿ ಅಂತಾರಾಜ್ಯ ಖದೀಮರನ್ನು ಬಂಧಿಸುವಲ್ಲಿ ಮೈಸೂರಿನ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಧ್ಯಪ್ರದೇಶದ ಢಾರ್ ಜಿಲ್ಲೆಯ ತಾಂಡಾ ತಾಲ್ಲೂಕಿನ ಬಗೋಲಿ ಗ್ರಾಮದ ಪ್ರಮುಖ ಆರೋಪಿ ಭರತ್(27), ಸಹಚರರಾದ ಥಾಲಿಯಾ(25), ಮಾನ್ಸಸಿಂಗ್ (30), ಆನಂದ್‍ಸಿಂಗ್ (21) ಮತ್ತು ದಾರ್‍ಸಿಂಗ್ (47) ಬಂಧಿತರು.

ಆರೋಪಿಗಳಿಂದ 10 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ಬಂಧನದಿಂದ ಮೈಸೂರಿನ 13 ಪ್ರಕರಣ, ಬೆಂಗಳೂರು-3, ಶಿವಮೊಗ್ಗ-4, ಭದ್ರಾವತಿ-4 ಹಾಗೂ ತಮಿಳುನಾಡಿನಲ್ಲಿ 4 ಪ್ರಕರಣ ಸೇರಿದಂತೆ ಒಟ್ಟು 28 ಪ್ರಕರಣಗಳು ಬೆಳಕಿಗೆ ಬಂದಿದೆ ಎಂದು ನಗರ ಪೊಲೀಸ್ ಆಯುಕ್ತ ಎ.ಸುಬ್ರಹ್ಮಣೇಶ್ವರ ರಾವ್ ತಿಳಿಸಿದ್ದಾರೆ.

ಪ್ರಮುಖ ಆರೋಪಿ ಭರತ್ 23 ಪ್ರಕರಣಗಳಲ್ಲಿ ಬಾಗಿಯಾಗಿರುವುದು ಕಂಡು ಬಂದಿದೆ. ಬಗೋಲಿ ಗ್ರಾಮದವರೆಲ್ಲರೂ ಕಳ್ಳರೇ, ಹ್ಯಾಂಗಿಂಗ್ ಲಾಕ್ ಹಾಕಿರುವಂತಹ ಮನೆಗಳೇ ಇವರ ಟಾರ್ಗೆಟ್. ಇವರು ಮನೆಗಳ್ಳತನ ನಡೆಸಿದ ನಂತರ ವಾಹನಗಳಲ್ಲಿ ತಮ್ಮ ಊರಿಗೆ ತೆರಳಿ ಸ್ವಂತ ಊರಿನಲ್ಲೇ ಕದ್ದ ಮಾಲುಗಳನ್ನು ಮಾರಾಟ ಮಾಡುತ್ತಿದ್ದರು.

ಇವರು ಮನೆಕಳ್ಳತನಕ್ಕೆ ಕಬ್ಬಿಣದ ರಾಡು, ರಿಂಚಸ್ ಪ್ಯಾನರ್, ಸ್ಕ್ರೂಡ್ರೈವರ್ ಬಳಸುತ್ತಿದ್ದರೆಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.ಇವರನ್ನು ಬಂಧಿಸಿದ ನಂತರ ಮಾಲನ್ನು ವಶಪಡಿಸಿಕೊಳ್ಳುವುದೇ ಸಾಹಸವಾಗಿತ್ತು ಎಂದು ಅವರು ಹೇಳಿದ್ದಾರೆ.

ಪೊಲೀಸರು ಆರೋಪಿಗಳನ್ನು ಬಂಧಿಸಲು ತೆರಳಿದ್ದಾಗ ಅವರಿಗೆ ಕಲ್ಲು ತೂರಿ ವಾಪಸ್ ಹೋಗುವಂತೆ ಮಾಡುತ್ತಿದ್ದರೆಂಬುದು ಗೊತ್ತಾಗಿದೆ. ಅಂತಾರಾಜ್ಯ ಈ ಕಳ್ಳರು ಬಸ್ ಮೂಲಕ ಮೈಸೂರಿಗೆ ಬಂದು ರಸ್ತೆಗಳಲ್ಲಿ ಓಡಾಡಿಕೊಂಡು ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ಕತ್ತಲಾಗುತ್ತಿದ್ದಂತೆ ಮಧ್ಯರಾತ್ರಿ ಬಂದು ಕಳ್ಳತನ ಮಾಡುತ್ತಿದ್ದುದ್ದಾಗಿ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾರೆ.

ಡಿಸಿಪಿ ವಿಕ್ರಂ ಅಮಟೆ ಮಾರ್ಗದರ್ಶನದಲ್ಲಿ ಎಸಿಪಿ ಲಿಂಗಪ್ಪ ನೇತೃತ್ವದಲ್ಲಿ ಇನ್ಸ್‍ಪೆಕ್ಟರ್ ಕಿರಣ್‍ಕುಮಾರ್, ಅಶೋಕ್‍ಕುಮಾರ್, ಮಲ್ಲೇಶ್ ಹಾಗೂ ಸಿಬ್ಬಂದಿ ತಂಡ ಈ ಕಾರ್ಯಾಚರಣೆ ನಡೆಸಿತ್ತು. ನಗರ ಪೊಲೀಸ್ ಆಯುಕ್ತರು ಸಾರ್ವಜನಿಕರಿಗೆ ಮನವಿ ಮಾಡಿದ್ದು, ಮನೆಗಳಿಗೆ ಹ್ಯಾಂಗಿಂಗ್ ಲಾಕ್ ಬಳಸದೆ ಡೋರ್‍ಲಾಕ್ ಬಳಸಬೇಕು, ಹಲವು ದಿನಗಳು ಹೊರ ಊರಿಗೆ ಹೋದರೆ ಮುಂಜಾಗ್ರತಾ ಕ್ರಮವಾಗಿ ಪೊಲೀಸರಿಗೆ ಮಾಹಿತಿ ನೀಡುವಂತೆ ಅವರು ಕಿಮಿಮಾತು ಹೇಳಿದ್ದಾರೆ.

Facebook Comments