ಮುಂದುವರೆದ ವಲಸೆ ಕಾರ್ಮಿಕರ ದುರಂತ : ಮಧ್ಯಪ್ರದೇಶ, ಮಹಾರಾಷ್ಟ್ರದಲ್ಲಿ 8 ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

ನರಸಿಂಗ್‍ಪುರ್/ಬರ್ವಾನಿ, ಮೇ 10- ಕೊರೊನಾ ವೈರಸ್ ಹಾವಳಿಯಿಂದ ದೇಶದಲ್ಲಿ ಜಾರಿಯಲ್ಲಿರುವ ಲಾಕ್‍ಡೌನ್ ನಡುವೆ ಕೆಲವೆಡೆ ವಲಸೆ ಕಾರ್ಮಿಕರ ಸಾವಿನ ಸರಣಿ ಮುಂದುವರಿದಿದೆ. ಮಧ್ಯ ಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ 8 ಕಾರ್ಮಿಕರು ಮೃತಪಟ್ಟು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಅಸ್ವಸ್ಥರಾಗಿದ್ದಾರೆ.

ಮಧ್ಯಪ್ರದೇಶದ ನರಸಿಂಗ್‍ಪುರ್ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಟ್ರಕ್ ಉರುಳಿ ಬಿದ್ದು ಐವರು ವಲಸೆ ಕಾರ್ಮಿಕರು ಸಾವಿಗೀಡಾಗಿ, ಇತರ 15 ಮಂದಿ ತೀವ್ರ ಗಾಯಗೊಂಡಿದ್ದಾರೆ. ಮಾವಿನ ಹಣ್ಣುಗಳನ್ನು ಹೊತ್ತೊಯ್ಯುತ್ತಿದ್ದ ಟ್ರಕ್‍ನಲ್ಲಿ 20 ಮಂದಿ ವಲಸೆ ಕಾರ್ಮಿಕರು ಹೈದರಾಬಾದ್‍ನಿಂದ ಉತ್ತರಪ್ರದೇಶಕ್ಕೆ ತೆರಳುತ್ತಿದ್ದರು. ನರಸಿಂಗಪುರದ ಪತಾ ಗ್ರಾಮದ ಬಳಿ ಟ್ರಕ್ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿತ್ತು.

ಈ ದುರ್ಘಟನೆಯಲ್ಲಿ ಐವರು ಸ್ಥಳದಲ್ಲೇ ಮೃತಪಟ್ಟು, ಇತರ 15 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿಲಾಗಿದೆ. ಇವರನ್ನು ಪರೀಕ್ಷೆಗೆ ಒಳಪಡಿಸಿದಾಗ ವಲಸೆ ಕಾರ್ಮಿಕನೊಬ್ಬನಿಗೆ ಸೋಂಕು ಲಕ್ಷಣಗಳು ಪತ್ತೆಯಾಗಿವೆ ಎಂದು ವರದಿ ತಿಳಿಸಿದೆ.ಹೈದರಾಬಾದ್‍ನಿಂದ ಉತ್ತರ ಪ್ರದೇಶದ ಝಾನ್ಸಿ ಮತ್ತು ಎಥಾಗೆ ತೆರಳುತ್ತಿದ್ದರು ಎಂದು ಹೆಚ್ಚುವರಿ ಜಾಲೀಸ್ ವರಿಷ್ಠಾಧಿಕಾರಿ ರಾಜೇಶ್ ತಿವಾರಿ ತಿಳಿಸಿದ್ದಾರೆ.

3 ಕಾರ್ಮಿಕರ ದುರ್ಮರಣ: ಲಾಕ್‍ಡೌನ್‍ನಿಂದ ಅತಂತ್ರ ಸ್ಥಿತಿಗೆ ಸಿಲುಕಿರುವ ವಲಸೆ ಕಾರ್ಮಿಕರು ತಮ್ಮ ಊರುಗಳು ಮತ್ತು ಸ್ವಗ್ರಾಮಗಳಿಗೆ ತೆರಳುವ ಮಾರ್ಗದಲ್ಲೇ ಸಾವಿಗೀಡಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಮಧ್ಯಪ್ರದೇಶ-ಮಹಾರಾಷ್ಟ್ರ ಗಡಿ ಪ್ರದೇಶ ಬರ್ವಾನಿಯಲ್ಲಿ ಮೂವರು ಕಾರ್ಮಿಕರು ನಿತ್ರಾಣಗೊಂಡು ಸಾವಿಗೀಡಾಗಿದ್ದಾರೆ.

ಬಸ್ ಮತ್ತು ರೈಲು ಸಂಚಾರವಿಲ್ಲದೆ ಹಲವಾರು ವಲಸೆ ಕಾರ್ಮಿಕರು ಹಸಿವಿನಿಂದ ನೂರಾರು ಕಿಮೀ ದೂರದಲ್ಲಿರುವ ತಮ್ಮ ಊರುಗಳಿಗೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದು, ಮಾರ್ಗ ಮಧ್ಯೆ ಬಳಲಿಕೆಯಿಂದ ಅಸುನೀಗುತ್ತಿದ್ದಾರೆ.

ತಮ್ಮ ಊರಿನತ್ತ ಪ್ರಯಾಣ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಉತ್ತರ ಪ್ರದೇಶದ ಲಾಲೂ ರಾಮ್(55), ಪ್ರೇಮ್ ಬಹದ್ದೂರ್ (50) ಮತ್ತು ಅನಿಸ್ ಅಹಮದ್ (42) ನಿತ್ರಾಣದಿಂದ ಮೃತಪಟ್ಟಿದ್ದಾರೆ. ಇವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿ ಹಸಿವು ಮತ್ತು ಬೇಸಿಗೆಯಲ್ಲಿ ನಿರ್ಜಲೀಕರಣದಿಂದ ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.  ಮಹಾರಾಷ್ಟ್ರದ ಔರಂಗಾಬಾದ್‍ನಲ್ಲಿ ರೈಲ್ವೆ ಹಳಿ ಮೇಲೆ ಮಲಗಿದ್ದ ವಲಸೆ ಕಾರ್ಮಿಕರ ಮೇಲೆ ರೈಲು ಹರಿದು 16 ಮಂದಿ ದುರಂತ ಸಾವಿಗೀಡಾಗಿದ್ದರು.

Facebook Comments

Sri Raghav

Admin