ಕುಟುಂಬವನ್ನೇ ಸರ್ವನಾಶ ಮಾಡಿತೇ ಹಠ-ಕೋಪ..?!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.18- ಒಂದೇ ಕುಟುಂಬದ ಐದು ಮಂದಿ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲವಾದರೂ ಮನೆ ಸದಸ್ಯರು ಕಲಹ, ಹಠ-ಕೋಪಕ್ಕೆ ಪ್ರಾಣ ಕಳೆದಕೊಂಡರೇ ಎಂಬ ಅನುಮಾನ ವ್ಯಕ್ತವಾಗಿದೆ. ಇಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಐದು ಮಂದಿಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಒಂದು ಮೂಲದ ಪ್ರಕಾರ ಮನೆ ಯಜಮಾನಿಯ ಪ್ರೇರಣೆಯಿಂದಲೇ ಈ ಘಟನೆ ನಡೆದುಹೋಯಿತೇ ಎಂಬ ಶಂಕೆ ಸಹ ವ್ಯಕ್ತವಾಗಿದೆ.

ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ತಿಗಳರ ಪಾಳ್ಯ, ಚೇತನ್ ವೃತ್ತದ 4ನೇ ಕ್ರಾಸ್‍ನಲ್ಲಿ ನಿನ್ನೆ ಸಂಜೆ ಬೆಳಕಿಗೆ ಬಂದ ನಾಲ್ವರ ಆತ್ಮಹತ್ಯೆ ಹಾಗೂ ಮಗು ಸಾವು ಪ್ರಕರಣ ನಗರದ ಜನತೆಯನ್ನೇ ಬೆಚ್ಚಿ ಬೀಳಿಸಿದೆ. ಮನೆ ಯಜಮಾನ ಶಂಕರ್ ಅವರ ಪ್ರಕಾರ ಪತ್ನಿಯ ಪ್ರೇರಣೆಯಿಂದಲೇ ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಹೇಳಿಕೆ ನೀಡಿದ್ದು, ಪೊಲೀಸರು ಸಹ ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

ಉತ್ತಮ ವಿದ್ಯಾಭ್ಯಾಸ ಕೊಡಿಸಿದ್ದರೂ ಇಬ್ಬರು ಹೆಣ್ಣುಮಕ್ಕಳು ಹಾಗೂ ಮಗ ಸಮಾಧಾನವಾಗಿ ಒಳ್ಳೆಯ ಆಲೋಚನೆ ಮಾಡಿದ್ದರೆ ಕುಟುಂಬದಲ್ಲಿ ಜಗಳವಾಗುತ್ತಿರಲಿಲ್ಲ, ಅಲ್ಲದೆ ಎಲ್ಲರೂ ಸಂತೋಷದ ಜೀವನ ನಡೆಸಬಹುದಿತ್ತು. ಪ್ರತಿನಿತ್ಯ ಮನೆಯಲ್ಲಿ ಶಂಕರ್, ಪತ್ನಿ ಭಾರತಿ ಮತ್ತು ಮಕ್ಕಳ ಮಧ್ಯೆ ಜಗಳವಾಗುತ್ತಿತ್ತು ಎಂದು ನೆರೆಹೊರೆಯವರು ಹೇಳುತ್ತಿದ್ದಾರೆ.

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಶಂಕರ್ ಅವರ ಪತ್ನಿ ಭಾರತಿ, ಮಕ್ಕಳಾದ ಸಿಂಚನಾ, ಸಿಂಧುರಾಣಿ, ಮಗ ಮಧುಸಾಗರ್ ಮೊಬೈಲ್‍ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ನಡುವೆ ಸೋಮವಾರ ಹೊರಗಿನಿಂದ ಸಿಂಧೂರಾಣಿ ಊಟ ತರಿಸಿರುವುದು ಸ್ಥಳದಲ್ಲಿ ದೊರೆತ ಬಿಲ್‍ನಿಂದ ಗೊತ್ತಾಗಿದೆ. ಒಟ್ಟಾರೆ ಆತ್ಮಹತ್ಯೆಗೆ ನಿಖರ ಕಾರಣದ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಮನೆ ಯಜಮಾನ ಶಂಕರ್ ಅವರಿಂದ ಈಗಾಗಲೇ ಬ್ಯಾಡರಹಳ್ಳಿ ಪೊಲೀಸರು ಮಾಹಿತಿ ಪಡೆದುಕೊಂಡಿದ್ದಾರೆ.

ಆರು ವರ್ಷದ ಹಿಂದೆ ಮೊದಲನೆ ಮಗಳು ಸಿಂಚನಾ ಅವರಿಗೆ ಪ್ರವೀಣ್ ಜೊತೆ ವಿವಾಹ ಮಾಡಿಕೊಟ್ಟಿದ್ದರು. ಜಕ್ಕೂರು ಬಳಿ ಮನೆ ಮಾಡಿಕೊಂಡು ತಂದೆ-ತಾಯಿ ಜೊತೆ ಪ್ರವೀಣ್ ವಾಸವಾಗಿದ್ದರು. ಆದರೆ ಬೇರೆ ಮನೆ ಮಾಡುವಂತೆ ಗಂಡನಿಗೆ ಪೀಡಿಸುತ್ತಿದ್ದ ಸಿಂಚನಾ ಗಂಡನ ಮನೆ ತೊರೆದು ಒಂದೂವರೆ ವರ್ಷದ ಹಿಂದೆ ತವರು ಮನೆಗೆ ಬಂದು ನೆಲೆಸಿದ್ದರು.

ಆಗಾಗ್ಗೆ ಪತಿ ಜೊತೆ ಇದೇ ವಿಚಾರವಾಗಿ ಗಂಡನ ಜೊತೆ ಸಿಂಚನಾ ಜಗಳವಾಡುತ್ತಿದ್ದರು. ಮಗಳಿಗೆ ಬುದ್ದಿ ಹೇಳಿದರೂ ಕೇರಳಿರಲಿಲ್ಲ ಎಂದು ಶಂಕರ್ ಪೊಲೀಸರಿಗೆ ತಿಳಿಸಿದ್ದಾರೆ. ಎರಡನೇ ಮಗಳು ಸಿಂಧುರಾಣಿ ಅವರನ್ನು ಶ್ರೀಕಾಂತ್ ಎಂಬುವರಿಗೆ ವಿವಾಹ ಮಾಡಿಕೊಟ್ಟಿದ್ದು, ಆ ದಂಪತಿಯ 9 ತಿಂಗಳ ಮಗುವಿನ ನಾಮಕರಣ ಮಾಡುವ ವಿಚಾರದಲ್ಲಿ ಗಲಾಟೆ ಮಾಡಿಕೊಂಡಿದ್ದರೆಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.

# ಪ್ರವೀಣ್ ವಿಚಾರಣೆ:

ಈ ನಡುವೆ ಶಂಕರ್ ಅವರ ಅಳಿಯ ಪ್ರವೀಣ್‍ನನ್ನು ಪೊಲೀಸರು ವಿಚಾರಣೆ ನಡೆಸಿ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಜಕ್ಕೂರು ಬಳಿ ಪೋಷಕರೊಂದಿಗೆ ವಾಸವಾಗಿದ್ದು, ಬೆರೆ ಮನೆ ಮಾಡುವಂತೆ ಸಿಂಚನಾ ಪೀಡಿಸುತ್ತಿದ್ದರು. ನಮ್ಮ ಅಪ್ಪ-ಅಮ್ಮನ ಜೊತೆ ಇರುವುದಿಲ್ಲ ಎಂದು ಸಿಂಚನಾ ಹಠ ಹಿಡಿದು ತವರು ಮನೆ ಸೇರಿಕೊಂಡಿದ್ದಳು. ಆದ್ದರಿಂದ ಸಿಂಚನಾಳನ್ನು ನಾನು ಮೊಬೈಲ್‍ನಲ್ಲಿ ಹಾಗೂ ಇಮೇಲ್ ಮೂಲಕ ಸಂಪರ್ಕಿಸುತ್ತಿದ್ದೆ ಎಂದು ಪ್ರವೀಣ್ ಹೇಳಿಕೆ ನೀಡಿದ್ದಾರೆ. ಒಟ್ಟಾರೆ ನಾಲ್ವರು ಆತ್ಮಹತ್ಯೆಗೆ ಹಾಗೂ ಹಸುವಿನಿಂದ ಮಗು ಮೃತಪಟ್ಟಿರುವುದಕ್ಕೆ ಕೌಟುಂಬಿಕ ಕಲಹವೇ ಕಾರಣ ಎಂಬುದು ಮೇಲ್ನೋಟಕ್ಕೆಕಂಡುಬರುತ್ತಿದೆ.

Facebook Comments