ಫ್ಯಾಮಿಲಿ ಸುಸೈಡ್ : ಪತ್ನಿಯ ವಿರುದ್ಧವೇ 7 ಪುಟಗಳ ದೂರು ನೀಡಿದ ಶಂಕರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.18- ನನ್ನ ಹೆಣ್ಣು ಮಕ್ಕಳ ಸಂಸಾರ ಅಷ್ಟು ಸರಿ ಇರಲಿಲ್ಲ. ಬುದ್ದಿ ಹೇಳಿದರೂ ಗಂಡನ ಮನೆಗೆ ಹೋಗಲಿಲ್ಲ ಘೋರ ದುರಂತಕ್ಕೆಪತ್ನಿಯ ಪ್ರಚೋದನೆಯೇ ಕಾರಣವೆಂದು ಮೂವರು ಮಕ್ಕಳು,ಪತ್ನಿ ಹಾಗೂ ಮೊಮ್ಮಗುವನ್ನು ಕಳೆದುಕೊಂಡಿರುವ ಶಂಕರ್ ಪೊಲೀಸರಿಗೆ ನೀಡಿರುವ ಏಳು ಪುಟಗಳ ದೂರಿನಲ್ಲಿ ವಿವರಿಸಿದ್ದಾರೆ. ಯಶವಂತಪುರ ಕ್ಷೇತ್ರದ ತಿಗಳರಪಾಳ್ಯದಲ್ಲಿ ನಡೆದಿರುವ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ಹಾಗೂ 9 ತಿಂಗಳ ಹಸುಗೂಸಿನ ಸಾವಿನ ದುರಂತಕ್ಕೆ ಸಂಬಂಧಿಸಿದಂತೆ ಕುಟುಂಬದ ಯಜಮಾನ ಶಂಕರ್ ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮೂಲತಃ ಮಂಡ್ಯದ ಹಲ್ಲೇಗೆರೆ ಗ್ರಾಮದ ನಿವಾಸಿ ಶಂಕರ್ ಮಾಸಿಕ ಪತ್ರಿಕೆಯೊಂದರ ಸಂಪಾದಕರಾಗಿದ್ದಾರೆ. ಶಂಕರ್ ಪತ್ನಿ ಭಾರತಿ (51), ಮಕ್ಕಳಾದ ಸಿಂಚನಾ (34) ಸಿಂಧೂರಾಣಿ (33), ಮಧುಸಾಗರ್ (25) ಆತ್ಮಹತ್ಯೆಗೆ ಶರಣಾಗಿದ್ದರು ಜತೆಗೆ 9 ತಿಂಗಳ ಹಸುಗೂಸು ಹಸಿವಿನಿಂದ ಸಾವನ್ನಪ್ಪಿತ್ತು ಪವಾಡ ರೀತಿಯಲ್ಲಿ ಎರಡೂವರೆ ವರ್ಷದ ಮೊಮ್ಮಗಳು ಪ್ರೇಕ್ಷಾ ನಿತ್ರಾಣಗೊಂಡು ಬದುಕಿದ್ದಾಳೆ.

ಪತ್ರಿಕೋದ್ಯಮಿ ಶಂಕರ್ ತನ್ನ ಇಬ್ಬರು ಹೆಣ್ಣು ಮಕ್ಕಳಿಗೆ ಎಂಬಿಎ ಮಾಡಿಸಿ ಐಎಎಸ್ ತರಬೇತಿ ಕೊಡಿಸಿ ವಿವಾಹ ಮಾಡಿದ್ದರು. ಮಗನಿಗೂ ಬಿಇ ಶಿಕ್ಷಣ ಕೊಡಿಸಿದ್ದರು. ಆರ್ಥಿಕವಾಗಿ ಸದೃಢವಾಗಿದ್ದರೂ ಕೌಟುಂಬಿಕ ಕಲಹ, ಭಿನ್ನಾಭಿಪ್ರಾಯ ಹಾಗೂ ಅಸಮಾಧಾನದಿಂದ ಐವರ ಸಾವಿನಂಥ ಹೃದಯ ವಿದ್ರಾವಕ ಘಟನೆ ನಡೆದಿದೆ.

6 ವರ್ಷದ ಹಿಂದೆ ಶಂಕರ್ ಅವರ ಮೊದಲ ಮಗಳು ಸಿಂಚನಾಳಿಗೆ ಪ್ರವೀಣ್ ಜತೆ ವಿವಾಹವಾಗಿತ್ತು. ಜಕ್ಕೂರು ಬಳಿಯಲ್ಲಿ ಅಳಿಯ, ಮಗಳು, ಮೊಮ್ಮಗಳು ಹಾಗೂ ಕುಟುಂಬ ವಾಸವಿತ್ತು. ಬೇರೆ ಮನೆ ಮಾಡುವಂತೆ ಒತ್ತಾಯಿಸಿ ಒಂದೂವರೆ ವರ್ಷದ ಹಿಂದೆ ಸಿಂಚನ ತವರಿಗೆ ಹಿಂದಿರುಗಿದ್ದಳು. ಎರಡನೆಯ ಮಗಳು ಸಿಂಧುರಾಣಿಗೆ ಆಂಧ್ರದ ಗೋರ್ಲಾಂಟ ನಿವಾಸಿ ಶ್ರೀಕಾಂತ್ ಜತೆ ಕಳೆದ ಫೆಬ್ರವರಿಯಲ್ಲಿ ಮದುವೆಯಾಗಿತ್ತು. ಬೆಂಗಳೂರಿನ ಕಾಡುಗೋಡಿಯಲ್ಲಿ ವಾಸವಾಗಿದ್ದರು. ಇದೇ ತಿಂಗಳು ಮಗುವಿನ ನಾಮಕರಣ ಕಾರ್ಯಕ್ಕೆ ಸಿದ್ಧತೆ ನಡೆದಿತ್ತು ಮಗುವಿಗೆ ಕಿವಿ ಚುಚ್ಚುವ ಸಂಬಂಧ ಎರಡೂ ಕುಟುಂಬಗಳ ನಡುವೆ ವೈಮನಸ್ಯ ತಲೆದೋರಿತ್ತು.

ವಿದ್ಯಾವಂತರಾಗಿದ್ದ ವಿವಾಹಿತ ಹೆಣ್ಣು ಮಕ್ಕಳು ತಾಯಿಯ ಕುಮ್ಮಕ್ಕಿನಿಂದ ಗಂಡಂದಿರ ಮನೆಗೆ ತೆರಳದೆ ತವರು ಮನೆಯಲ್ಲೇ ಉಳಿದಿದ್ದರು. ಈ ವಿಚಾರವಾಗಿ ಶಂಕರ್ ಹಾಗೂ ಪತ್ನಿ ಭಾರತಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಮಗ ಮಧುಸಾಗರ್ ಬಿಎ ಪದವೀಧರನಾಗಿದ್ದು ಬ್ಯಾಂಕೊಂದರಲ್ಲಿ ಸಾಫ್ಟ್ ವೇರ್ ಇಂಜಿನಿಯರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಮಗನ ಭವಿಷ್ಯದ ದೃಷ್ಟಿಯಿಂದ ಬಾರ್ ತೆರೆಯಲು ಲೈಸೆನ್ಸ್ ಅನ್ನು ಸಹ ಶಂಕರ್ ಕೊಡಿಸಿದ್ದರು. ಕುಟುಂಬದ ಆರ್ಥಿಕ ವಿಚಾರಕ್ಕೆ ಸಂಬಂಧಿಸಿದಂತೆ ಪತ್ನಿ ಮಕ್ಕಳು ಹಿಡಿತ ಸಾಧಿಸಿದ್ದರು. ಹೆಣ್ಣುಮಕ್ಕಳನ್ನು ಗಂಡಂದಿರ ಮನೆಗೆ ಕಳಿಸುವಂತೆ ಎಷ್ಟೇ ಬುದ್ಧಿವಾದ ಹೇಳಿದರೂ ಪತ್ನಿ ಭಾರತಿ ಕೇಳುತ್ತಿರಲಿಲ್ಲ. ಮಕ್ಕಳು ಸುಖವಾಗಿರಲೆಂದು ತುಂಬಾ ಚೆನ್ನಾಗಿ ವಿವಾಹ ಮಾಡಿಕೊಟ್ಟಿದ್ದೆ. ಅಳಿಯಂದಿರ ಜತೆ ಅನ್ಯೋನ್ಯವಾಗಿರುವಂತೆ ಎಷ್ಟೇ ತಿಳಿಹೇಳಿದರೂ ಮಕ್ಕಳು ಕೇಳುತ್ತಿರಲಿಲ್ಲ. ಈ ವಿಚಾರವಾಗಿ ಕುಟುಂಬದಲ್ಲಿ ಆಗಾಗ್ಗೆ ಕಲಹ ನಡೆಯುತ್ತಿತ್ತು.

ಮಗಳು ಸಿಂಧುರಾಣಿಯನ್ನು ಅಡಗಿಸಿಟ್ಟು ಅಳಿಯ ಹಾಗೂ ಅವರ ಕುಟುಂಬಸ್ಥರ ಮೇಲೆ ಪತ್ನಿ ಭಾರತಿ ಸದಾ ಹಗೆ ಸಾಧಿಸುತ್ತಿದ್ದರು. ಭಾನುವಾರ ಮನೆಯಲ್ಲಿ ನಡೆದಿದ್ದ ಜಗಳ ತಾರಕಕ್ಕೇರಿ ಶಂಕರ್ ಮನೆ ತೊರೆದಿದ್ದರು. ಈ ಮಧ್ಯೆ ಹೆಂಡತಿ ಮಕ್ಕಳ ಆತ್ಮಹತ್ಯೆ ಮೊಮ್ಮಗನ ಸಾವು ಸಂಭವಿಸಿ ಸಂಸಾರವೇ ಸರ್ವನಾಶವಾಗಿದೆ. ಇಷ್ಟಕ್ಕೆಲ್ಲಾ ಪತ್ನಿ ಭಾರತಿ ಪ್ರಚೋದನೆಯೇ ಕಾರಣವೆಂದು ಶಂಕರ್ ನೀಡಿರುವ ಏಳು ಪುಟಗಳ ದೂರಿನಲ್ಲಿ ಉಲ್ಲೇಖವಾಗಿದೆ.

Facebook Comments