ಭಾರತಕ್ಕೆ ಬಂದಿಳಿದ 5 ರಫೇಲ್ ಫೈಟರ್ ಜೆಟ್‍ಗಳು, ದೇಶವಾಸಿಗಳಲ್ಲಿ ಪುಳಕ, ವಾಯುಪಡೆಗೆ ಬಂತು ಆನೆ ಬಲ ..!

ಈ ಸುದ್ದಿಯನ್ನು ಶೇರ್ ಮಾಡಿ

ಅಂಬಾಲಾ (ಹರ್ಯಾಣ), ಜು.29- ಭಾರತದ ಯುದ್ಧ ಸಾಮಥ್ರ್ಯದಲ್ಲೇ ಮಹಾ ಪರಿವರ್ತನೆಗೆ ಕಾರಣವಾಗುವ ಅತ್ಯಾಧುನಿಕ ರಫೇಲ್ ಫೈಟರ್ ಜೆಟ್‍ಗಳು ಇಂದು ಭಾರತೀಯ ವಾಯು ಪಡೆಗೆ ವಿಧ್ಯುಕ್ತವಾಗಿ ಸೇರ್ಪಡೆಗೊಂಡಿದೆ.

ಫ್ರಾನ್ಸ್‍ನಿಂದ 7,000 ಕಿಮೀ ದೂರ ಕ್ರಮಿಸಿ ಹರ್ಯಾಣದ ಸಿಬ್ ಅಂಬಾಲಾದ ವಾಯು ನೆಲೆಗೆ ಐದು ರಫೇಲ್ ಯುದ್ಧ ವಿಮಾನಗಳು ಇಂದು ಅಪರಾಹ್ನ ಬಂದಿಳಿಯುತ್ತಿದ್ದಂತೆ ಭಾರತೀಯರೆಲ್ಲರೂ ಪುಳಕಗೊಂಡರು.

ಲಡಾಖ್ ಮತ್ತು ಈಶಾನ್ಯ ಪ್ರಾಂತ್ಯದಲ್ಲಿ ಚೀನಾ ಕ್ಯಾತೆ ಮತ್ತು ಇಂಡೋ-ಪಾಕ್ ಗಡಿಯಲ್ಲಿ ಪಾಕಿಸ್ತಾನದ ತಗಾದೆ ಹೆಚ್ಚಾಗುತ್ತಿರುವ ಸಂದರ್ಭದಲ್ಲೇ ಜಗತ್ತಿನ ಅತ್ಯಂತ ಪ್ರಬಲ ರಫೇಲ್ ಯುದ್ಧ ವಿಮಾನಗಳು ಭಾರತೀಯ ವಾಯುಪಡೆ ಸೇವೆಗೆ ಸೇರ್ಪಡೆಗೊಂಡಿರುವುದು ವೈರಿ ರಾಷ್ಟ್ರಗಳು ಬೆಚ್ಚಿ ಬೀಳುವಂತೆ ಮಾಡಿದೆ.

ಫಾನ್ಸ್‍ನಿಂದ ಭಾರತಕ್ಕೆ ಬಂದ ಐದು ರಫೇಲ್ ಫೈಟರ್ ಜೆಟ್‍ಗಳಿಗೆ ಅಂಬಾಲಾದ ವಾಯು ನೆಲೆಯಲ್ಲಿ ಭರ್ಜರಿ ಸ್ವಾಗತ ಕೋರಲಾಯಿತು. ಇಂದು ಬೆಳಗ್ಗೆಯಿಂದಲೇ ಏರ್‍ಬೇಸ್‍ನಲ್ಲಿ ಹಬ್ಬದಂಥ ಸಡಗರ-ಸಂಭ್ರಮ ಮನೆ ಮಾಡಿತ್ತು.

ಅಗಾಧ ಸಾಮಥ್ರ್ಯದ ಸಮರ ವಿಮಾನಗಳನ್ನು ಸ್ವಾಗತಿಸಲು ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇಡೀ ಅಂಬಾಲಾ ಜಿಲ್ಲೆಯಲ್ಲಿ ಇಂದು ಉತ್ಸವದ ವಾತಾವರಣ ಮೇಳೈಸಿತ್ತು.

ಫೈಟರ್ ಜೆಟ್‍ಗಳು ಬಂದಿಳಿದ ಸಂದರ್ಭದಲ್ಲಿ ಮತ್ತು ಭೂಸ್ಪರ್ಶ ಮಾಡಿದ ನಂತರ ವಾಯು ನೆಲೆ ಮತ್ತು ಅದರ ಸುತ್ತಮುತ್ತ ಪ್ರದೇಶಗಳಲ್ಲಿ ಭಾರೀ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದ್ದು, ಫೋಟೊಗಳು ಮತ್ತು ವಿಡಿಯೋ ಚಿತ್ರೀಕರಣವನ್ನು ಸಂಪೂರ್ಣ ನಿಷೇಧಿಸಲಾಗಿದೆ.

ಅಲ್ಲದೇ ಅಂಬಾಲಾ ವಾಯು ನೆಲೆ ಸುತ್ತಮುತ್ತ 3 ಕಿಮೀ ವ್ಯಾಪ್ತಿಯಲ್ಲಿ ಜನರು ಖಾಸಗಿ ಡ್ರೋನ್‍ಗಳು ಮತ್ತು ಇತರ ಹಾರುವ ಯಂತ್ರಗಳ ಹಾರಾಟವನ್ನು ಅಂಬಾಲಾ ಜಿಲ್ಲಾಡಳಿತ ನಿಷೇಧಿಸಿದೆ.

ಭಾರೀ ಭದ್ರತಾ ದೃಷ್ಟಿಯಿಂದ ಅಂಬಾಲಾದಲ್ಲಿ ಜಿಲ್ಲಾಢಳಿತ ನಿನ್ನೆಯಿಂದಲೇ ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿದೆ. ಅಂಬಾಲಾ ವಾಯು ನೆಲೆ ಸುತ್ತಮುತ್ತ ಇರುವ ಧುಲ್‍ಕೋಟ್, ಬಲದೇವ್ ನಗರ್, ಗರ್ನಾಲಾ ಮತ್ತು ಪಂಜ್‍ಖೋರಾ ಪ್ರದೇಶಗಳಲ್ಲಿ ನಾಲ್ಕು ಮತ್ತು ಅದಕ್ಕಿಂತ ಹೆಚ್ಚು ಜನರ ಗುಂಪು ಸೇರುವುದನ್ನು ಸಂಪೂರ್ಣ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.

ರಫೇಲ್ ಯುದ್ಧ ವಿಮಾನಗಳು ವಾಯು ನೆಲೆಯಲ್ಲಿ ಭೂಸ್ಪರ್ಶ ಮಾಡಿದ ಸುದ್ಧಿ ತಿಳಿಯುತ್ತಿದ್ದಂತೆ ಜನರ ಹರ್ಷೋದ್ಗಾರ ಮುಗಿಲು ಮುಟ್ಟಿತು. ಅಂಬಾಲಾದ ಜನರು ಇಂದು ರಾತ್ರಿ 7 ರಿಂದ 7.30ರವರೆಗೆ ಲಕ್ಷಾಂತರ ಮೇಣದ ಬತ್ತಿಗಳನ್ನು ಹಚ್ಚಿ ಭಾರತೀಯ ವಾಯುಪಡೆಗೆ ಫೈಟರ್ ಜೆಟ್‍ಗಳ ಸೇರ್ಪಡೆಯನ್ನು ವಿನೂತನ ರೀತಿಯಲ್ಲಿ ಸ್ವಾಗತಿಸುವ ಕಾರ್ಯಕ್ರಮವಿದೆ.

ಗಗನ ಮಾರ್ಗದಲ್ಲೇ ಇಂಧನ ಭರ್ತಿ: ಫ್ರಾನ್ಸ್‍ನಿಂದ ಮೊನ್ನೆ ಹೊರಟ ಐದು ರಫೇಲ್ ಫೈಟರ್ ಜೆಟ್‍ಗಳು ಏಳು ಸಾವಿರ ಕಿಮೀ ಹಾರಾಟ ಮಾಡಿದ ಆಗಸದಲ್ಲೇ ಇಂಧನವನ್ನು ಭರ್ತಿ ಮಾಡಿಕೊಂಡು ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ)ನಲ್ಲಿ ನೆಲೆಸಿತ್ತು. ನಂತರ ಹರ್ಯಾಣದ ಅಂಬಾಲಾ ವಾಯು ನೆಲೆಗೆ ಬಂದಿಳಿಯಿತು.

ಫ್ರಾನ್ಸ್‍ನಿಂದ ಹೊರಟ ರಫೇಲ್ ಯುದ್ಧ ವಿಮಾನ ಆಕಾಶದಲ್ಲಿ ಹಾರುತ್ತಲೇ ಇಂಧನ ತುಂಬಿಸಿಕೊಂಡ ದೃಶ್ಯದ ಫೋಟೋಗಳನ್ನು ಭಾರತೀಯ ವಾಯುಪಡೆ (ಐಎಎಫ್) ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿತ್ತು.

ಬಹುಪಯೋಗಿ ಉದ್ದೇಶಗಳಿಗೆ ವ್ಯಾಪಕವಾಗಿ ಬಳಕೆಯಾಗುವ ರಫೇಲ್ ಫೈಟರ್ ಜೆಟ್‍ಗಳು ಅಪರಿಮಿತ ವೇಗದೊಂಧಿಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳಿಂದ ವೈರಿ ಗುರಿಗಳನ್ನು ಧ್ವಂಸ ಮಾಡುವ ಸಾಮಥ್ರ್ಯ ಹೊಂದಿದೆ. ಈ ವಿಮಾನದಲ್ಲಿ ಮೂರು ಏಕ ಆಸನಗಳು ಮತ್ತು ಎರಡು ಅವಳಿ ಸೀಟ್‍ಗಳು ಇವೆ.

ಲಡಾಖ್, ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶಗಳಲ್ಲಿ ಚೀನಾ ಪದೇ ಪದೇ ಕ್ಯಾತೆ ತೆಗೆಯುತ್ತಾ ಉಪಟಳ ನೀಡುತ್ತಿರುವ ಹಿನ್ನೆಲೆಯಲ್ಲಿ ಗಡಿ ಭಾಗದಲ್ಲಿ ಕದನ ಕಾರ್ಮೋಡಗಳು ಸೃಷ್ಟಿಯಾಗಿರುವಾಗಲೇ ಭೀಮ ಬಲದ ರಫೇಲ್ ಜೆಟ್ ಯುದ್ಧ ವಿಮಾನಗಳು ಭಾರತದ ಸೇನಾ ಸೇವೆಗೆ ಸಮರ್ಪಣೆಗೊಂಡಿರುವುದು ಭಾರೀ ಮಹತ್ವ ಪಡೆದುಕೊಂಡಿದೆ.

Facebook Comments

Sri Raghav

Admin