ಎಫ್‍ಕೆಸಿಸಿಐಗೆ ಮೇಯರ್ ತಿರುಗೇಟು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.10-ಕನ್ನಡ ನಾಡು, ನುಡಿ, ಭಾಷೆ ಬಗ್ಗೆ ಗೌರವ ಇಲ್ಲದವರ ಜೊತೆಗೆ ನಾವು ಯಾವುದೇ ಸಂಬಂಧ ಇಟ್ಟುಕೊಳ್ಳುವುದಿಲ್ಲ ಎಂದು ಮೇಯರ್ ಗೌತಮ್‍ಕುಮಾರ್ ಎಫ್‍ಕೆಸಿಸಿಐಗೆ ತಿರುಗೇಟು ನೀಡಿದ್ದಾರೆ. ನಿನ್ನೆ ಎಫ್‍ಕೆಸಿಸಿಐನವರು ನಾಮಫಲಕದಲ್ಲಿ ಕಡ್ಡಾಯವಾಗಿ ಕನ್ನಡ ಬಳಕೆ ಮಾಡುವ ಮೊದಲು ನಗರದ ರಸ್ತೆ ಗುಂಡಿ ಮುಚ್ಚಬೇಕು. ಕಸದ ಸಮಸ್ಯೆ ನಿವಾರಿಸಬೇಕೆಂದು ಬಿಬಿಎಂಪಿಗೆ ಪತ್ರ ಬರೆದಿದ್ದರು.

ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಮೇಯರ್, ನಮ್ಮ ಕೆಲಸ ನಮಗೆ ಮಾಡಲು ಗೊತ್ತಿದೆ. ಮೊದಲು ನಿಮ್ಮ ಕೆಲಸ ಏನೆಂದು ತಿಳಿದುಕೊಳ್ಳಿ. ಕನ್ನಡದ ಬಗ್ಗೆ ಅವಹೇಳನವಾಗಿ ಮಾತನಾಡಿದರೆ ಸುಮ್ಮನಿರುವುದಿಲ್ಲ. ಈ ಬಗ್ಗೆ ನಿಮ್ಮ ಧೋರಣೆ ನಿಲ್ಲಿಸದಿದ್ದರೆ ಎಫ್‍ಕೆಸಿಸಿಐನ ಯಾವುದೇ ಸಭೆ ಸಮಾರಂಭಗಳಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಎಚ್ಚರಿಸಿದರು.ಜಾಹೀರಾತು ಬೈಲಾ, ಜಾಹೀರಾತು ಫಲಕಗಳು ಹಾಗೂ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಭಾಷೆಗೆ ಆದ್ಯತೆ ನೀಡುವ ಕುರಿತ ಇಂದು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳೊಂದಿಗೆ ಹಮ್ಮಿಕೊಂಡಿದ್ದ ಸಭೆ ನಂತರ ಮೇಯರ್ ಮಾತನಾಡಿದರು.

ಈಗಾಗಲೇ ಎಲ್ಲಾ ಜಂಟಿ ಆಯುಕ್ತರಿಗೆ ಸೂಚನೆ ಕೊಟ್ಟಿದ್ದೇವೆ. ಕನ್ನಡ ನಾಮಫಲಕ ಅಳವಡಿಸದ 27 ಸಾವಿರ ಮಳಿಗೆಗಳು, ಉದ್ದಿಮೆಗಳಿಗೆ ನೋಟೀಸ್ ಕೊಟ್ಟಿದ್ದೇವೆ. ಇದನ್ನು ಇನ್ನೂ ಮುಂದು ವರೆಸು ತ್ತೇವೆ. ಡಿಸೆಂಬರ್ ಅಂತ್ಯದವರೆಗೂ ಗಡುವು ನೀಡಲಾಗಿದ್ದು, ಅಷ್ಟರೊಳಗೆ ಕಡ್ಡಾಯ ವಾಗಿ ನಾಮಫಲಕ ಹಾಕಲೇಬೇಕು. ಇದರಿಂದ ನಾವು ಹಿಂದೆ ಸರಿಯುವುದಿಲ್ಲ ಎಂದು ಗುಡುಗಿದರು.

ಗಡುವು ನೀಡಿದ ನಂತರವೂ ಕನ್ನಡ ನಾಮಫಲಕ ಅಳವಡಿಸದಿದ್ದರೆ ಅಂತಹ ಮಳಿಗೆಗಳು, ಉದ್ದಿಮೆಗಳ ವಾಣಿಜ್ಯ ಪರವಾನಗಿ ರದ್ದುಪಡಿಸುವುದಲ್ಲದೆ, ನಾವೇ ಸ್ವತಃ ಬೀದಿಗೆ ಇಳಿದು ಮಳಿಗೆಗಳಿಗೆ ಬೀಗ ಜಡಿಯುತ್ತೇವೆ ಎಂದು ಎಚ್ಚರಿಸಿದರು. ಶಿವಾಜಿನಗರದ ಖಾಸಗಿ ಹೊಟೇಲ್‍ಗಳು, ಹೈ-ಫೈ ಅಂಗಡಿಗಳಿಗೂ ಸಹ ನೋಟೀಸ್ ಕೊಟ್ಟಿದ್ದೇವೆ. ಇಡೀ ನಗರದಲ್ಲಿ ಕಡ್ಡಾಯವಾಗಿ ನಾಮಫಲಕ ಹಾಕುವವರೆಗೂ ನಾವು ವಿಶ್ರಮಿಸು ವುದಿಲ್ಲ ಎಂದು ಗೌತಮ್‍ಕುಮಾರ್ ಹೇಳಿದರು.

ಹೋರ್ಡಿಂಗ್ಸ್ ಸ್ಟ್ರಕ್ಚರ್ ತೆರವುಗೊಳಿಸಲು ಸೂಕ್ತ ಕ್ರಮ: ನಗರದಾದ್ಯಂತ ಅಳವಡಿಸಿರುವ ಹೋರ್ಡಿಂಗ್ಸ್ ಸ್ಟ್ರಕ್ಚರ್‍ಗಳನ್ನು ತೆರವು ಮಾಡುವಂತೆ ಹೈಕೋರ್ಟ್ ಆದೇಶಿಸಿದೆ. ಈ ಸಂಬಂಧ ಕೂಡಲೆ ಸೂಕ್ತ ಕ್ರಮ ಕೈಗೊಂಡು ತೆರವುಗೊಳಿಸುವಂತೆ ಎಲ್ಲಾ ವಲಯದ ಆಯುಕ್ತರಿಗೆ ಮೇಯರ್ ಸೂಚನೆ ನೀಡಿದರು. ಹೋರ್ಡಿಂಗ್ಸ್‍ಗಳನ್ನು ಸ್ಟ್ರಕ್ಚರ್ ಸಮೇತ ತೆರವುಗೊಳಿಸಬೇಕು. ತೆರವುಗೊಳಿಸುವ ವೇಳೆ ಅಧಿಕಾರಿ/ಸಿಬ್ಬಂದಿಗಳಿಗೆ ಯಾವುದೇ ಸಮಸ್ಯೆ ಆಗದಂಗೆ ಫೋಲೀಸ್ ರಕ್ಷಣೆ ನೀಡುವಂತೆ ಫೋಲೀಸ್ ಇಲಾಖೆಗೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.

ಪಾಲಿಕೆ ವ್ಯಾಪ್ತಿಯಲ್ಲಿರುವ ಹೋರ್ಡಿಂಗ್ಸ್, ಫೋಸ್ಟರ್ಸ್, ಮರದ ಮೇಲೆ ಅಳವಡಿಸಿರುವ ಬಿತ್ತಿಪತ್ರ, ಗೋಡೆಬರಹಗಳನ್ನು ಪರಿಣಾಮಕಾರಿಯಾಗಿ ತೆರವುಗೊಳಿಸಿ ನಗರದ ಸೌಂದರ್ಯೀಕರಣಕ್ಕೆ ಹೆಚ್ಚು ಆದ್ಯತೆ ನೀಡಬೇಕು. ನಗರದಲ್ಲಿ ಹೋರ್ಡಿಂಗ್ಸ್ ಅಳವಡಿಸಿರುವ ಕೆಲ ಮಾಲೀಕರು ನ್ಯಾಯಾಲದಲ್ಲಿ ಸ್ಟೇ ತಂದಿದ್ದಾರೆ. ಈ ಪೈಕಿ ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನು ಇತ್ಯರ್ಥ ಮಾಡುವಂತೆ ಕಾನೂನು ಕೋಶ ವಿಭಾಗದ ಮುಖ್ಯಸ್ಥರಿಗೆ ಮೇಯರ್ ಸೂಚನೆ ನೀಡಿದರು.

ಈ ವೇಳೆ ಆಡಳಿತ ಪಕ್ಷದ ನಾಯಕರಾದ ಮುನೀಂದ್ರ ಕುಮಾರ್, ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜೀದ್, ಜೆಡಿಎಸ್ ಪಕ್ಷದ ನಾಯಕರಾದ ನೇತ್ರಾನಾರಾಯಣ್, ಕಾನೂನು ಕೋಶ ವಿಭಾಗದ ಮುಖ್ಯಸ್ಥ ದೇಶಪಾಂಡೆ, ಹಣಕಾಸು ವಿಭಾಗದ ಜಂಟಿ ಆಯುಕ್ತ ವೆಂಕಟೇಶ್, ವಲಯ ಜಂಟಿ ಆಯುಕ್ತ ಬಾಲಶೇಖರ್, ರಾಮಕೃಷ್ಣ, ವೆಂಕಟಾಚಲಪತಿ, ವೀರಭದ್ರಸ್ವಾಮಿ, ಅಶೋಕ್ ಮತ್ತಿತರರು ಉಪಸ್ಥಿತರಿದ್ದರು.

Facebook Comments