ವ್ಯಂಗ್ಯ ಚಿತ್ರಕಾರ, ವನ್ಯಜೀವಿ ಫೋಟೋಗ್ರಾಫರ್ ಈಗ ಮಹಾರಾಷ್ಟ್ರ ಸಿಎಂ..!

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ನ.28- ಮಹಾರಾಷ್ಟ್ರದಲ್ಲಿ ಕಿಂಗ್ ಮೇಕರ್ ಎಂದೇ ಪ್ರಸಿದ್ಧಿ ಪಡೆದಿದ್ದ ಠಾಕ್ರೆ ಕುಟುಂಬ ಕುಡಿ ಇದೇ ಮೊದಲ ಬಾರಿಗೆ ಸಿಎಂ ಆಗುವ ಮೂಲಕ ಮೂಲಕ ಇತಿಹಾಸ ಸೃಷ್ಟಿಸುತ್ತಿದೆ.
ಶಿವಸೇನೆಯಿಂದ 20 ವರ್ಷಗಳ ಹಿಂದೆ ನಾರಾಯಣ ರಾಣೆ ಸಿಎಂ ಆಗಿದ್ದರಾದರೂ ಠಾಕ್ರೆ ಕುಟುಂಬದ ನಾಯಕರೊಬ್ಬರು ಮುಖ್ಯಮಂತ್ರಿ ಹುದ್ದೆಗೇರುತ್ತಿರುವುದು ಇದೇ ಮೊದಲು.

ವನ್ಯಜೀವಿ ಫೋಟೋಗ್ರಾಫರ್ ಮತ್ತು ಜಾಹಿರಾತು ಸಂಸ್ಥೆ ಮಾಲೀಕರಾಗಿದ್ದ ಮಹಾರಾಷ್ಟ್ರದ ನಿಯೋಜಿತ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಒಬ್ಬ ಪ್ರಭಾವಿ ರಾಜಕಾರಣಿಯಾಗಿ ಬೆಳೆದು ಇಡೀ ಮಹಾರಾಷ್ಟ್ರ ರಾಜಕೀಯವನ್ನೇ ನಿಯಂತ್ರಿಸುವ ಮಟ್ಟಕ್ಕೆ ಬೆಳೆದಿರುವುದು ಅಚ್ಚರಿಯ ಸಂಗತಿ.

ವಾಸ್ತವವಾಗಿ ತುಂಬಾ ಸಂಕೋಚ, ಮೃದು ಹಾಗೂ ಮಿತ ಭಾಷೆಯಾಗಿದ್ದ ಉದ್ಧವ್ ಮರಾಠಾ ಪ್ರಾಂತ್ಯದ ಅತ್ಯುನ್ನತ ಸ್ಥಾನಕ್ಕೆ ಏರುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಸುಮಾರು 20 ವರ್ಷಗಳ ಹಿಂದಿನವರೆಗೆ ಅಂದರೆ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ನಾರಾಯಣ ರಾಣೆ ಅವರನ್ನು ಶಿವಸೇನಾದಿಂದ ಉಚ್ಛಾಟಿಸುವವರೆಗೆ ಯಾರೂ ಉದ್ಧವ್ ಠಾಕ್ರೆ ಅವರನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ ಮತ್ತು ಶಿವಸೇನಾ ಸಂಸ್ಥಾಪಕ ಬಾಳಾ ಸಾಹೇಬ್ ಠಾಕ್ರೆ ಅವರ ಪರಂಪರೆ ಮುಂದುವರೆಸುತ್ತಾರೆ ಎಂದು ಯಾರೂ ಭಾವಿಸಿರಲಿಲ್ಲ.

ಏಕೆಂದರೆ ಉದ್ದವ್ ಒಬ್ಬ ಸಂಕೋಚದ, ಮಿದು ಭಾಷೆಯ ಮತ್ತು ಅಂತರ್ಮುಖಿಯಾಗಿದ್ದರು. ಹೀಗಾಗಿ ಯಾರೂ ಅವರನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಅತಿ ಕಡಿಮೆ ಅವಧಿಯಲ್ಲಿ ಪಕ್ಷ ಸಂಘಟನೆಯಲ್ಲಿ ಸಂಪೂರ್ಣ ಹಿಡಿತ ಸಾಧಿಸಿದ್ದಲ್ಲದೆ ತಮ್ಮದೇ ಕಾರ್ಯ ವೈಖರಿ ಮೂಲಕ ಪ್ರಭಾವಿ ರಾಜಕಾರಣಿಯಾಗಿ ಬೆಳೆದರು.

ಮಹಾರಾಷ್ಟ್ರದಲ್ಲಿ ಮರಾಠ ಅಸ್ತಿತ್ವವನ್ನು ಬಡಿದೆಬ್ಬಿಸಿ ಶಿವ ಸೈನಿಕರೆಂಬ ಕಾರ್ಯಕರ್ತರ ಪಡೆಯನ್ನು ತಯಾರಿಸಿ ತನ್ನ ವಿಭಿನ್ನ ರಾಜಕೀಯ ನಡೆ ಹಾಗೂ ಹೋರಾಟದ ಮೂಲಕ ದೇಶಾದ್ಯಂತ ಸಂಚಲನ ಮೂಡಿಸಿದವರು ಪ್ರಭಾವಿ ನಾಯಕ ಬಾಳಾ ಠಾಕ್ರೆ. ಇದೇ ಮೊದಲ ಬಾರಿಗೆ ಕಿಂಗ್ (ಸಿಎಂ) ಆಗುವ ಮೂಲಕ ಮೂಲಕ ಇತಿಹಾಸ ಸೃಷ್ಟಿಸುತ್ತಿದ್ದಾರೆ.

1966 ರಲ್ಲಿ ಬಾಳಾ ಸಾಹೇಬ್ ಠಾಕ್ರೆ ಶಿವಸೇನೆ ಪಕ್ಷವನ್ನು ಸ್ಥಾಪಿಸಿದರು. ಸ್ಥಳೀಯ ಸಂಸ್ಥೆಗಳಿಂದ ಹಿಡಿದು ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದರೂ ಠಾಕ್ರೆ ಕುಟುಂಬದ ಯಾರು ಚುನಾವಣೆಗೆ ಸ್ಪರ್ಧೆ ನಡೆಸಿರಲಿಲ್ಲ. ತಂದೆ ಬಾಳಾ ಠಾಕ್ರೆ ನಿಧನದ ಬಳಿಕ ಪಕ್ಷದ ಹೊಣೆ ಹೊತ್ತ ಠಾಕ್ರೆ ಪುತ್ರ ಉದ್ಧವ್ ಠಾಕ್ರೆ ಕೂಡಾ ಇದುವರೆಗೂ ಯಾವುದೇ ಚುನಾವಣೆ ಅಖಾಡಕ್ಕೆ ಇಳಿದಿರಲಿಲ್ಲ.

2019ರ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿ ಠಾಕ್ರೆ ಕುಟುಂಬದ ಸದಸ್ಯ ಉದ್ಧವ್ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಆದಿತ್ಯ ಠಾಕ್ರೆ ಮುಂದಿನ ಸಿಎಂ ಎಂದೇ ಶಿವಸೇನೆ ಬಿಂಬಿಸಿತ್ತು. ಆದರೆ ಬದಲಾದ ರಾಜಕೀಯ ವಿದ್ಯಮಾನಗಳ ಹಿನ್ನೆಲೆಯಲ್ಲಿ ಉದ್ಧವ್ ಈಗ ಮುಖ್ಯಮಂತ್ರಿಯಾಗಿ ಮಹಾರಾಷ್ಟ್ರದಲ್ಲಿ ಹೊಸ ರಾಜಕೀಯ ಪರ್ವ ಸೃಷ್ಟಿಸಿದ್ದಾರೆ.

ತಂದೆ ಬಾಳಾಸಾಹೇಬ್ ಠಾಕ್ರೆ, ಚಿಕ್ಕಪ್ಪ ಶ್ರೀಕಾಂತ್ ಠಾಕ್ರೆ ಮತ್ತು ಚಿಕ್ಕಪ್ಪನ ಮಗ ರಾಜ್ ಠಾಕ್ರೆ ಅವರಂತೆಯೇ ಉದ್ಧವ್ ಕೂಡ ವ್ಯಂಗ್ಯ ಚಿತ್ರಕಾರ. ಮತ್ತು ಹವ್ಯಾಸಿ ವನ್ಯಜೀವಿ ಛಾಯಾಗ್ರಾಹಕ ಚಿಕ್ಕಪ್ಪನ ಒಡನಾಟದಲ್ಲಿಯೇ ಹೆಚ್ಚು ಬೆಳೆದ ಉದ್ಧವ್ ಬಳಿಕ ಅವರ ಪ್ರಭಾವದಿಂದಲೇ ವನ್ಯ ಛಾಯಾಗ್ರಹಣದಲ್ಲೂ ಗಮನ ಸೆಳೆದರು.  1985ರಲ್ಲಿ ಶಿವಸೇನಾ ಬೃಹನ್ ಮುಂಬೈ ಮಹಾನಗರ ಪಾಲಿಕೆಯಲ್ಲಿ ಮೊದಲ ಬಾರಿ ಅಧಿಕಾರಕ್ಕೆ ಬಂದಿತು. ಆ ಚುನಾವಣೆಯ ಪ್ರಚಾರದಲ್ಲಿ 25 ವರ್ಷದ ಉದ್ಧವ್ ಸಕ್ರಿಯರಾಗಿ ತೊಡಗಿಸಿಕೊಂಡಿದ್ದರು.

ಪ್ರತಿಷ್ಠಿತ ಜೆಜೆ ಅನ್ವಯಿಕ ಕಲಾ ಸಂಸ್ಥೆಯಿಂದ ಪದವಿ ಪಡೆದ ಅವರು ಸ್ನೇಹಿತರೊಂದಿಗೆ ಜತೆಗೂಡಿ ಜಾಹೀರಾತು ಸಂಸ್ಥೆಯೊಂದನ್ನು ಸ್ಥಾಪಿಸಿದ್ದರು. 1989ರಲ್ಲಿ ಶಿವಸೇನಾ ತನ್ನ ಮುಖವಾಣಿಯಾದ ಸಾಮ್ನಾ – ಮರಾಠಿ ದಿನಪತ್ರಿಕೆ ಆರಂಭಿಸಿದಾಗ ಅದರಲ್ಲಿ ಉದ್ಧವ್ ಪ್ರಮುಖ ಪಾತ್ರ ವಹಿಸಿದರು. ನಂತರ ಅದರ ಸಂಪಾದಕರೂ ಆದರು.

2002ರಲ್ಲಿ ನಡೆದ ಬಿಎಂಸಿ ಚುನಾವಣೆಯಲ್ಲಿ ಉದ್ಧವ್ ಸಕ್ರಿಯರಾಗಿ ತೊಡಗಿಸಿಕೊಂಡಿದ್ದರು. ಶಿವಸೇನಾ ಅಧಿಕಾರಕ್ಕೆ ಬಂದಿತು. 2003ರಲ್ಲಿ ಶಿವಸೇನಾದ ಮೊದಲ ಕಾರ್ಯಾಧ್ಯಕ್ಷರಾಗಿ ಉದ್ಧವ್ ನೇಮಕವಾದರು. ನಂತರ ಶಿವಸೇನಾದ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿದ ಉದ್ಧವ್ ತಮ್ಮ ಪ್ರತಿಸ್ಪರ್ಧಿಗಳಾದ ರಾಜ್ ಠಾಕ್ರೆ, ಮಾಜಿ ಮುಖ್ಯಮಂತ್ರಿ ನಾರಾಯಣ ರಾಣೆ ಅವರನ್ನು ಹಂತ ಹಂತವಾಗಿ ಪಕ್ಕಕ್ಕೆ ತಳ್ಳಿ ಬೆಳೆಯತೊಡಗಿದರು.

ಉದ್ಧವ್‍ನನ್ನು ಸಾರ್ವಜನಿಕವಾಗಿ ಟೀಕಿಸಿದ ರಾಣೆ ಅವರನ್ನು 2005ರಲ್ಲಿ ಉಚ್ಛಾಟನೆ ಮಾಡಲಾಯಿತು. ರಾಜ್ ಠಾಕ್ರೆ ಎಂಎನ್‍ಎಸ್ ನಿರ್ಮಿಸಿದರು.2013ರಲ್ಲಿ ಬಾಳಾ ಠಾಕ್ರೆ ನಿಧನದ ಬಳಿಕ ಶಿವಸೇನಾ ಸಂಪೂರ್ಣವಾಗಿ ಉದ್ಧವ್ ಠಾಕ್ರೆ ಹಿಡಿತಕ್ಕೆ ಸಿಕ್ಕಿತು. ಈಗ ಶಿವಸೇನಾದಲ್ಲಿ ಉದ್ಧವ್ ಅವರಿಗೆ ಪರ್ಯಾಯವಾದ ನಾಯಕರಿಲ್ಲ.

ತಮ್ಮ ಉತ್ತರಾಧಿಕಾರಿಯನ್ನಾಗಿ ಅವರು ಮಗ ಆದಿತ್ಯ ಠಾಕ್ರೆಯನ್ನು ಬೆಳೆಸುತ್ತಿದ್ದಾರೆ.
ಉದ್ದವ್ ಇಂದು ಸಂಜೆ 6.40ಕ್ಕೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದು ಮಹಾರಾಷ್ಟ್ರದಲ್ಲಿ ಇಂದಿನಿಂದ ಹುಲಿ (ಪಕ್ಷದ ಲಾಂಛನ) ರಾಜ್ಯಭಾರ ಆರಂಭವಾಗಿದೆ.

Facebook Comments

Sri Raghav

Admin