ಫ್ಲೆಕ್ಸ್, ಬ್ಯಾನರ್ ನಿಯಂತ್ರಣದ ಹೈಕೋರ್ಟ್ ಆದೇಶ ಸ್ವಾಗತಾರ್ಹ : ಅಶೋಕ್

ಈ ಸುದ್ದಿಯನ್ನು ಶೇರ್ ಮಾಡಿ

R.Ashok
ಬೆಂಗಳೂರು, ಆ.12-ನಗರದಲ್ಲಿ ಫ್ಲೆಕ್ಸ್, ಬ್ಯಾನರ್ ನಿಯಂತ್ರಿಸಲು ಹೈಕೋರ್ಟ್ ನೀಡಿರುವ ಆದೇಶವನ್ನು ಸ್ವಾಗತಿಸುವುದಾಗಿ ಮಾಜಿ ಡಿಸಿಎಂ ಆರ್.ಅಶೋಕ್ ಇಂದಿಲ್ಲಿ ತಿಳಿಸಿದರು. ನಗರದಲ್ಲಿಂದು ಭಾರತೀಯ ಜನತಾ ಪಾರ್ಟಿ ಹಮ್ಮಿಕೊಂಡಿದ್ದ ಶಕ್ತಿ ಕೇಂದ್ರ ಪ್ರಮುಖರು ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ನಾಗರಿಕರಿಗೆ ಫ್ಲೆಕ್ಸ್, ಬ್ಯಾನರ್, ಬಿತ್ತಿ ಪತ್ರ ಹಾಗೂ ಗೋಡೆ ಬರಹಗಳಿಂದ ಸಾಕಷ್ಟು ಕಿರಿಕಿರಿಯಾಗುತ್ತಿತ್ತು. ಫ್ಲೆಕ್ಸ್, ಹೋರ್ಡಿಂಗ್ಸ್‍ಗಳಿಂದ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಿತ್ತು. ಜೊತೆಗೆ ಪರಿಸರ ಹಾನಿ ಉಂಟಾಗುತ್ತಿತ್ತು ಎಂದು ಹೇಳಿದರು.

ಈ ಜಾಹೀರಾತುಗಳಿಂದ ವರ್ಷಕ್ಕೆ ಆರೇಳು ಲಕ್ಷ ಮಾತ್ರ ಲಾಭ. ಆದರೆ ಈ ಹಣಕ್ಕಾಗಿ ಬೆಂಗಳೂರಿನ ಅಂದವನ್ನು ಕೆಡಿಸುವುದು ಸರಿಯಲ್ಲ. ಕೋರ್ಟ್ ಆದೇಶಕ್ಕೂ ಮುನ್ನವೇ ಬಿಬಿಎಂಪಿ ಇಂತಹ ಕೆಲಸಕ್ಕೆ ಮುಂದಾಗಬೇಕಿತ್ತು. ಆದರೆ ಆದೇಶದ ನಂತರವೂ ಬಿಬಿಎಂಪಿ ಮೀನಾಮೇಷ ಎಣಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಮ್ಮ ಪ್ರಣಾಳಿಕೆಯಲ್ಲಿಯೂ ಫ್ಲೆಕ್ಸ್, ಬ್ಯಾನರ್ ಹಾವಳಿ ತಡೆಯುವ ಬಗ್ಗೆ ಉಲ್ಲೇಖ ಮಾಡಲಾಗಿತ್ತು. ಒಂದು ವರ್ಷಕ್ಕೆ ಮಾತ್ರ ಫ್ಲೆಕ್ಸ್ ಬ್ಯಾನರ್‍ಗಳ ನಿಷೇಧ ಮಾಡುವ ಬದಲಿಗೆ ಸಂಪೂರ್ಣವಾಗಿ ನಿಷೇಧಿಸಲಿ ಎಂದರು.

ಮಾದಕ ದ್ರವ್ಯ ಮಾರಾಟ ಹಾವಳಿ ಎಗ್ಗಿಲ್ಲದೆ ನಡೆಯುತ್ತಿದ್ದರೂ ಸರ್ಕಾರ ಇದನ್ನು ತಡೆಯಲು ಮುಂದಾಗಿಲ್ಲ. ಈ ನಿಟ್ಟಿನಲ್ಲಿ ಸರ್ಕಾರದ ಕ್ರಮ ವಿಳಂಬವಾದರೆ ಬಿಜೆಪಿ ಬೃಹತ್ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಪಕ್ಷದ ಕಾರ್ಯಕ್ರಮಗಳಲ್ಲಿ ಕಾರ್ಪೋರೇಟರ್‍ಗಳು ಭಾಗಿಯಾಗಬೇಕು. ಇಲ್ಲದೆ ಇದ್ದಲ್ಲಿ ಮುಂದಿನ ಚುನಾವಣೆಯಲ್ಲಿ ಬಿಬಿಎಂಪಿ ಟಿಕೆಟ್ ಇಲ್ಲ ಎಂದು ಹೇಳಿದರು. ಬೆಂಗಳೂರಿನಿಂದ ಏರ್‍ಶೋ ಸ್ಥಳಾಂತರ ವಿಚಾರವಾಗಿ ಕೇಂದ್ರ ಸಚಿವ ಅನಂತ್‍ಕುಮಾರ್‍ರೊಂದಿಗೆ ಚರ್ಚಿಸಿದ್ದೇನೆ. ಸಂಪೂರ್ಣ ಮಾಹಿತಿ ಪಡೆದು ಈ ಬಗ್ಗೆ ಪ್ರತಿಕ್ರಿಯಿಸುತ್ತೇನೆ ಎಂದು ನುಡಿದರು.

Facebook Comments

Sri Raghav

Admin