ಅಸ್ಸಾಂನಲ್ಲಿ ಪ್ರವಾಹಕ್ಕೆ ಸತ್ತವರ ಸಂಖ್ಯೆ 32ಕ್ಕೆ ಏರಿಕೆ, ನೆಲೆ ಕಳೆದುಕೊಂಡ 16 ಲಕ್ಷ ಮಂದಿ ..!

ಈ ಸುದ್ದಿಯನ್ನು ಶೇರ್ ಮಾಡಿ

ಗುವಾಹತಿ, ಜು.1-ಈಶಾನ್ಯ ರಾಜ್ಯ ಅಸ್ಸಾಂನ ವಿವಿಧೆಡೆ ಎಡಬಿಡದೆ ಸುರಿಯುತ್ತಿರುವ ಭಾರೀ ಮಳೆ ಮತ್ತು ಭೀಕರ ಪ್ರವಾಹದಿಂದ ಮೃತಪಟ್ಟವರ ಸಂಖ್ಯೆ 32ಕ್ಕೇರಿದೆ. ಪ್ರಕೃತಿ ವಿಕೋಪದಿಂದಾಗಿ ಸುಮಾರು 25 ಜಿಲ್ಲೆಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, 16 ಲಕ್ಷಕ್ಕೂ ಅಧಿಕ ಮಂದಿ ಸಂತ್ರಸ್ತರಾಗಿದ್ದಾರೆ.

ಈಶಾನ್ಯ ಭಾರತದ ಅಸ್ಸಾಂ, ಅರುಣಾಚಲ ಪ್ರದೇಶ ಮತ್ತು ಮೇಘಾಲಯಗಳಲ್ಲಿ ಮುಂದಿನ 48 ತಾಸುಗಳಲ್ಲಿ ಮತ್ತೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮಳೆ ಮತ್ತು ಪ್ರವಾಹದಿಂದಾಗಿ ಭಾರೀ ಹಾನಿ ಸಂಭವಿಸಿದ್ದು, ಕೋಟ್ಯಂತರ ರೂ.ಗಳಷ್ಟು ನಷ್ಟವಾಗಿದೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.

ಬಾರ್‍ಪೆಟಾ, ದಿಬ್ರುಗಢ ಮತ್ತು ಗೋಲ್‍ಪಾರಾ ಜಿಲ್ಲೆಗಳಲ್ಲಿ ಅತಿ ಹೆಚ್ಚು ಸಾವು ನೋವು ಸಂಭವಿಸಿದೆ. 16 ಲಕ್ಷಕ್ಕೂ ಅಧಿಕ ಮಂದಿ ಪ್ರಕೃತಿ ವಿಕೋಪದಿಂದ ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ.

30,000 ಜನರಿಗೆ ವಿವಿಧ ಜಿಲ್ಲೆಗಳ 275ಕ್ಕೂ ಹೆಚ್ಚು ಶಿಬಿರಗಳಲ್ಲಿ ತಾತ್ಕಾಲಿಕ ಆಶ್ರಯ ಕಲ್ಪಿಸಲಾಗಿದೆ.  ಭಾರೀ ಮಳೆ, ಮತ್ತು ಪ್ರವಾಹದಿಂದ ನೂರಾರು ಜÁನುವಾರುಗಳು ಮೃತಪಟ್ಟಿದ್ದು, 12 ಲಕ್ಷಕ್ಕೂ ಹೆಚ್ಚು ಪ್ರಾಣಿಗಳು ಸಂಕಷ್ಟಕ್ಕೆ ಸಿಲುಕಿವೆ.

Facebook Comments