ಬಿಹಾರ, ಅಸ್ಸಾಂನಲ್ಲಿ ಜಲಪ್ರಳಯಕ್ಕೆ 100ಕ್ಕೂ ಹೆಚ್ಚು ಸಾವು, 65 ಜಿಲ್ಲೆಗಳ ಜಲಾವೃತ..!

ಈ ಸುದ್ದಿಯನ್ನು ಶೇರ್ ಮಾಡಿ

ಪಾಟ್ನಾ/ಗುವಾಹತಿ,ಜು.19- ಬಿಹಾರ ಮತ್ತು ಅಸ್ಸಾಂ ರಾಜ್ಯದಲ್ಲಿ ಭಾರೀ ಮಳೆ ಹಾಗೂ ಪ್ರವಾಹದಿಂದ ಜಲಪ್ರಳಯ ಸೃಷ್ಟಿಯಾಗಿದ್ದು, ಈವರೆಗೆ 100ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಅನೇಕರು ಗಾಯಗೊಂಡಿದ್ದು, ಹಲವು ಮಂದಿ ನಾಪತ್ತೆಯಾಗಿದ್ದಾರೆ. ಇದರಿಂದ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.
ಈ ಎರಡೂ ರಾಜ್ಯಗಳ 65 ಜಿಲ್ಲೆಗಳು ಜಲಾವೃತವಾಗಿದ್ದು, ಲಕ್ಷಾಂತರ ಮಂದಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇವೆಲ್ಲದರ ನಡುವೆ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆ ಸಮಾರೋಪಾದಿಯಲ್ಲಿ ಸಾಗಿದೆ. ಬಿಹಾರದಲ್ಲಿ ಭಾರೀ ಮಳೆ ಮತ್ತು ಪ್ರವಾಹದಿಂದ 78 ಮಂದಿ ಮೃತಪಟ್ಟಿದ್ದಾರೆ. ಸೀತಾಮರಿ ಜಿಲ್ಲೆ ಅತ್ಯಂತ ಸಂಕಷ್ಟಕ್ಕೆ ಒಳಗಾಗಿದ್ದು, ಇಲ್ಲಿ 18 ಮಂದಿ ಅಸುನೀಗಿದ್ದಾರೆ.

ಮಧುಬನಿಯಲ್ಲಿ 14 ಮತ್ತು ಅರಾರಿಯಲ್ಲಿ 12 ಮಂದಿ ಸಾವಿಗೀಡಾಗಿದ್ದಾರೆ. ಬಿಹಾರದ 28 ಜಿಲ್ಲೆಗಳು ಜಲಾವೃತವಾಗಿದ್ದು, ನೂರಾರು ಮನೆಗಳು ಕುಸಿದು ಬಿದ್ದಿವೆ.
ಪ್ರವಾಹದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು, ಅವರ ಶೋಧ ಕಾರ್ಯ ಮುಂದುವರೆದಿದೆ.

ಇನ್ನು ಈಶಾನ್ಯ ರಾಜ್ಯ ಅಸ್ಸಾಂನಲ್ಲಿ ಕಳೆದ ಒಂದು ವಾರಗಳಿಂದ ಸುರಿಯುತ್ತಿರುವ ಕುಂಭದ್ರೋಣ ಮಳೆಗೆ 33ಕ್ಕೂ ಹೆಚ್ಚು ಜಿಲ್ಲೆಗಳು ಸಂಕಷ್ಟಕ್ಕೀಡಾಗಿದ್ದು, 35ಕ್ಕೂ ಅಧಿಕ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಬ್ರಹ್ಮಪುತ್ರ ಮತ್ತು ಅದರ ಉಪನದಿಗಳು ಅಪಾಯದ ಮಟ್ಟ ಮೀರಿ ಬೋರ್ಗರೆಯುತ್ತಿವೆ. ಅಸ್ಸಾಂನಲ್ಲಿ ಒಟ್ಟು 4 ಸಾವಿರ ಮನೆಗಳು ಪ್ರವಾಹದಿಂದ ನಾಶವಾಗಿದೆ.

ಈ ಎರಡೂ ರಾಜ್ಯಗಳಲ್ಲೂ ರಾಷ್ಟ್ರೀಯ ವಿಪತ್ತು ನಿರ್ವಹಣೆ ದಳ (ಎನ್‍ಡಿಆರ್‍ಎ) ಮತ್ತು ರಾಜ್ಯ ವಿಪತ್ತು ನಿರ್ವಹಣೆ ದಳ (ಎಸ್‍ಡಿಆರ್‍ಎಫ್) ಸಮರೋಪಾದಿಯಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯದಲ್ಲಿ ನಿರತವಾಗಿದೆ.

Facebook Comments