ನೆರೆ ಹಾವಳಿ ತಗ್ಗಿಸಲು ಕೇಂದ್ರದಿಂದ 1054 ಕೋಟಿ ಅನುದಾನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 22- ಈ ವರ್ಷ ಮಳೆಗಾಲದ ವೇಳೆ ಪ್ರವಾಹದಿಂದ ಹೆಚ್ಚಿನ ಸಮಸ್ಯೆಯಾಗುವುದನ್ನು ತಪ್ಪಿಸಲು ಕೇಂದ್ರ ಸರ್ಕಾರ ಮುಂಜಾಗ್ರತಾ ಕ್ರಮವಾಗಿ 1054 ಕೋಟಿ ರೂ.ಗಳ ಅನುದಾನ ನೀಡಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಮಳೆಯಿಂದ ಸಾಕಷ್ಟು ಸಮಸ್ಯೆ ಉಂಟಾಗಿತ್ತು. ಕೇಂದ್ರ ಸರ್ಕಾರ 336 ಕೋಟಿ ರೂ. ಒದಗಿಸಿತ್ತು. ಈ ಬಾರಿ 15ನೇ ಹಣಕಾಸು ಆಯೋಗದ ಸಭೆಯಲ್ಲಿ ಚರ್ಚೆ ನಡೆಸಿದ್ದು, ರಾಜ್ಯ ಪ್ರಕೃತಿ ವಿಕೋಪ ನಿರ್ವಹಣಾ ನಿಧಿ (ಎಸ್‍ಡಿಆರ್‍ಎಂಎಫ್) ಯಡಿ 1054 ಕೋಟಿ ರೂ.ಗಳನ್ನು ಒದಗಿಸಲಾಗುತ್ತಿದೆ ಎಂದರು.

ಇದರಲ್ಲಿ 210.8 ಕೋಟಿ ರೂ.ಗಳನ್ನು ಪ್ರವಾಹ ಸಂದರ್ಭದಲ್ಲಿ ತೊಂದರೆಗೊಳಗಾಗುವವರ ಪುನರ್ ವಸತಿಗಾಗಿ ಆಸ್ಪತ್ರೆ, ಆಶ್ರಯ ತಾಣ ಸೇರಿದಂತೆ ಇತರೆ ಸೌಲಭ್ಯಗಳಿಗಾಗಿ ಒದಗಿಸಲಾಗಿದೆ. 843.2 ಕೋಟಿ ರೂ.ಗಳನ್ನು ಪ್ರಕೃತಿ ವಿಕೋಪದ ನಿರ್ವಹಣೆಗೆ ಬಳಸಿಕೊಳ್ಳಬಹುದಾಗಿದೆ.

ರಾಜ್ಯದ ನಾಲ್ಕೈದು ಜಿಲ್ಲೆಗಳನ್ನು ಹೊರತುಪಡಿಸಿ ಈ ವರ್ಷ ಉಳಿದ ಜಿಲ್ಲೆಗಳಲ್ಲಿ ಸಾಮಾನ್ಯ ಮಳೆಯಾಗುವ ಅಂದಾಜಿದೆ ಎಂದು ಅವರು ಹೇಳಿದರು.

ಕಳೆದ ವರ್ಷ ಪ್ರವಾಹದಲ್ಲಿ 6.5ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿತ್ತು. ಅದಕ್ಕೆ 1185 ಕೋಟಿ ರೂ.ಗಳ ಪರಿಹಾರವನ್ನು ಕೃಷಿಕರ ಖಾತೆಗೆ ಈಗಾಗಲೇ ಪಾವತಿ ಮಾಡಲಾಗಿದೆ.

32,482 ಮನೆಗಳು 75ಕ್ಕಿಂತಲೂ ಹೆಚ್ಚಿನ ಹಾನಿಗೆ ಒಳಗಾಗಿದ್ದು, ಅಂತಹ ಮನೆಗಳ ಪುನರ್ ನಿರ್ಮಾಣಕ್ಕಾಗಿ 5 ಲಕ್ಷ ರೂ. ನೀಡಲು ಸರ್ಕಾರ ನಿರ್ಧರಿಸಿತ್ತು. 5 ಲಕ್ಷದಲ್ಲಿ ಮೊದಲ ಕಂತಿನ ಒಂದು ಲಕ್ಷ ರೂ.ವನ್ನು 32,424 ಫಲಾನುಭವಿಗಳಿಗೆ ಪಾವತಿಸಲಾಗಿದೆ ಎಂದರು.

12,607 ಮಂದಿಗೆ ಎರಡನೇ ಕಂತಿನ ಎರಡು ಲಕ್ಷ ರೂ.ಗಳನ್ನು, 3ಲಕ್ಷ ರೂ.ಗಳ ಮೂರನೇ ಕಂತನ್ನು 4582 ಮಂದಿಗೆ, 4 ಲಕ್ಷ ರೂ.ಗಳ 4ನೇ ಕಂತನ್ನು 656 ಮಂದಿಗೆ, ಅಂತಿಮ ಕಂತಾದ 5 ಲಕ್ಷ ರೂ.ಗಳನ್ನು 47 ಮಂದಿಗೆ ಬಿಡುಗಡೆ ಮಾಡಲಾಗಿದೆ ಎಂದು ವಿವರಿಸಿದರು.

ಇನ್ನು 667 ಮಂದಿ ಮನೆ ನಿರ್ಮಾಣ ಕಾರ್ಯ ಆರಂಭಿಸಿಲ್ಲ. ಇದಕ್ಕಾಗಿ ಜಿಲ್ಲಾಧಿಕಾರಿಗಳಿಂದ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ಖುದ್ದಾಗಿ ತಾವೇ ಪತ್ರ ಬರೆಯಲಾಗುವುದು. ಒಟ್ಟು ಮನೆ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರ 557.67 ಕೋಟಿ ರೂ.ಗಳನ್ನು ಒದಗಿಸಿದೆ ಎಂದು ಸಚಿವರು ತಿಳಿಸಿದರು.

Facebook Comments

Sri Raghav

Admin