ಬಿಡುಗಡೆಯಾಗಿರುವ ಹಣ ಸಾಕಾಗುವುದಿಲ್ಲ, ಹೆಚ್ಚಿನ ಅನುದಾನಕ್ಕೆ ಮನವಿ ಮಾಡ್ತೀವಿ : ಸಿಎಂ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.7-ಕೇಂದ್ರ ಸರ್ಕಾರ ರಾಜ್ಯಕ್ಕೆ ಬಿಡುಗಡೆ ಮಾಡಿರುವ ರಾಷ್ಟ್ರೀಯ ಪ್ರಕೃತಿ ವಿಕೋಪ ಪರಿಹಾರ ನಿಧಿಯ ಹಣ ಕಡಿಮೆಯಾಗಿದ್ದು, ಇನ್ನೂ ಹೆಚ್ಚಿನ ಅನುದಾನ ನೀಡಬೇಕೆಂದು ಮನವಿ ಮಾಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಈಗ ಬಿಡುಗಡೆಯಾಗಿರುವ ಹಣ ಸಾಕಾಗುವುದಿಲ್ಲ. ಈಗಾಗಲೇ ಎರಡು ಕಂತುಗಳಲ್ಲಿ ಕರ್ನಾಟಕಕ್ಕೆ ಸರಿಸುಮಾರು ಮೂರು ಸಾವಿರ ಕೋಟಿಯಷ್ಟು ಅನುದಾನ ಬಂದಿದೆ.

ಇನ್ನೂ ಹೆಚ್ಚುವರಿಯಾಗಿ ಹಣ ಬಿಡುಗಡೆ ಮಾಡುವ ವಿಶ್ವಾಸವಿದೆ. ದೆಹಲಿಗೆ ತೆರಳಿದ ವೇಳೆ ನಾನು ಈ ಬಗ್ಗೆ ಸಂಬಂಧಪಟ್ಟವರನ್ನು ಗಮನಸೆಳೆಯುತ್ತೇನೆ ಎಂದು ಹೇಳಿದರು. ವಿಧಾನಸೌಧದ ಮುಂಭಾಗ ವಿವಿಧ ಮಾದರಿಯ ನೂತನ ಬಸ್‍ಗಳಿಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯಕ್ಕೆ ಬಂದು ಹೋದ ಮೂರು ದಿನಗಳಲ್ಲಿ 1869 ಕೋಟಿ ಬಿಡುಗಡೆ ಮಾಡಿದ್ದಾರೆ. ಇದಕ್ಕಾಗಿ ನಾನು ಅವರನ್ನು ಜನತೆಯ ಪರವಾಗಿ ಅಭಿನಂದಿಸುತ್ತೇನೆ ಎಂದರು.

ಮೊದಲ ಹಂತದಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ 1200ಕೋಟಿ ರೂ. ಹಣ ಬಿಡುಗಡೆ ಮಾಡಿತ್ತು. ಈಗ 1869 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಇದರಿಂದ ನಮಗೆ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಸಲಹೆ ಪಡೆಯುವೆ: ಬಜೆಟ್ ಮಂಡನೆ ಕುರಿತಂತೆ ನಾನು ವಿವಿಧ ವಲಯದ ಮುಖಂಡರು, ತಜ್ಞರು, ರೈತರು ಸೇರಿದಂತೆ ಅನೇಕರಿಂದ ಸಲಹೆ ಪಡೆಯಲಿದ್ದೇನೆ. ಯಾರೇ ಸಲಹೆ, ಸೂಚನೆ, ಮಾರ್ಗದರ್ಶನ ಕೊಟ್ಟರೂ ಸರ್ಕಾರ ಅದನ್ನು ವಿನಮ್ರದಿಂದ ಸ್ವೀಕರಿಸಲಿದೆ ಎಂದರು. ಈಗಾಗಲೇ ನಾನು ಬಜೆಟ್‍ಪೂರ್ವಭಾವಿಯಾಗಿ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೇನೆ. ಮುಂದೆ ಇನ್ನೂ ಕೆಲವು ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು. ಬಳಿಕ ಇಲಾಖಾವಾರು ಸಭೆ ನಡೆಸಿ ಎಲ್ಲರ ಅಭಿಪ್ರಾಯ ಪಡೆದು ಉತ್ತಮ ಬಜೆಟ್ ಮಂಡಿಸುವ ಪ್ರಾಮಾಣಿಕ ಮಾಡುತ್ತೇನೆ ಎಂದರು.

ಪ್ರತಿಪಕ್ಷಗಳು ಸಲಹೆ ನೀಡಿದರೂ ಅದನ್ನು ಸ್ವೀಕರಿಸುತ್ತೇನೆ. ಕರ್ನಾಟಕದ ಕಲ್ಯಾಣಕ್ಕಾಗಿ ಪ್ರತಿಪಕ್ಷದವರು ಸಲಹೆಗಳನ್ನು ನೀಡಲಿ. ಈ ಬಾರಿ ರೈತ ಪರವಾದ ಬಜೆಟ್ ಮಂಡಿಸಲು ಆಲೋಚಿಸಿದ್ದೇನೆ. ನಾಡಿನ ಸರ್ವಾಂಗೀಣ ಅಭಿವೃದ್ಧಿ ಗಮನದಲ್ಲಿರಿಸಿಕೊಂಡು ಬಜೆಟ್ ಮಂಡಿಸುವುದಾಗಿ ತಿಳಿಸಿದರು.

ನ್ಯಾಯಾಲಯಕ್ಕೆ ಮೇಲ್ಮನವಿ: ರಾಜ್ಯದ ಕುಡಿಯುವ ನೀರು ಯೋಜನೆಗಳಿಗೆ ಕೆಲವು ಆಕ್ಷೇಪಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ನಾವು ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿದ್ದೇವೆ. ರಾಜ್ಯದ ನೀರಾವರಿ ಯೋಜನೆಗಳಿಗೆ ತಮಿಳುನಾಡು ಪದೇ ಪದೇ ಆಕ್ಷೇಪಿಸಿದ ಹಿನ್ನೆಲೆಯಲ್ಲಿ ಕಾನೂನು ತಜ್ಞರ ಜೊತೆ ಚರ್ಚಿಸಿ ಮೇಲ್ಮನವಿ ಹಾಕಿದ್ದೇವೆ ಎಂದು ತಿಳಿಸಿದರು.

ಮಾರ್ಕಂಡೇಯ ನದಿಗೆ ಅಣೆಕಟ್ಟು ನಿರ್ಮಾಣ, ಯಲ್ಲಮನಪ್ಪ ಚಿಟ್ಟಿ ಕೆರೆಯಿಂದ ಹೊಸಕೋಟೆ ಕೆರೆಗೆ ನೀರು ಹರಿಸುವುದು, ಮಾಲೂರು ಕೆರೆಯಿಂದ ಲಕ್ಕೂರು ಕೆರೆಗೆ ನೀರು ಪೂರೈಕೆ, ಪೆನ್ನಾ ನದಿಗೆ ತಟ್ಟನೂರು ಬಳಿ ಅಣೆಕಟ್ಟು ನಿರ್ಮಾಣಕ್ಕೆ ತಮಿಳುನಾಡು ಆಕ್ಷೇಪವೆತ್ತಿದೆ.  ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿದ್ದು, ಇವು ಕುಡಿಯುವ ನೀರಿನ ಯೋಜನೆಗಳಾಗಿವೆ. ಕೋಲಾರ, ಬಂಗಾರಪೇಟೆ, ಮಾಲೂರು ಹಾಗೂ 45 ಹಳ್ಳಿಗಳಿಗೆ ಅನುಕೂಲವಾಗಲಿದೆ.

ಯೋಜನೆ ವಿಳಂಬವಾದರೆ ಜನರು ಕುಡಿಯುವ ನೀರಿಗೆ ತೊಂದರೆಯಾಗುತ್ತದೆ. ಇವುಗಳು ಕೇವಲ ಕುಡಿಯುವ ನೀರಿನ ಯೋಜನೆಯಾಗಿರುವುದರಿಂದ ಇದಕ್ಕೆ ಆಕ್ಷೇಪ ವ್ಯಕ್ತಪಡಿಸುವುದು ಸರಿಯಲ್ಲ. ತಮಿಳುನಾಡು ಅರ್ಜಿಯನ್ನು ವಜಾಗೊಳಿಸುವಂತೆ ಮೇಲ್ಮನವಿ ಸಲ್ಲಿಸಲಾಗಿದೆ ಎಂದರು.

Facebook Comments