ಅಭ್ಯರ್ಥಿಗಳಿಗೆ ಸಂತ್ರಸ್ತರ ತರಾಟೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.22- ಉತ್ತರ ಕರ್ನಾಟಕದಲ್ಲಿ ನೆರೆ ಸಂತ್ರಸ್ತರ ಗೋಳು ತಪ್ಪಿಲ್ಲ. ಪ್ರವಾಹ ಪೀಡಿತರ ಕೋಪ ಉಪ ಚುನಾವಣೆ ಅಭ್ಯರ್ಥಿಗಳ ಮೇಲೆ ಪರಿಣಾಮ ಬೀರಿದೆ. ಕುಡಿಯಲು ನೀರಿಲ್ಲ, ನಿಲ್ಲಲು ನೆಲೆ ಇಲ್ಲ, ಎಲ್ಲವನ್ನೂ ಕಳೆದುಕೊಂಡು ಬೀದಿಯಲ್ಲಿದ್ದೇವೆ. ನೀವಿಲ್ಲಿ ಮತ ಕೇಳಲು ಬಂದಿದ್ದೀರಾ ಎಂದು ಅಥಣಿ, ಕಾಗವಾಡ ಕ್ಷೇತ್ರದಲ್ಲಿ ನೊಂದ ಜನ ಉಪ ಚುನಾವಣೆ ಅಭ್ಯರ್ಥಿಗಳ ಮೇಲೆ ಹರಿಹಾಯ್ದಿದ್ದಾರೆ.

ಇಂದು ಕಾಗವಾಡ, ಅಥಣಿ ಕ್ಷೇತ್ರದ ಅಭ್ಯರ್ಥಿಗಳು ಚುನಾವಣಾ ಪ್ರಚಾರಕ್ಕೆ ತೆರಳಿದ ಸಂದರ್ಭದಲ್ಲಿ ಮಹಿಳೆಯರು ಮತ್ತಿತರರು ಮುಗಿಬಿದ್ದರು. ಭಾರೀ ಮಳೆ ಮತ್ತು ಪ್ರವಾಹದಿಂದ ಸಂತ್ರಸ್ತರಾಗಿ ಬೀದಿಯಲ್ಲಿದ್ದೇವೆ. ನಮಗಿನ್ನೂ ಯಾವುದೇ ಪರಿಹಾರ ಸಿಕ್ಕಿಲ್ಲ. ಮೊದಲು ಪರಿಹಾರ ಕೊಡಿ ನಂತರ ಮತ ಕೊಡುತ್ತೇವೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಬಿಜೆಪಿಯಲ್ಲಿದ್ದು ಕಾಂಗ್ರೆಸ್ ಸೇರ್ಪಡೆಯಾಗಿರುವ ರಾಜು ಕಾಗೆ ಕಾಗವಾಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಲವು ಹಳ್ಳಿಗಳಲ್ಲಿ ಪ್ರಚಾರ ನಡೆಸುತ್ತಿದ್ದ ಸಂದರ್ಭದಲ್ಲಿ ಈ ಸನ್ನಿವೇಶ ಎದುರಾಯಿತು. ನಾವಿಲ್ಲಿ ಮುಳುಗಿಹೋಗಿದ್ದೇವೆ. ಮಕ್ಕಳು ಮರಿಗಳೊಂದಿಗೆ ಬೀದಿಯಲ್ಲಿದ್ದೇವೆ. ಕುಡಿಯಲು ನೀರು ಕೊಡಿ, ಮನೆ ಕಟ್ಟಿಸಿಕೊಡಿ ಆಮೇಲೆ ಮತ ಹಾಕುತ್ತೇವೆ ಎಂದು ರಾಜು ಕಾಗೆ ಮೇಲೆ ಮುಗಿಬಿದ್ದಿದ್ದಾರೆ.

ಅನರ್ಹ ಶಾಸಕ ಶ್ರೀಮಂತ ಪಾಟೀಲ್ ಅವರಿಗೂ ಇದೇ ಅನುಭವವಾಗಿದೆ. ಇಂದು ಪ್ರಚಾರಕ್ಕೆ ತೆರಳಿದ್ದ ಸಂದರ್ಭದಲ್ಲಿ ಪ್ರವಾಹ ಪೀಡಿತ ಗ್ರಾಮಗಳ ಗ್ರಾಮಸ್ಥರು ಇವರನ್ನು ತರಾಟೆಗೆ ತೆಗೆದುಕೊಂಡರು. ಚುನಾವಣೆ ಸಂದರ್ಭದಲ್ಲಿ ಮಾತ್ರ ಮತ ಕೇಳಲು ಬರುತ್ತಾರೆ. ಬಾಕಿಯಂತೆ ನಮ್ಮನ್ನು ಕೇಳುವವರು ಯಾರೂ ಇಲ್ಲ ಎಂದು ಹರಿಹಾಯ್ದರು. ಬೆಳಗಾವಿ ಜಿಲ್ಲೆಯ ಅಥಣಿ, ಗೋಕಾಕ್, ಕಾಗವಾಡ ಮೂರೂ ಕ್ಷೇತ್ರಗಳಲ್ಲಿ ಇದೇ ಪರಿಸ್ಥಿತಿ ಇದೆ. ತಮಗಾಗಿರುವ ನೋವು ಸಹಿಸಿಕೊಂಡು ಸಂತ್ರಸ್ತರು ಚುನಾವಣೆಯಲ್ಲಿ ಪಾಲ್ಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಕಟ ತಡೆಯಲಾರದವರು ರಾಜಕಾರಣಿಗಳ ಮೇಲೆ ಆಕ್ರೋಶ ಹೊರಹಾಕುತ್ತಿದ್ದಾರೆ.

Facebook Comments