ನೆರೆ ನಿಂತರೂ ನಿಲ್ಲದ ಸಂತ್ರಸ್ತರ ಕಣ್ಣೀರು…!
ಬೆಂಗಳೂರು,ಸೆ.16- ಬೆಳಗಾವಿಯಲ್ಲಿ ಸುರಿದ ಮಳೆ ಹಾಗೂ ನದಿಗಳ ಆರ್ಭಟಕ್ಕೆ ಲಕ್ಷಾಂತರ ಜನರ ಬದುಕು ದುಸ್ತರವಾಗಿದೆ. ಮನೆ, ಆಸ್ತಿ ಕಳೆದುಕೊಂಡು ಬೀದಿಗೆ ಬಿದ್ದಿರುವ ಲಕ್ಷಾಂತರ ಸಂತ್ರಸ್ತರು ಕಣ್ಣೀರಿಡುತ್ತಿದ್ದರೂ ರಾಜ್ಯ ಹಾಗೂ ಕೇಂದ್ರ ಸರ್ಕಾರ ದಿವ್ಯ ನಿರ್ಲಕ್ಷ್ಯ ತೋರುತ್ತಿವೆ. ಈವರೆಗೂ ಬಿಡಿಗಾಸಿನ ಪರಿಹಾರ ನೀಡಿಲ್ಲ.
ಪರಿಹಾರ ಕೇಂದ್ರಗಳು ಹೆಸರಿಗೆ ಮಾತ್ರ ಕಾಳಜಿ ಕೇಂದ್ರಗಳಾಗಿದ್ದು ಸಂತ್ರಸ್ತರು ಕತ್ತಲಿನಲ್ಲಿ ಬದುಕು ಸಾಗಿಸುವಂತಾಗಿದೆ. ಮಳೆ ನಿಂತರೂ ಸಂತ್ರಸ್ತರ ಕಣ್ಣೀರ ಧಾರೆ ನಿಂತಿಲ್ಲ. ಆಸರೆಗಾಗಿ ಮಹಿಳೆಯರು, ಮಕ್ಕಳು, ವೃದ್ಧ ಜೀವಗಳು ಅರಸುತ್ತಿವೆ. ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.
ಒಂದು ತಿಂಗಳಿನಿಂದ ಶಾಲೆಗೆ ಹೋಗದೆ ಶಿಕ್ಷಣ ವಂಚಿತರಾದ ಮಕ್ಕಳು, ನೆಲೆ ಇಲ್ಲದೆ ದಿಕ್ಕೆಟ್ಟಿದ್ದಾರೆ. ಚಿಕ್ಕೋಡಿ ವ್ಯಾಪ್ತಿಯ 81 ಪ್ರವಾಹ ಪೀಡಿತ ಗ್ರಾಮಗಳಲ್ಲಿ ದುಃಖ ಮಡುಗಟ್ಟಿದೆ. ಯಾರಾದರೂ ಮಾತನಾಡಿಸಿದರೆ ಸಾಕು ಕಣ್ಣುಗಳು ತೇವಗೊಳ್ಳುತ್ತವೆ. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ದೊಡ್ಡವಾಡ, ಪೀಕೆ ನಾಗನೂರ, ದರೂರ, ಕವಟಕೊಪ್ಪ, ಅವರಕೋಡ, ಹುಲಗಾಳ ಗ್ರಾಮಗಳ ಜನರ ಕಥೆ-ವ್ಯಥೆ ಕೇಳಿದರೆ ಎಂತಹವರ ಕರುಳು ಕಿತ್ತು ಬರುತ್ತದೆ.
ಇದ್ದ ಮನೆಗಳು ಬಿದ್ದು ಹೋಗಿ, ಸದ್ಯ ಅತಂತ್ರರಾದ ಸಂತ್ರಸ್ತರಿಗೆ ಮುಂದೇನು ಎಂಬ ಚಿಂತೆ ಕಾಡತೊಡಗಿದೆ. ಈ ನಡುವೆ ಜನಪ್ರತಿನಿಧಿಗಳಿಂದ ಭರವಸೆಯ ಮಹಾಪೂರವೇ ಹರಿದು ಬರುತ್ತಿವೆ. ಕನಿಷ್ಠ ತಾತ್ಕಾಲಿಕ ಶೆಡ್ಗಳನ್ನಾದರೂ ನಿರ್ಮಾಣ ಮಾಡಿಕೊಟ್ಟಿಲ್ಲ. ಅಧಿಕಾರಿಗಳ ಆಮೆಗತಿಯ ಕಾರ್ಯಾಚರಣೆಯಿಂದಾಗಿ ಹಲವು ಕುಟುಂಬಗಳು ಕಣ್ಣೀರಿನಲ್ಲಿ ಕೈ ತೊಳೆಯುತ್ತಿವೆ.
ಜಮೆಯಾಗದ ಚೆಕ್: ಬಹುತೇಕ ಗ್ರಾಮಗಳಲ್ಲಿ ನೂರಾರು ಮನೆಗಳು ಕುಸಿದು ಹೋಗಿದ್ದು ತಾತ್ಕಾಲಿಕ ಪರಿಹಾರವಾಗಿ ಸರ್ಕಾರ ಕೊಟ್ಟ 10 ಸಾವಿರ ರೂ.ಗಳ ಪರಿಹಾರದ ಚೆಕ್ ಕೂಡ ಜಮೆಯಾಗದೆ ಸಂತ್ರಸ್ತರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ನಮ್ಮ ಸ್ಥಿತಿ ಶತ್ರುಗಳಿಗೂ ಬೇಡ. ನಮ್ಮನ್ನು ಸಂಪೂರ್ಣವಾಗಿ ಬೇರೆ ಎಲ್ಲಾದರೂ ಸ್ಥಳಾಂತರ ಮಾಡಿ ಎಂದು ಸಂತ್ರಸ್ತರು ಅಲವತ್ತುಕೊಳ್ಳುತ್ತಿದ್ದಾರೆ. ಉಕ್ಕಿ ಹರಿದ ನದಿಯಿಂದಾಗಿ ಮನೆ ಮಠ ಕೊಚ್ಚಿ ಹೋಗಿದೆ. ಮಕ್ಕಳ ವಿದ್ಯಾಭ್ಯಾಸ ಮೊಟಕಾಗಿದೆ. ಯಾರೂ ಬಂದು ಹೋದರೂ ನಮ್ಮ ಸಂಕಷ್ಟ ಮಾತ್ರ ಕಮ್ಮಿಯಾಗಿಲ್ಲ. ನಮಗೆ ಶಾಶ್ವತ ಪರಿಹಾರ ಕಲ್ಪಿಸಿ ಎಂಬುದು ಒಕ್ಕೊರಲ ನೋವಿನ ಕೂಗಾಗಿದೆ. ಕೃಷ್ಣ, ಘಟಪ್ರಭಾ, ಮಲಪ್ರಭಾ ನದಿಗಳ ಪ್ರವಾಹಕ್ಕೆ ಸಿಲುಕಿ ಹತ್ತಾರು ಜನ ಪ್ರಾಣವನ್ನೂ ಕಳೆದುಕೊಂಡಿದ್ದಾರೆ.
ಅದರಲ್ಲೂ ರಾಮದುರ್ಗ ತಾಲೂಕಿನ ಸಂಗಳ ಗ್ರಾಮದ 55 ಕುಟುಂಬಗಳ ಪಾಡು ಹೇಳತೀರದು. ಪ್ರತಿನಿತ್ಯ ನರಕಯಾತನೆ. 200ಕ್ಕೂ ಹೆಚ್ಚು ಸಂತ್ರಸ್ತರ ಬದುಕು ಬೀದಿ ಪಾಲಾಗಿದೆ. ಜಿಲ್ಲಾಡಳಿತದ ನೆರವು ಸಿಗದೆ ಒಂದು ತಿಂಗಳಿನಿಂದ ಸಂಗಳ ಗ್ರಾಮದ ಕಾಲುವೆ ಪಕ್ಕದಲ್ಲಿ ಟೆಂಟ್ ಹಾಕಿಕೊಂಡು ಭಯದಿಂದಲೇ ಬದುಕುತ್ತಿದ್ದಾರೆ. ವಿದ್ಯುತ್ ಸಂಪರ್ಕ, ಕುಡಿಯುವ ನೀರಿಲ್ಲದೇ ನರಕ ಯಾತನೆ ಅನುಭವಿಸುತ್ತಿದ್ದಾರೆ.
ತಾತ್ಕಾಲಿಕ ಶೆಡ್ ನಿರ್ಮಾಣ ಮಾಡದೇ ಇರುವುದರಿಂದ ತಾವೇ ಜೋಪಡಿ ಹಾಕಿಕೊಂಡು ಬದುಕಿನ ಬಂಡಿ ಸಾಗಿಸುತ್ತಿದ್ದಾರೆ. ಸಂತ್ರಸ್ತರ ನೋವಿಗೆ ದನಿಯಾಗಬೇಕಾಗಿದ್ದ ರಾಜ್ಯ ಹಾಗೂ ಕೇಂದ್ರ ಸರ್ಕಾರ ಜಾಣ ಕುರುಡರಂತೆ ವರ್ತಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಮಾಂಜರಿಯಲ್ಲಿ ಮನೆಗಳು ಬಿದ್ದು ಹೋದರೂ ಜನಪ್ರತಿನಿಧಿಗಳು ಕೇವಲ ಭರವಸೆ ನೀಡುತ್ತಿದ್ದಾರೆಯೇ ಹೊರತು ಯಾವುದೇ ಪರಿಹಾರ ನೀಡುತ್ತಿಲ್ಲ. ಸದ್ಯ ಸಮುದಾಯ ಭವನ, ದನದ ಕೊಟ್ಟಿಗೆಯಲ್ಲೇ ಜೀವನ ನಡೆಸುತ್ತಿದ್ದೇವೆ. ಗ್ರಾಮದಲ್ಲಿ ಸುಮಾರು 500ಕ್ಕೂ ಹೆಚ್ಚು ಮನೆಗಳು ನೆಲಕ್ಕುರುಳಿವೆ. ದಲಿತ ಕಾಲೋನಿಯಲ್ಲಿ ನೂರಕ್ಕೂ ಹೆಚ್ಚು ಮನೆಗಳು ಸಂಪೂರ್ಣ ಬಿದ್ದು ಹೋಗಿವೆ. ನೆರವಿನ ಹಸ್ತಕ್ಕಾಗಿ ಕಾದು ಕುಳಿತಿದ್ದಾರೆ.
ಅಂಬೇಡ್ಕರ್ ಸಮುದಾಯ ಭವನದಲ್ಲಿ ನಾಲ್ಕೈದು ಕುಟುಂಬಗಳು ಸೀರೆ ಪರದೆ ಕಟ್ಟಿಕೊಂಡು ಅಷ್ಟರಲ್ಲೇ ಜೀವನ ನಡೆಸುತ್ತಿದ್ದಾರೆ. ಇನ್ನುಳಿದವರು ದನದ ಕೊಟ್ಟಿಗೆಯಲ್ಲಿ ಆಶ್ರಯ ಪಡೆದಿದ್ದಾರೆ. ಕೋಟ್ಯಂತರ ರೂ. ಹಾನಿಯಾಗಿದ್ದರೂ, ಎಲ್ಲಾ ಕಡೆ ಸಮೀಕ್ಷೆಯಾಗಿದ್ದರೂ ಮಾಂಜರಿ ಗ್ರಾಮದಲ್ಲಿ ಮನೆಗಳ ಸಮೀಕ್ಷೆ ನಡೆದಿಲ್ಲ. ಕಂದಾಯ ಇಲಾಖೆ ಮತ್ತು ಗ್ರಾ.ಪಂ ನಡುವಿನ ಮುಸುಕಿನ ಗುದ್ದಾಟ ಹಿನ್ನಲೆಯಲ್ಲಿ ಸಂತ್ರಸ್ತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ.